ಬೆಂಗಳೂರು(ಫೆ.04): ಸಚಿವ ಸಂಪುಟ ವಿಸ್ತರಣೆಯ ದಿನ ಸಮೀಪಿಸುತ್ತಿರುವಂತೆ ನಿರ್ದಿಷ್ಟ ಖಾತೆಯನ್ನೇ ನೀಡಬೇಕು ಎಂದು ಕೆಲವರು ಪಟ್ಟು ಹಿಡಿದಿರುವುದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತಲೆ ಬಿಸಿ ಮಾಡಿದೆ.

ಒಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಕಸರತ್ತು, ಮತ್ತೊಂದೆಡೆ ನಿರ್ದಿಷ್ಟ ಖಾತೆಗಾಗಿ ಹೆಚ್ಚುತ್ತಿರುವ ಒತ್ತಡದಿಂದ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಪ್ರಮುಖವಾಗಿ ಬಿಜೆಪಿಗೆ ಸೇರ್ಪಡೆಯಾಗಿರುವ ಶಾಸಕರು ಪ್ರಬಲ ಖಾತೆಗಾಗಿ ಮುಖ್ಯಮಂತ್ರಿಗೆ ಸಾಕಷ್ಟುಒತ್ತಡ ಹೇರುತ್ತಿದ್ದಾರೆ, ಅದರಲ್ಲೂ ಇಂಧನ ಖಾತೆ ಪಡೆದುಕೊಳ್ಳಲು 4-5 ಶಾಸಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಂತ್ರಿಗಿರಿಗೆ ಕಲ್ಯಾಣ ಕರ್ನಾಟಕ ಶಾಸಕರ ಪಟ್ಟು

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬೃಹತ್‌ ನೀರಾವರಿ ಖಾತೆಗೆ ಹಾಗೂ ಶಾಸಕ ಬಿ.ಸಿ.ಪಾಟೀಲ್‌ ಗೃಹ ಖಾತೆಗಾಗಿ ಒತ್ತಡ ಹೇರುತ್ತಿದ್ದಾರೆ. ಎಸ್‌.ಟಿ.ಸೋಮಶೇಖರ್‌ ಬೆಂಗಳೂರು ನಗರಾಭಿವೃದ್ಧಿ ಹಾಗೂ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. ಇಂಧನ ಖಾತೆಗಾಗಿ ಆನಂದ್‌ ಸಿಂಗ್‌, ಸುಧಾಕರ್‌ ಸೇರಿದಂತೆ ಇತರರು ಪೈಪೋಟಿ ನಡೆಸುತ್ತಿದ್ದಾರೆ. ಇಂಧನ ಖಾತೆ ಸಿಗದಿದ್ದರೆ ಪ್ರವಾಸೋದ್ಯಮ ಅಥವಾ ಲೋಕೋಪಯೋಗಿ ಖಾತೆಯನ್ನಾದರೂ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಂಧನ ಇಲಾಖೆಗೆ ತೀವ್ರ ಒತ್ತಡ ಬಂದರೆ ಮುಖ್ಯಮಂತ್ರಿಗಳೇ ಈ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಸರ್ಕಸ್: ಈಗ ಯೋಗೇಶ್ವರ್‌ ಕಗ್ಗಂಟು!

ಮೂಲಗಳ ಪ್ರಕಾರ ಶಿವರಾಮ್‌ ಹೆಬ್ಬಾರ್‌ಗೆ ಕೃಷಿ, ಶ್ರೀಮಂತ್‌ ಪಾಟೀಲ್‌ಗೆ ಸಣ್ಣ ಕೈಗಾರಿಕೆ, ನಾರಾಯಣಗೌಡಗೆ ಸಣ್ಣ ನೀರಾವರಿ, ಬೈರತಿ ಬಸವರಾಜ್‌ಗೆ ನಗರಾಭಿವೃದ್ಧಿ, ಡಾ.ಕೆ.ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ, ಅರವಿಂದ ಲಿಂಬಾವಳಿಗೆ ಉನ್ನತ ಶಿಕ್ಷಣ, ಗೋಪಾಲಯ್ಯಗೆ ತೋಟಗಾರಿಕೆ ಖಾತೆ ಸಿಗುವ ಸಾಧ್ಯತೆ ಇದೆ. ಗೃಹ ಖಾತೆ ಕೇಳುತ್ತಿರುವ ಬಿ.ಸಿ.ಪಾಟೀಲ್‌ಗೆ ಲೋಕೋಪಯೋಗಿ ಅಥವಾ ತೋಟಗಾರಿಕೆ ಖಾತೆ ನೀಡಲು ಮುಖ್ಯಮಂತ್ರಿಗೆ ಒಲವು ಹೊಂದಿದ್ದಾರೆ.

ಬಾಯಿ ಬೊಂಬಾಯಿ ಸಂಸದ ಹೆಗಡೆಗೆ ದಿಲ್ಲಿಯಿಂದ ಬಂತು ನೋಟಿಸ್

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಎಸ್‌.ಟಿ.ಸೋಮಶೇಖರ್‌ಗೆ ನೀಡಲು ಮುಖ್ಯಮಂತ್ರಿಗಳು ಹಿಂದೇಟು ಹಾಕುತ್ತಿದ್ದು, ಸಹಕಾರ ಅಥವಾ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಗೃಹ ಸಚಿವರಾಗಿರುವ ಬಸವರಾಜ್‌ ಬೊಮ್ಮಾಯಿ ಅವರು ತಮಗೆ ಜನರ ಜೊತೆ ಸಂಪರ್ಕ ಇರುವ ಜಲಸಂಪನ್ಮೂಲ ಸೇರಿದಂತೆ ಪ್ರಮುಖ ಖಾತೆ ನೀಡಿ, ಗೃಹ ಖಾತೆಯ ಹೊಣೆಯನ್ನು ಬೇರೆಯವರಿಗೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆಂದು ಹೇಳಲಾಗಿದೆ.

ಸಂಭಾವ್ಯ ಸಚಿವರಿಗೆ ಸಂಭಾವ್ಯ ಖಾತೆ

- ರಮೇಶ್‌ ಜಾರಕಿಹೊಳಿ - ಬೃಹತ್‌ ನೀರಾವರಿ

- ಆನಂದ್‌ಸಿಂಗ್‌ - ಪ್ರವಾಸೋದ್ಯಮ/ಇಂಧನ

- ಬಿ.ಸಿ.ಪಾಟೀಲ್‌ - ತೋಟಗಾರಿಕೆ/ಇಂಧನ

- ಶ್ರೀಮಂತ್‌ ಪಾಟೀಲ್‌ - ಸಣ್ಣ ಕೈಗಾರಿಕೆ

- ಶಿವರಾಮ್‌ ಹೆಬ್ಬಾರ್‌ - ಕೃಷಿ

- ಎಸ್‌.ಟಿ.ಸೋಮಶೇಖರ್‌ - ಸಹಕಾರ/ಬೆಂಗಳೂರು ನಗರಾಭಿವೃದ್ಧಿ

- ಬೈರತಿ ಬಸವರಾಜ್‌ - ನಗರಾಭಿವೃದ್ಧಿ

- ನಾರಾಯಣ ಗೌಡ - ಸಣ್ಣ ನೀರಾವರಿ

- ಡಾ.ಕೆ.ಸುಧಾಕರ್‌ - ವೈದ್ಯಕೀಯ ಶಿಕ್ಷಣ

- ಅರವಿಂದ ಲಿಂಬಾವಳಿ - ಉನ್ನತ ಶಿಕ್ಷಣ

- ಗೋಪಾಲಯ್ಯ - ಕಾರ್ಮಿಕ/ ತೋಟಗಾರಿಕೆ

- ಉಮೇಶ್‌ ಕತ್ತಿ - ಪೌರಾಡಳಿತ/ ಸಕ್ಕರೆ