ಕರ್ನಾಟಕ ಮಾಡೆಲ್‌ ಹವಾ, ಗ್ಯಾರಂಟಿಗಳ ಬಗ್ಗೆ ದೇಶಕ್ಕೇ ಬೆರಗು, ಮೋದಿಗೆ ಸಿದ್ದು ಟಾಂಗ್‌

ಯೂರೋಪ್‌ ದೇಶದಲ್ಲಿನ ಗ್ಯಾರಂಟಿಗಳ ಪರಿಕಲ್ಪನೆ ನೋಡಿ, ಅಧ್ಯಯನ ಮಾಡಿ, ನಾವು ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಇದೇ ತರಹ ದೇಶದ ಇತರ ರಾಜ್ಯಗಳು ಕೂಡಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಉತ್ಸಾಹದಲ್ಲಿವೆ. ಇದು ಕರ್ನಾಟಕ ಮಾಡೆಲ್‌. ಈ ಹಿಂದೆ ಮೋದಿಯವರು ಗುಜರಾತ್‌ ಮಾಡೆಲ್‌ ಎನ್ನುತ್ತಿದ್ದರು. ಆದರೀಗ ದೇಶಾದ್ಯಂತ ಕರ್ನಾಟಕದ್ದೇ ಚರ್ಚೆ ಸಾಗಿದೆ. ನಿಮ್ಮ ಗುಜರಾತ್‌ ಮಾಡೆಲ್‌ ಜಾರಿಗೆ ಬರಲು ನಾವು ಬಿಡಲ್ಲ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

Karnataka CM Siddaramaiah Slams at PM Narendra Modi grg

ಕಲಬುರಗಿ(ಆ.06):  ಅಭಿವೃದ್ಧಿ ವಿಷಯದಲ್ಲಿ ದೇಶಾದ್ಯಂತ ಈಗ ‘ಕರ್ನಾಟಕ ಮಾಡೆಲ್‌’ ಹೆಸರುವಾಸಿಯಾಗುತ್ತಿದೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಒಂದರ ಮೇಲೊಂದು ಜಾರಿಗೆ ತರುತ್ತಿರುವ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಇಡೀ ದೇಶದಲ್ಲೇ ಬೆರಗುಗಣ್ಣಿನಿಂದ ನೋಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಕಲಬುರಗಿ ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 10 ಜನ ಫಲಾನುಭವಿಗಳಿಗೆ ‘ಶೂನ್ಯ ವಿದ್ಯು​ತ್‌ ಬಿಲ್‌’ ವಿತರಿಸುವ ಮೂಲಕ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಕುಟುಂಬಕ್ಕೆ ಮಾಸಿಕ-200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ 4ನೇ ಗ್ಯಾರಂಟಿಗೆ ಕಲಬುರಗಿಯಲ್ಲಿ ಅಧಿಕೃತ ಚಾಲನೆ: ಗೃಹಜ್ಯೋತಿ ಅರ್ಜಿಗೆ ನೋ ಡೆಡ್‌ಲೈನ್

ಯೂರೋಪ್‌ ದೇಶದಲ್ಲಿನ ಗ್ಯಾರಂಟಿಗಳ ಪರಿಕಲ್ಪನೆ ನೋಡಿ, ಅಧ್ಯಯನ ಮಾಡಿ, ನಾವು ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಇದೇ ತರಹ ದೇಶದ ಇತರ ರಾಜ್ಯಗಳು ಕೂಡಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಉತ್ಸಾಹದಲ್ಲಿವೆ. ಇದು ಕರ್ನಾಟಕ ಮಾಡೆಲ್‌. ಈ ಹಿಂದೆ ಮೋದಿಯವರು ಗುಜರಾತ್‌ ಮಾಡೆಲ್‌ ಎನ್ನುತ್ತಿದ್ದರು. ಆದರೀಗ ದೇಶಾದ್ಯಂತ ಕರ್ನಾಟಕದ್ದೇ ಚರ್ಚೆ ಸಾಗಿದೆ. ನಿಮ್ಮ ಗುಜರಾತ್‌ ಮಾಡೆಲ್‌ ಜಾರಿಗೆ ಬರಲು ನಾವು ಬಿಡಲ್ಲ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು.

ಬಿಜೆಪಿಗೆ ಹೊಟ್ಟೆ ಕಿಚ್ಚು:

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಜಾರಿಗೊಳಿಸುತ್ತದೆ. ಆದರೆ, ಅಭಿವೃದ್ಧಿ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಕಷ್ಟ, ಇದರಿಂದ ಕರ್ನಾಟಕ ದಿವಾಳಿಯಾಗುತ್ತೆ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಅವರಿಗೆ ನಾವು ಕೊಟ್ಟಭಾಷೆಯಂತೆ, ಜನರಿಗೆ ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.

