Asianet Suvarna News Asianet Suvarna News

1 ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಆಗಿದೆ: ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ ಎಂಬುದು ಬಿಜೆಪಿಯವರ ಹಸಿ ಸುಳ್ಳು. ಯಾವುದೇ ಕಾರಣಕ್ಕೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 

Development beyond Expectations in 1 year in Karnataka Says CM Siddaramaiah grg
Author
First Published May 21, 2024, 8:48 AM IST | Last Updated May 21, 2024, 8:48 AM IST

ಬೆಂಗಳೂರು(ಮೇ.21):  ‘ಬಿಜೆಪಿಯ ಅಪಪ್ರಚಾರದ ನಡುವೆಯೂ ಒಂದು ವರ್ಷದ ಅವಧಿಯಲ್ಲೇ ಗ್ಯಾರಂಟಿ ಭರವಸೆ ಈಡೇರಿಸುವ ಜತೆಗೆ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರಿಗೆ ಆರ್ಥಿಕತೆ ಅರ್ಥ ಆಗುವುದಿಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ‘ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ ಎಂಬುದು ಬಿಜೆಪಿಯವರ ಹಸಿ ಸುಳ್ಳು. ಯಾವುದೇ ಕಾರಣಕ್ಕೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳಿಂದ ರಾಜ್ಯ ಖಜಾನೆಗೆ ನಿಜಕ್ಕೂ ತೊಂದರೆ ಆಗಿಲ್ವಾ..? ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದ್ರಾ ಸಿದ್ದು, ಡಿಕೆಶಿ..?

ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ನಮ್ಮ ಕಾರ್ಯಕ್ರಮಗಳು ಮನೆ-ಮನೆ ತಲುಪಿವೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ 54,374 ಕೋಟಿ ಖರ್ಚು ಮಾಡುವುದಾಗಿ ಹೇಳಿ 56274 ಕೋಟಿ ರು. ಖರ್ಚು ಮಾಡಿದ್ದೇವೆ. ನೀರಾವರಿಗೆ 16,360 ಕೋಟಿ ಖರ್ಚು ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿ 18,198 ಕೋಟಿ ಖರ್ಚು ಮಾಡಿದೆವು. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿತ್ತೇ ಎಂದು ಅಂಕಿ-ಅಂಶ ಸಹಿತ ತಿರುಗೇಟು ನೀಡಿದರು.

ನುಡಿದಂತೆ ನಡೆದು 7.5 ಕೋಟಿ ಜನರ ಆಶಯ ಈಡೇರಿಸಿದ್ದೇವೆ. ಬೊಮ್ಮಾಯಿ ಬಜೆಟ್ ಗಾತ್ರಕ್ಕಿಂತ ನಮ್ಮ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾಗಿದೆ. ನಮ್ಮ ಸರ್ಕಾರ ಪಾಪರ್ ಆಗಿದ್ದರೆ ಇದು ಸಾಧ್ಯವಿತ್ತಾ ಎಂದು ಬಿ.ಎಸ್.ಯಡಿಯೂರಪ್ಪ ಅವರ ಆರೋಪಗಳಿಗೆ ಕಿಡಿ ಕಾರಿದರು.

ಆರೋಗ್ಯ, ಶಿಕ್ಷಣ, ನೀರಾವರಿ, ಸಮಾಜ ಕಲ್ಯಾಣ, ಕೃಷಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಕೆಲಸಗಳು ಯಥೇಚ್ಛವಾಗಿ ನಡೆಯುತ್ತಿವೆ ಎಂದು ವಿವರಿಸಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ, ಉಪಾಧ್ಯಕ್ಷ ಆನಂದ ಬೈದನಮನೆ ಇದ್ದರು.

