ಉಪಚುನಾವಣೆ ತಾಲೀಮು: ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ, ಬಡವರಿಗೆ ಸೈಟ್ ಹಂಚುತ್ತೇನೆ, ಡಿಕೆಶಿ
ಬಡವರ ಜೀವನದಲ್ಲಿ ಬದಲಾವಣೆ ತರದಿದ್ದ ಮೇಲೆ ಶಾಸಕರಾಗಿ ಏನು ಪ್ರಯೋಜನ ನಾವ್ಯಾಕೆ ಶಾಸಕರಾಗಿ ಇರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ(ಜೂ.25): 'ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ, ಕನಿಷ್ಟ 100 ಕೋಟಿ ಅನುದಾನ ತಂದು ಕ್ಷೇತ್ರ ವನ್ನು ಅಭಿವೃದ್ಧಿಪಡಿಸುವೆ. ಕನಕಪುರ ರೀತಿ ಚನ್ನಪಟ್ಟಣದಲ್ಲೂ ಬಡವರಿಗೆ ಸೈಟ್ ಹಂಚುತ್ತೇನೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಚನ್ನಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ತಾಲೂಕಿನಲ್ಲಿ ಎಷ್ಟು ನಿವೇಶನ, ಬಗರ್ ಹುಕುಂ ಸಾಗುವಳಿ ಜಮೀನು ಹಂಚಲಾಗಿದೆ. ಅದಕ್ಕಾಗಿ ಎಷ್ಟು ಸಭೆ ನಡೆಸಲಾಗಿದೆ, ಎಷ್ಟು ಬಡವರಿಗೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಕೇಳಿದೆ. ಅಧಿಕಾರಿಗಳು ಜಮೀನು, ಸೈಟ್, ಸಾಲ ನೀಡಿಲ್ಲ, ಬಗರ್‌ಹುಕುಂ ಸಭೆ ನಡೆಸಲಾಗಿಲ್ಲ ಎಂದರು. ಬಡವರ ಜೀವನದಲ್ಲಿ ಬದಲಾವಣೆ ತರದಿದ್ದ ಮೇಲೆ ಶಾಸಕರಾಗಿ ಏನು ಪ್ರಯೋಜನ ನಾವ್ಯಾಕೆ ಶಾಸಕರಾಗಿ ಇರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಡಿಕೆಶಿ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ: ಡಿಕೆ ಸುರೇಶ್
ನನಗೆ ರಾಜಕಾರಣ ಮುಖ್ಯವಲ್ಲ, ಜನರಋಣ ತೀರಿಸಲು ಇಲ್ಲಿಗೆ ಬಂದಿದ್ದು, ಸಾಕಷ್ಟು ಸಮಸ್ಯೆಗಳನ್ನು ಜನ ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಇದಕ್ಕೆ ಟೀಕೆ ಮಾಡುತ್ತಾರೆ, ಮಾಡಲಿ. ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ ನಮ್ಮ ಜತೆ ಇದ್ದು, ನಮ್ಮ ಬದುಕಿನಲ್ಲಿ ಬದ ಲಾವಣೆ ತರುತ್ತೇನೆ ಎಂದು ಘೋಷಿಸಿದರು. ಸಂಸದರಾಗಿ ಡಿ.ಕೆ.ಸುರೇಶ್ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು. ಆದರೆ, ಈ ಬಾರಿ ಅವರನ್ನು ಸಂಸದರಾಗಿ ನೀವು ಲೋಕಸಭೆಗೆ ಕಳುಹಿಸಲಿಲ್ಲ ಎಂದು ಬೇಸರ ಪ್ರಕಪಡಿಸಿದರು.
ಇದು ನನ್ನ ಕನಸಿನ ಯೋಜನೆ:
'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಇದು ನನ್ನ ಕನಸಿನ ಯೋಜನೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲರೂ ಬಂದು ಸಮಸ್ಯೆ ಹೇಳಿಕೊಳ್ಳಿ. ಸದಾ ನಿಮ್ಮ ಸೇವೆಗೆ ಬಾಗಿಲು ತೆರೆದಿರುತ್ತದೆ. ಜನರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತೆ ಎಂದರು.
ನನ್ನ ಸ್ಪರ್ಧೆ ಕುರಿತು ಕಮಿಟಿ ತೀರ್ಮಾನ
ಚನ್ನಪಟ್ಟಣದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ಕ್ಷೇತ್ರದ ಉಪಚುನಾವ ಣೆಗೆ ಸಂಬಂಧಿಸಿದಂತೆ ಈಗ ಕಮಿಟಿ ರಚನೆ ಮಾಡಿದ್ದೇವೆ. ಸಾಕಷ್ಟು ಸಚಿವರು. ಶಾಸಕರು ಕಮಿಟಿಯಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅವರು ತೀರ್ಮಾನ ಮಾಡ್ತಾರೆ. ನಾನು ಸ್ಪರ್ಧೆ ಮಾಡಬೇಕು ಅಂದರೂ ಅದನ್ನ ಕಮಿಟಿ ತೀರ್ಮಾನ ಮಾಡುತ್ತೆ ಎಂದರು.