ಬೆಂಗಳೂರು[ಜ.10]:  ಸಂಪುಟ ವಿಸ್ತರಣೆಯ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ತೆರಳುವುದು ಬಹುತೇಕ ಅನುಮಾನವಾಗಿದೆ.

ಬಹುಪಾಲು ವಿದೇಶಕ್ಕೆ ಹೋಗುವುದಿಲ್ಲ. ನಿಮ್ಮ ಜೊತೆಯೇ ಇರಬೇಕು ಎಂದುಕೊಂಡಿದ್ದೇನೆ ಎಂದು ಖುದ್ದು ಯಡಿಯೂರಪ್ಪ ಅವರೇ ಹೇಳುವ ಮೂಲಕ ತಮ್ಮ ಪ್ರವಾಸ ರದ್ದುಪಡಿಸುವ ಮುನ್ಸೂಚನೆ ನೀಡಿದ್ದಾರೆ. ಈ ತಿಂಗಳ 21ರಿಂದ ನಾಲ್ಕು ದಿನಗಳ ಕಾಲ ಮುಖ್ಯಮಂತ್ರಿಗಳು ಪ್ರವಾಸ ಕೈಗೊಳ್ಳಬೇಕಿತ್ತು.

ಇದೇ ವೇಳೆ ಮುಖ್ಯಮಂತ್ರಿಗಳು ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಸಮಾಲೋಚನೆ ನಡೆಸಲು ಪ್ರಯತ್ನಿಸಲಿದ್ದಾರೆ.

ಸಂಪುಟ ವಿಸ್ತರಣೆ ಚರ್ಚೆಗೆ 12, 13ಕ್ಕೆ ಸಿಎಂ ದಿಲ್ಲಿಗೆ?...

ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಮಾಡಿಯೇ ವಿದೇಶ ಪ್ರವಾಸ ಕೈಗೊಳ್ಳಿ ಎಂಬ ಒತ್ತಡವನ್ನು ಅರ್ಹ ಶಾಸಕರು ಮುಂದಿಟ್ಟಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಅದು ಸುಲಭದ ಸಂಗತಿಯಲ್ಲ. ಹೀಗಾಗಿ, ಗೊಂದಲ ಇಟ್ಟುಕೊಂಡು ವಿದೇಶ ಪ್ರವಾಸ ಕೈಗೊಳ್ಳುವುದೇ ಬೇಡ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಸ್ವಿಜರ್ಲೆಂಡ್‌ನಲ್ಲಿ ಅತ್ಯಧಿಕ ಶೀತದ ವಾತಾವರಣ ಇರುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಪ್ರವಾಸ ಸರಿಯಲ್ಲ ಎಂಬ ಕಾರಣಕ್ಕಾಗಿ ಪ್ರವಾಸ ರದ್ದುಪಡಿಸಲು ಯಡಿಯೂರಪ್ಪ ಬಯಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತ ಬೆಳವಣಿಗೆಗಳು ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಿರತರಾಗಿರುವ ಅಮಿತ್‌ ಶಾ ಅವರು ಇದುವರೆಗೆ ಕರ್ನಾಟಕದ ಸಂಪುಟ ವಿಸ್ತರಣೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲು ಹಸಿರು ನಿಶಾನೆ ತೋರಿಲ್ಲ. ಅವರು ಭೇಟಿಗೆ ಸಮಯ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಯಡಿಯೂರಪ್ಪ ಕಾಯುತ್ತಿದ್ದಾರೆ.

ಇನ್ನೆರಡು ದಿನಗಳಲ್ಲಿ ಅವರು ಭೇಟಿಗೆ ಸಮಯಾವಕಾಶ ಕಲ್ಪಿಸದಿದ್ದರೂ ರಾಜ್ಯದ ವಿವಿಧ ಯೋಜನೆಗಳ ಸಂಬಂಧ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡುವ ಸಲುವಾಗಿ ದೆಹಲಿಗೆ ತೆರಳಲು ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ. ದೆಹಲಿಗೆ ಹೋದ ಬಳಿಕ ಅಮಿತ್‌ ಶಾ ಅವರನ್ನು ಭೇಟಿಯಾಗಲು ಪ್ರಯತ್ನ ಮುಂದುವರೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಈವರೆಗೆ ಸಮಯ ನಿಗದಿಯಾಗಿಲ್ಲ. ಕೇಂದ್ರದ ವರಿಷ್ಠರಿಂದ ದಿನಾಂಕ ಲಭ್ಯವಾದರೆ ದೆಹಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಬಹುಪಾಲು ವಿದೇಶಕ್ಕೆ ಹೋಗುವುದಿಲ್ಲ. ನಿಮ್ಮ ಜೊತೆಯೇ ಇರಬೇಕು ಎಂದುಕೊಂಡಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ. ಈವರೆಗೆ ಸಮಯ ನಿಗದಿಯಾಗಿಲ್ಲ. ಕೇಂದ್ರದ ವರಿಷ್ಠರಿಂದ ದಿನಾಂಕ ಲಭ್ಯವಾದರೆ ದೆಹಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