ಒಬಿಸಿ ಮೀಸಲು ಮುಸ್ಲಿಂರಿಗೆ ಕೊಡಲ್ಲ

ಚುನಾವಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂಬುದು ಹಸಿಸುಳ್ಳು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲಿಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಈ ಮಟ್ಟಕ್ಕೆ ಇಳಿದು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾವು ಪರಿಶಿಷ್ಟ ಜಾತಿ, ವರ್ಗ, ಒಬಿಸಿ ಗುತ್ತಿಗೆದಾರರಿಗೆ 1 ಕೋಟಿ ರು.ವರೆಗೆ ಕಾಮಗಾರಿ ಟೆಂಡರ್‌ಗಳಲ್ಲಿ ಮೀಸಲಾತಿ ನೀಡಿದ್ದೇವೆ. ಮೋದಿ ಅವರಿಗೆ ಹಿಂದೂ ಶೋಷಿತರ ಮೀಸಲಾತಿ ಬಗ್ಗೆ ಕಾಳಜಿಯಿದ್ದರೆ ಬಿಜೆಪಿ ಆಡಳಿತದ ಸರ್ಕಾರಗಳಲ್ಲಿ ಈ ನಿಯಮ ಜಾರಿಗೆ ತರಲಿ ಎಂದು ಸವಾಲು ಎಸೆದರು. ಗ್ರಾಮೀಣ ಭಾಗದ ದೇವಾಲಯಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬುದನ್ನು ಮರೆಮಾಚಿ ದೇವಸ್ಥಾನಗಳ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು. ಈ ಸುಳ್ಳುಗಳಿಗೆ ಜನ ಮರುಳಾಗಲ್ಲ ಎಂದರು.

ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಷ್ಠುರ ಕ್ರಮ:

ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳೋದಿಲ್ಲ. ಆದರೆ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 40% ಕಮಿಷನ್‌ ತನಿಖೆ ಶುರು ಮಾಡಿದ್ದೇವೆ ಎಂದು ಹೇಳಿದರು.

ಬರ ಪರಿಹಾರದಲ್ಲಿ ಕೇಂದ್ರದಿಂದ ದ್ರೋಹ:

ರಾಜ್ಯ ಭೀಕರ ಬರಕ್ಕೆ ತುತ್ತಾದಾಗಲೂ ರಾಜ್ಯದ ಪಾಲಿನ ಬರ ಪರಿಹಾರ ಕೊಡದೆ ಕೇಂದ್ರ ಸರ್ಕಾರ ದ್ರೋಹ ಮಾಡಿತು. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು. ಈ ವಿಚಾರದಲ್ಲಿ ಅಮಿತ್ ಶಾ, ಮೋದಿ, ನಿರ್ಮಲಾ ಸೀತಾರಾಮನ್ ಪದೇ ಪದೇ ರಾಜ್ಯಕ್ಕೆ ಬಂದು ಜನರಿಗೆ ಸುಳ್ಳು ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜ್ವಲ್‌ ವಿಷಯ ಗೊತ್ತಿದ್ದರೂ ಮೋದಿ ಪ್ರಚಾರ:

ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯ ದೇವರಾಜೇಗೌಡ ಅವರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿ ವಿಷಯ ಹೇಳಿದ್ದರು. ಅತ್ಯಾಚಾರಕ್ಕೆ ಒಳಗಾದವರು ಸಹ ದೂರು ಕೊಟ್ಟಿದ್ದರು. ದೇವರಾಜೇಗೌಡ ಪ್ರಕಾರ ಆರು ತಿಂಗಳ ಮೊದಲೇ ಈ ವಿಷಯ ಬಿಜೆಪಿಗೆ ಗೊತ್ತಿತ್ತು. ಆದರೂ ಬಿಜೆಪಿ ಪ್ರಜ್ವಲ್‌ಗೆ ಎನ್‌ಡಿಎ ಟಿಕೆಟ್‌ ನೀಡಿ ನರೇಂದ್ರ ಮೋದಿ ಅವರು ಪ್ರಜ್ವಲ್‌ ಗೆಲ್ಲಿಸಲು ಭಾಷಣ ಮಾಡಿದರು ಎಂದು ಟೀಕಿಸಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ‘ಸೊನ್ನೆ ಪೋಸ್ಟರ್‌’

ಕನಿಷ್ಠ 15 ಸ್ಥಾನ ಗೆಲ್ಲುತ್ತೇವೆ: ಸಿಎಂ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರಂತೆ 28 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಲ್ಲ. ಆದರೆ ಕನಿಷ್ಠ 15, ಗರಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ

‘ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರ ನಮ್ಮ ಮುಂದೆ ಇಲ್ಲ. ಆದರೆ ಹೈಕಮಾಂಡ್ ನಿರ್ದೇಶನದಂತೆ ನಮ್ಮ ಪಕ್ಷದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಂಪುಟ ಪುನರ್‌ರಚನೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

Latest Videos
Follow Us:
Download App:
  • android
  • ios