ಈಗಾಗಲೇ ಗ್ಯಾರಂಟಿ ಯೋಜನೆಗಳು ಒಂದರ ಮೇಲೊಂದು ಜಾರಿಯಾಗುತ್ತಿವೆ. ಕರುನಾಡು ದಿವಾಳಿ ಆಯ್ತಾ?. ನಾವು ಅಭಿವೃದ್ಧಿಗೂ ಹಣ ಹೊಂದಿಸ್ತೀವಿ. ಪಂಚ ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸ್ತೀವಿ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಈ ಸಾಧನೆ ಕಂಡು ಬಿಜೆಪಿಗೆ ಹೊಚ್ಚೆಕಿಚ್ಚು ಶುರುವಾಗಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಪ್ರಣಾಳಿಕೆಯಲ್ಲಿ ಘೋಷಿಸಿರುವ 75 ಭರವಸೆಗಳನ್ನು ಬಜೆಟ್‌ ಮೂಲಕ ನಾವು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

‘ಶಕ್ತಿ’ ಯೋಜನೆಯಡಿ ಪ್ರತಿನಿತ್ಯ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ದೇವಸ್ಥಾನ ಸೇರಿ ಅವಶ್ಯಕತೆ ಇರುವ ಕಡೆಗೆ ಹೋಗುತ್ತಿದ್ದಾರೆ. ಇದು ಬಿಜೆಪಿ ನಾಯಕರ ಹೊಟ್ಟೆಉರಿಗೆ ಕಾರಣವಾಗಿದೆ ಎಂದು ಟೀಕಿಸಿದರು. ಬಿಜೆಪಿಗೆ ತಾಕತ್ತಿದ್ದರೆ ಕರ್ನಾಟಕದ ಐದು ಗ್ಯಾರಂಟಿಗಳನ್ನು ದೇಶದ ಇತರ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಈ ದೇಶವನ್ನು ದಿವಾಳಿ ಮಾಡಿದ್ದು ಮೋದಿಯವರ ಸರ್ಕಾರವೇ ಹೊರತು ನಾವು ಯಾರೂ ಅಲ್ಲ. ಈ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು, ಭ್ರಷ್ಟಚಾರ ಹಾಗೂ ನಿರುದ್ಯೋಗವನ್ನು ಹೆಚ್ಚಿಸುವುದರ ಜೊತೆಗೆ ಬಡವರಿಗೆ, ದಲಿತರಿಗೆ, ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ಆಳಿತದಲ್ಲಿದ್ದಾಗ ಕಲ್ಯಾಣ ಕರ್ನಾಟಕದ 99,600 ಸೇರಿದಂತೆ ರಾಜ್ಯದಲ್ಲಿ 14.52 ಲಕ್ಷ ಮನೆ ಕಟ್ಟಿಸಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿ 19,000 ಸೇರಿ ರಾಜ್ಯದಲ್ಲಿ 7 ಲಕ್ಷ ಮನೆ ಮಾತ್ರ ಕಟ್ಟಿಸಿದೆ. ಬಿಜೆಪಿ ಸರ್ಕಾರ ಈ ಭಾಗದ ಹೆಸರನ್ನು ಮಾತ್ರ ಬದಲಾಯಿಸಿದೆ. ಆದರೆ, ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ತನ್ನ ಬದ್ಧತೆ ತೋರಿಸಿದೆ ಎಂದು ಹೇಳಿದರು.

‘ಅನ್ನಭಾಗ್ಯ’ ಯೋಜನೆ ಜಾರಿ ವಿಚಾರದಲ್ಲಿ ಅಕ್ಕಿ ನೀಡದ ಕೇಂದ್ರ ಸರ್ಕಾರ, ಬಡವರ ವಿರೋಧಿಯಾಗಿದೆ. ಎಫ್‌ಸಿಐ (ಭಾರತೀಯ ಆಹಾರ ನಿಗಮ) ಮೊದಲು ಅಕ್ಕಿ ಕೊಡುವುದಾಗಿ ಹೇಳಿ, ಆಮೇಲೆ ನಿರಾಕರಿಸಿತು. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡಿದರು ಎಂದು ಆರೋಪಿಸಿದರು.

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವಹೇಳನ, ಆರಗ ಜ್ಞಾನೇಂದ್ರ ವಿರುದ್ಧ ಎಫ್‌ಐಆರ್‌

ಶೂನ್ಯ ವಿದ್ಯುತ್‌ ಬಿಲ್‌ ವಿತರಣೆ

ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಜ್ಯೋತಿ’ಯಡಿ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ಯೋಜನೆಗೆ ಶನಿವಾರ ಕಲಬುರಗಿಯಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. ವೇದಿಕೆ ಮೇಲೆಯೇ ನಿರ್ಮಿಸಲಾಗಿದ್ದ ಮಾದರಿ ಮನೆಯ ದೀಪ ಬೆಳಗುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ, 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ವಿದ್ಯುತ್‌ ಬಿಲ್‌ ವಿತರಿಸಲಾಯಿತು. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ. ಶರಣ ಪ್ರಕಾಶ್‌ ಪಾಟೀಲ್‌, ಈಶ್ವರ್‌ ಖಂಡ್ರೆ ಮತ್ತಿತರರಿದ್ದರು.

75 ಭರವಸೆ ಈಡೇರಿಸ್ತೀವಿ

ಗ್ಯಾರಂಟಿ ಯೋಜನೆಗಳು ಒಂದರ ಮೇಲೊಂದು ಜಾರಿಯಾಗುತ್ತಿವೆ. ಕರುನಾಡು ದಿವಾಳಿ ಆಯ್ತಾ? ನಾವು ಅಭಿವೃದ್ಧಿಗೂ ಹಣ ಹೊಂದಿಸ್ತೀವಿ. ಪಂಚ ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸ್ತೀವಿ. ಪ್ರಣಾಳಿಕೆಯಲ್ಲಿ ಘೋಷಿಸಿದ 75 ಭರವಸೆಗಳನ್ನೂ ಈಡೇರಿಸ್ತೀವಿ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸಾಧನೆ ಕಂಡು ಬಿಜೆಪಿಗೆ ಹೊಚ್ಚೆಕಿಚ್ಚು ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios