ಮೋದಿ ಒಂದೂ ಡ್ಯಾಂ ಕಟ್ಟಲಿಲ್ಲ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ಮೋದಿಯವರಿಗೆ ಬಿಜೆಪಿ, ಎನ್‌ಡಿಎ ಸೋಲು ಖಚಿತವಾಗಿದೆ. ಹೀಗಾಗಿ ಹತಾಶರಾಗಿ ದೇವರೇ ನನ್ನನ್ನು ಕಳುಹಿಸಿದ್ದು ಎಂದು ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ಸಂಭಾವ್ಯ ಸೋಲು ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರಿಗೂ ಈಗ ಸತ್ಯ ಗೊತ್ತಾಗಿದೆ ವ್ಯಂಗ್ಯವಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
 

Karnataka CM Siddaramaiah Slams PM Narendra Modi grg

ಬೆಂಗಳೂರು(ಮೇ.28):  ‘ದೇಶದ ಭವಿಷ್ಯ ರೂಪಿಸಿದ ಜವಾಹರಲಾಲ್‌ ನೆಹರು ಬಗ್ಗೆ ಮಾತನಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದೇ ಒಂದು ಅಣೆಕಟ್ಟು, ಸಾರ್ವಜನಿಕ ಉದ್ದಿಮೆ ಸ್ಥಾಪಿಸಿಲ್ಲ. ಬದಲಿಗೆ ನೆಹರು ಸ್ಥಾಪಿಸಿದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ಸೋಲುವುದು ಖಚಿತವಾಗಿ ದೇವರೇ ನನ್ನನ್ನು ಕಳುಹಿಸಿದ್ದು ಎಂದು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ನೆಹರು ಅವರು 17 ವರ್ಷಗಳ ದೀರ್ಘ ಕಾಲ ಪ್ರಧಾನಿಯಾಗಿ ಭಾರತವನ್ನು ವಿಶ್ವದ ಅತಿದೊಡ್ಡ ಹಾಗೂ ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದರು. ಅವರ ಅವಧಿಯಲ್ಲೇ ದೇಶದಲ್ಲಿರುವ ಬಹುತೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವ ನರೇಂದ್ರ ಮೋದಿ ಇವತ್ತಿನವರೆಗೂ ಒಂದೇ ಒಂದು ಅಣೆಕಟ್ಟನ್ನಾಗಲೀ, ಸಾರ್ವಜನಿಕ ಉದ್ದಿಮೆಯನ್ನಾಗಲಿ ಸ್ಥಾಪಿಸಲಿಲ್ಲ. ನೆಹರು ಅವರು ಕಟ್ಟಿದ ಸಂಸ್ಥೆಗಳನ್ನು ಮಾರಿದ್ದೇ ಇವರ ಸಾಧನೆ. ಇವರಿಗೆ ನೆಹರು ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ? ಎಂದು ಪ್ರಶ್ನಿಸಿದರು.

1 ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಆಗಿದೆ: ಸಿಎಂ ಸಿದ್ದರಾಮಯ್ಯ

ಮೋದಿ ಹತಾಶರಾಗಿದ್ದಾರೆ:

ಪ್ರಧಾನಿ ಮೋದಿಯವರಿಗೆ ಬಿಜೆಪಿ, ಎನ್‌ಡಿಎ ಸೋಲು ಖಚಿತವಾಗಿದೆ. ಹೀಗಾಗಿ ಹತಾಶರಾಗಿ ದೇವರೇ ನನ್ನನ್ನು ಕಳುಹಿಸಿದ್ದು ಎಂದು ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ಸಂಭಾವ್ಯ ಸೋಲು ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರಿಗೂ ಈಗ ಸತ್ಯ ಗೊತ್ತಾಗಿದೆ ವ್ಯಂಗ್ಯವಾಡಿದರು.

ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶವನ್ನು ಮಾರ್ಪಡಿಸಲು ಬಿಜೆಪಿ ಮತ್ತು ಮೋದಿ ಯತ್ನಿಸುತ್ತಿದ್ದು ಇದಕ್ಕೆ ಭಾರತೀಯರು ಅವಕಾಶ ಕೊಡುವುದಿಲ್ಲ. ಹೀಗಾಗಿ ದೇಶಾದ್ಯಂತ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದರು.

