ಬೆಂಗಳೂರು(ಜು,26): ‘ಕೋವಿಡ್‌ ಸಂಕಷ್ಟ’ದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ 1 ವರ್ಷ ಪೂರೈಸಿದ್ದು, ಸಚಿವ ಸಂಪುಟಕ್ಕೆ ಒಂದಿಷ್ಟುಹೊಳಪು ನೀಡುವ ಚಿಂತನೆ ಆರಂಭವಾಗಿದೆ. ಈಗಿರುವ ಮೂರ್ನಾಲ್ಕು ಹಾಲಿ ಸಚಿವರ ತಲೆದಂಡ ಪಡೆದು ಸಮರ್ಥ ಸಚಿವರ ತಂಡ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ.

ಸಂಪುಟ ವಿಸ್ತರಣೆ ಕೈಗೊಳ್ಳುವ ಬದಲು ಸಣ್ಣ ಪ್ರಮಾಣದ ಸರ್ಜರಿ ಮೂಲಕ ಪುನಾರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ಆಗಸ್ಟ್‌ ಮೊದಲ ವಾರ ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಅವರ ಅವರ ಅಭಿಪ್ರಾಯ ತಿಳಿದುಕೊಳ್ಳಲು ಉದ್ದೇಶಿಸಿದ್ದಾರೆ.

ಸಚಿವರ ಲಾಕ್‌ಡೌನ್‌ ಸಲಹೆ ಒಪ್ಪದ ಸಿಎಂ ಬಿಎಸ್‌ವೈ

ಆದರೆ, ಈ ಬಗ್ಗೆ ಇದುವರೆಗೆ ಅಂತಿಮ ಎನ್ನುವಂಥ ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಂಡಿಲ್ಲ. ವರಿಷ್ಠರೊಂದಿಗೆ ಸಮಾಲೋಚಿಸಿದ ನಂತರ ಅವರ ಸಲಹೆ ಸೂಚನೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬ ನಿಲುವಿಗೆ ಬಂದಿದ್ದಾರೆ.

ಈಗ 6 ಸ್ಥಾನ ಖಾಲಿ:

ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಉಳಿದಿವೆ. ಈ ಆರು ಸ್ಥಾನಗಳನ್ನು ಭರ್ತಿ ಮಾಡುವ ಬದಲು ಈಗಿರುವ ಮೂರ್ನಾಲ್ಕು ಹಾಲಿ ಸಚಿವರ ತಲೆದಂಡ ಪಡೆದು ಪುನಾರಚನೆ ಮೂಲಕ ಸಮರ್ಥ ಸಚಿವರ ತಂಡ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ. ಪ್ರತಿಪಕ್ಷ ಕಾಂಗ್ರೆಸ್‌ ದಿನೇ ದಿನೇ ಬಲಗೊಳ್ಳುತ್ತಿರುವುದರಿಂದ ಆ ಪಕ್ಷದ ನಾಯಕರನ್ನು ಸಮರ್ಥವಾಗಿ ಎದುರಿಸುವ ಸಚಿವ ಸಂಪುಟ ಇರಬೇಕು ಎಂಬ ಮಾತು ಕೇಳಿಬಂದಿದೆ.

ಆದರೆ, ಮೂರ್ನಾಲ್ಕು ಹಾಲಿ ಸಚಿವರನ್ನು ಕೈಬಿಡಬೇಕಾದರೆ ಯಾರನ್ನು ಎಂಬುದು ದೊಡ್ಡ ಪ್ರಶ್ನೆಯಾಗಿ ಎದುರಾಗಲಿದೆ. ಇದುವರೆಗೆ ಇಂಥವರನ್ನೇ ಕೈಬಿಡಬೇಕಾಗುತ್ತದೆ ಎಂಬ ನಿರ್ದಿಷ್ಟಪ್ರಸ್ತಾಪ ಇಲ್ಲ. ಆದರೆ, ಒಂದು ವರ್ಷದ ಸಚಿವರ ಕಾರ್ಯವೈಖರಿಯನ್ನು ಪರಿಶೀಲಿಸಿ ಜಾತಿ ಮತ್ತು ಪ್ರಾದೇಶಿಕ ಅಸಮತೋಲನ ಉಂಟಾಗದಂತೆ ಎಚ್ಚರಿಕೆ ವಹಿಸಿ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.

ದೆಹಲಿ ಕ್ಯಾಬಿನೆಟ್ ಸಚಿವಾಲಯದ ಮೇಲ್ಚಾವಣಿ ಕುಸಿತ, ಓರ್ವನಿಗೆ ಗಾಯ!

