ಮುಂದಿನ ಸಿಎಂ ಸಿದ್ದರಾಮಯ್ಯ ಎಂದ ನಾಯಕರಿಗೆ ಬಿಗ್ ಶಾಕ್
* ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿವಾದ
* ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ದಿಢೀರ್ ಸುದ್ದಿಗೋಷ್ಠಿ
* ರೆಹಮಾನ್ ಖಾನ್ ಖಡಕ್ ಎಚ್ಚರಿಕೆ ಸಂದೇಶ
ಬೆಂಗಳೂರು, (ಜೂನ್.27): ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಕೂಗು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಇಂದು (ಭಾನುವಾರ) ದಿಢೀರ್ ಸುದ್ದಿಗೋಷ್ಠಿ ನಡೆಸಿ, ಶಾಸಕರುಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದರು.
ಕಾಂಗ್ರೆಸ್ ಕುಸ್ತಿಗೆ ಕಾರಣವಾಯ್ತು ಡಿಕೆಶಿ ಇಟ್ಟ ಈ 2 ಹೆಜ್ಜೆ..!
ಮುಂದಿನ ಮುಖ್ಯಮಂತ್ರಿ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ. ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ. ಆದರೆ ಮುಂದಿನ ಸಿಎಂ ಯಾರು ಎಂದು ಹೇಳಲು ನಿಮಗೆ ಅಧಿಕಾರ ಇಲ್ಲ ಎಂದು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಎಂದು ಸ್ಪಷ್ಟಪಡಿಸಿದರು.
ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ. ಇತ್ತೀಚೆಗೆ ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಶಾಸಕರು ಮುಂದಿನ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಅಶಿಸ್ತು. ಹೀಗಾಗಿ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ನಂತರ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಶಿಸ್ತು ಸಮಿತಿಯ ಸದಸ್ಯರೆಲ್ಲರೂ ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ ಎಂದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರಿಕಾ ಹೇಳಿಕೆ ನೀಡಿದ್ದರೂ ಸಹ ಮುಂದಿನ ಸಿಎಂ ಹೇಳಿಕೆ ಮುಂದುವರಿದಿದ್ದನ್ನೂ ಗಮನಿಸಿದ್ದೇವೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತೆ ಸಭೆ ಸೇರಿ ಹೇಳಿಕೆಗಳನ್ನ ಪರಿಶೀಲನೆ ಮಾಡ್ತೀವಿ. ಇಂದು ನಡೆದದ್ದು ವರ್ಚುವಲ್ ಮೀಟಿಂಗ್ ಆದ್ದರಿಂದ ಮುಂದಿನ ವಾರ ಮತ್ತೆ ಸಭೆ ಸೇರಲು ತೀರ್ಮಾನ ಮಾಡಲಾಗಿದೆ ಎಂದರು.
ಸಿಎಂ ಮಾಡೋದು ಪಬ್ಲಿಕ್ ಅಲ್ಲ, ಪಬ್ಲಿಕ್ ವೋಟ್ ಕೊಡೋದು ಪಾರ್ಟಿಗೆ. ಪಾರ್ಟಿ ಸಿಎಂನ ತೀರ್ಮಾನ ಮಾಡುತ್ತೆ. ಯಾರು ಮುಂದಿನ ಸಿಎಂ ಅಂತ ಹೇಳೋ ಅಧಿಕಾರ ನಿಮಗೆ ಇಲ್ಲ. ಪಕ್ಷದ ವಿಚಾರದಲ್ಲಿ ಪಕ್ಷದ ಸದಸ್ಯರು, ಶಾಸಕರು ಪಕ್ಷದ ಸಂವಿಧಾನ ಪಾಲಿಸಬೇಕು. ರಾಜ್ಯದ ಪ್ರಮುಖ ನಾಯಕರು ಒಗ್ಗಟ್ಟಾಗಿದ್ದರೆ ಅಧಿಕಾರಕ್ಕೆ ಬರಲು ಸಾಧ್ಯ ಎಂದು ತಿಳಿಸಿದರು.