ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಘರ್ಷ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣದಿಂದ ಅಧಿಕಾರದ ಗದ್ದುಗೆಗೆ ಪೈಪೋಟಿ ತೀವ್ರವಾಗಿದೆ.
ನವದೆಹಲಿ (ನ.26): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಘರ್ಷ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣದಿಂದ ಅಧಿಕಾರದ ಗದ್ದುಗೆಗೆ ಪೈಪೋಟಿ ತೀವ್ರವಾಗಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ‘ಕರ್ನಾಟಕದಲ್ಲಿನ ಮುಖ್ಯಮಂತ್ರಿ ಸ್ಥಾನದ ಸಂಘರ್ಷವು ಬಹಿರಂಗವಾಗಿ ಮಾತಾಡುವ ವಿಷಯ ಅಲ್ಲವೇ ಅಲ್ಲ’ ಎಂದಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಕರ್ನಾಟಕದಲ್ಲಿನ ಸಂಘರ್ಷ ವಿಚಾರವು ಇಲ್ಲಿ ಚರ್ಚೆ ಮಾಡುವ ಅಥವಾ ಬಹಿರಂಗವಾಗಿ ಮಾತಾಡುವ ವಿಷಯವಲ್ಲ. ನ.26 ಸಂವಿಧಾನದ ದಿನಾಚರಣೆಗೆ ನನಗೆ ಆಹ್ವಾನ ಇದ್ದು, ಅದಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದು ಹೇಳಿದರು. ರಾಜ್ಯದ ವಿದ್ಯಮಾನಗಳ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಸಿ, ಪಕ್ಷದ ಅಧ್ಯಕ್ಷರು ಎಲ್ಲಿಗೂ ಹೋಗಿ ಚರ್ಚೆ ಮಾಡುವುದಿಲ್ಲ. ಆ ಬಗ್ಗೆ ಸಭೆ ನಡೆದರೆ ಚರ್ಚೆ ಆಗುತ್ತದೆ ಎಂದು ತಿಳಿಸಿದರು.
ಖರ್ಗೆ ಇಂದು ಬೆಂಗಳೂರಿಗೆ
ಮಂಗಳವಾರವಷ್ಟೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖರ್ಗೆ ಅವರು ಶುಕ್ರವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಂಗಳವಾರ ಬೆಳಗ್ಗೆ ಖರ್ಗೆ ಅವರು ದೆಹಲಿಗೆ ತೆರಳಿದ್ದರು. ಈ ವೇಳೆ ಸಂವಿಧಾನ ದಿನ ಇದೆ. ಹೀಗಾಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದರು. ಇದೀಗ ಬುಧವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