ಪ್ರಬಲ ಆಕಾಂಕ್ಷಿಗಳು:

ಇತ್ತೀಚೆಗಷ್ಟೇ ವಿಧಾನಪರಿಷತ್‌ ಸದಸ್ಯರಾಗಿ ನೇಮಕಗೊಂಡಿರುವ ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಹಾಗೂ ಎಚ್‌.ವಿಶ್ವನಾಥ್‌ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಹಿಂದೆ ನೀಡಿದ ಭರವಸೆ ಈಡೇರಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಇನ್ನು ಸರ್ಕಾರ ಅಸ್ತಿತ್ವಕ್ಕೆ ತರಲು ಶ್ರಮಿಸಿದ್ದ ಸಿ.ಪಿ.ಯೋಗೇಶ್ವರ್‌ ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅಲ್ಲಿಗೆ ನಾಲ್ಕು ಸ್ಥಾನ ಆದಂತಾಯಿತು.

ಅವರನ್ನು ಹೊರತುಪಡಿಸಿ ಉಪಚುನಾವಣೆ ಬಾಕಿ ಇರುವ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದವರೆಗೆ ಕಾಯಬೇಕಾಗುತ್ತದೆ. ಅದಕ್ಕಾಗಿ ಎರಡು ಸ್ಥಾನ ಖಾಲಿ ಉಳಿಸಿಕೊಳ್ಳಬೇಕಾಗಬಹುದು. ಅಲ್ಲಿಗೆ ಆರು ಸ್ಥಾನ.

ಜೊತೆಗೆ ಪಕ್ಷದ ಹಿರಿಯ ಶಾಸಕರಾದ ಉಮೇಶ್‌ ಕತ್ತಿ, ಅರವಿಂದ್‌ ಲಿಂಬಾವಳಿ, ರಾಜುಗೌಡ ಮೊದಲಾದವರು ರೇಸ್‌ನಲ್ಲಿದ್ದಾರೆ. ಜೊತೆಗೆ ಎಸ್‌.ಅಂಗಾರ, ಹಾಲಾಡಿ ಶ್ರೀನಿವಾಸಶೆಟ್ಟಿಅವರಂಥ ಯಾವುದೇ ಲಾಬಿ ಮಾಡದ ಹಲವು ಹಿರಿಯ ಶಾಸಕರೂ ಇದ್ದಾರೆ. ಹೀಗಾಗಿ, ಪಕ್ಷದ ವರಿಷ್ಠರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಿದ ನಂತರವೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಲೆಕ್ಕಾಚಾರ

- ಬಲವರ್ಧನೆಗೆ ಕಾಂಗ್ರೆಸ್‌ ಯತ್ನಿಸುತ್ತಿರುವ ಹಿನ್ನೆಲೆ: ಸಮರ್ಥ ತಂಡ ಕಟ್ಟಲು ಯೋಜನೆ

- ಸದ್ಯಕ್ಕೆ ಸಂಪುಟದಲ್ಲಿ 6 ಸೀಟು ಖಾಲಿ. ಇದರ ಜತೆಗೆ 3-4 ಸಚಿವರ ತಲೆದಂಡ ಸಾಧ್ಯತೆ

- ಒಂದು ವರ್ಷದಲ್ಲಿ ಸಚಿವರ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಎಚ್ಚರಿಕೆಯ ನಿರ್ಧಾರ

- ಅಲ್ಲದೆ, ಜಾತಿ ಹಾಗೂ ಪ್ರಾದೇಶಿಕ ಅಸಮತೋಲನ ಉಂಟಾಗದಂತೆ ಲೆಕ್ಕಾಚಾರ

- ಸರ್ಕಾರ ರಚಿಸಲು ಶ್ರಮಿಸಿದ ಎಂಟಿಬಿ, ಶಂಕರ್‌, ಯೋಗೇಶ್ವರ್‌, ವಿಶ್ವನಾಥ್‌ ಪರ ಒಲವು

- ಉಳಿದ ಆರರಲ್ಲಿ ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್‌ಗೆ ಮೀಸಲಿಡಬೇಕಾದ ಸಾಧ್ಯತೆ

- ಇನ್ನು 4 ಸ್ಥಾನಕ್ಕೆ ಕತ್ತಿ, ಲಿಂಬಾವಳಿ, ಅಂಗಾರ, ಹಾಲಾಡಿ ಸೇರಿ ಹಿರಿಯ ಶಾಸಕರು ರೇಸಲ್ಲಿ