ನೆಹರು ಇತಿಹಾಸ ಅಳಿಸಲು ಸಾಧ್ಯವಿಲ್ಲ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿ ನಾಯಕರು ಇತಿಹಾಸ ತಿರುಚಲು, ನೆಹರು ಅವರ ಹೆಸರನ್ನು ಇತಿಹಾಸ ಪುಟಗಳಿಂದ ತೆಗೆಯಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಅವರು ಇನ್ನು ಎರಡು ಮೂರು ಜನ್ಮ ಎತ್ತಿ ಬಂದರೂ ಅದು ಸಾಧ್ಯವಿಲ್ಲ. ಪ್ರತಿ ರಾಜ್ಯದಲ್ಲೂ ಅವರದೇ ಆದ ಸಾಕ್ಷಿ ಗುಡ್ಡೆಗಳನ್ನು ಬಿಟ್ಟಿದ್ದಾರೆ. ನೆಹರು ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮಾರುತ್ತಾ ಬಂದಿದೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಎಚ್ಎಂಟಿ, ಎಚ್ಎಲ್, ಐಐಟಿ, ಬಿಎಚ್‌ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ನೆಹರು ಕಟ್ಟಿದ್ದಾರೆ. ಅಂದಿನ ಕಾಲದಲ್ಲಿ ಉದ್ಯೋಗ ಸೃಷ್ಟಿಸಿ ಬಡತನ ನಿವಾರಣೆಗೆ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬಲು ಈ ಸಾರ್ವಜನಿಕ ಉದ್ದಿಮೆ ಆರಂಭಿಸಿದರು. ಅವರು ಮಾಡಿದ ಆಸ್ತಿಗಳನ್ನು ಬಿಜೆಪಿಯವರು ಮಾರಿಕೊಳ್ಳುತ್ತಿದ್ದಾರೆ. ಈ ದೇಶದಲ್ಲಿ ಅವರ ಕೈಗಾರಿಕಾ ನೀತಿ, ವಿದೇಶಾಂಗ ನೀತಿ, ಅಭಿವೃದ್ಧಿ ನೀತಿಯಿಂದ ಅವರನ್ನು ಇಡೀ ವಿಶ್ವ ಬಹಳ ಗೌರವದಿಂದ ಕಾಣುತ್ತಿತ್ತು ಎಂದು ಹೇಳಿದರು.

ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ನೆಹರು ಬಗ್ಗೆ ಮಾತನಾಡುವ ಸಂಘಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಬದಲಿಗೆ ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಹಿಂದೂ ಮಹಾಸಭಾ ನಮ್ಮ ದೇಶದ ನಾಯಕತ್ವ ವಹಿಸಿಕೊಂಡಿದ್ದರೆ ಕಾಶ್ಮೀರ ನಮ್ಮ ಭಾಗವೇ ಆಗುತ್ತಿರಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ‘ಸೊನ್ನೆ ಪೋಸ್ಟರ್‌’

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ರಾಣಿ ಸತೀಶ್, ವಿಧಾನಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಜರಿದ್ದರು.

ಇವಿಎಂ ಹೆಚ್ಚು ಕಮ್ಮಿ ಆಗದಿದ್ದರೆ ನಮಗೆ ಅಧಿಕಾರ: ಡಿಕೆಶಿ

ಲೋಕಸಭೆ ಚುನಾವಣೆಯಲ್ಲಿ ಇವಿಎಂ ಹೆಚ್ಚುಕಮ್ಮಿಯಾಗದಿದ್ದರೆ ಜನ ನಮಗೆ ಸಂಪೂರ್ಣ ಆಶೀರ್ವಾದ ಮಾಡಲಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
ಸಂಸತ್ ಚುನಾವಣೆ ವೇಳೆ ಯುವಕರಿಗೆ ಹೆಚ್ಚು ಟಿಕೆಟ್ ನೀಡಿದ್ದೇವೆ. ಬಿಜೆಪಿಯವರು 15 ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಅವರಲ್ಲಿ ಆದ ಅಸಮಾಧಾನ, ಗೊಂದಲ ನಮ್ಮಲ್ಲಿ ಆಗಿಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios