ಸಚಿವರ ಲಾಕ್‌ಡೌನ್‌ ಸಲಹೆ ಒಪ್ಪದ ಸಿಎಂ ಬಿಎಸ್‌ವೈ

ಸಚಿವರ ಪ್ರಸ್ತಾಪವನ್ನು ನಯವಾಗಿಯೇ ನಿರಾಕರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಲಾಕ್‌ಡೌನ್‌ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka CM BS Yediyurappa didn't agree Lockdown proposal from Ministers

ಬೆಂಗಳೂರು(ಜು.10): ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡು ತಲ್ಲಣವನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಮಾಡುವ ಬಗ್ಗೆ ಕೆಲವು ಸಚಿವರು ಪ್ರಸ್ತಾಪಿಸಿದರೂ ಮುಖ್ಯಮಂತ್ರಿಗಳು ಅದಕ್ಕೆ ಸಹಮತ ಸೂಚಿಸಲಿಲ್ಲ.

"

ಸಚಿವರ ಪ್ರಸ್ತಾಪವನ್ನು ನಯವಾಗಿಯೇ ನಿರಾಕರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಲಾಕ್‌ಡೌನ್‌ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಮತ್ತಷ್ಟುಕಠಿಣ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಅಲ್ಲದೇ, ತಜ್ಞರು ಸಹ ಲಾಕ್‌ಡೌನ್‌ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸೋಂಕು ಹರಡವುದನ್ನು ಮುಂದೂಡಬಹುದೇ ಹೊರತು ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದರು.

ಬೆಂಗಳೂರಲ್ಲಿ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವಲಯವಾರು ಸಚಿವರಿಗೆ ಉಸ್ತುವಾರಿ ನೀಡಿ ಕಡಿವಾಣಕ್ಕೆ ಪ್ರಯತ್ನಿಸಬಹುದು. ಜನತೆಯಲ್ಲಿ ಜಾಗೃತಿ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಮತ್ತೊಮ್ಮೆ ಲಾಕ್‌ಡೌನ್‌ ಮಾಡುವುದರಿಂದ ರಾಜ್ಯದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ರಾಜ್ಯದ ಆರ್ಥಿಕತೆಯನ್ನು ಗಮನಿಸಿ ಮತ್ತು ಜನರಿಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂಬುದರ ಕುರಿತು ಆಲೋಚನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಸಚಿವರಿಗೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದರು ಎಂದು ತಿಳಿದು ಬಂದಿದೆ.

4 ವಿದ್ಯುತ್‌ ಕಂಪನಿಗಳಿಗೆ 2,500 ಕೋಟಿ ರುಪಾಯಿ ಸಾಲ

ಶನಿವಾರದ ಲಾಕ್‌ಡೌನ್‌ ಚರ್ಚಿಸೋಣ: ಸದ್ಯಕ್ಕೆ ಭಾನುವಾರ ಒಂದು ದಿನ ಲಾಕ್‌ಡೌನ್‌ ಮಾಡಲಾಗುತ್ತಿದ್ದು, ಶನಿವಾರವೂ ಲಾಕ್‌ಡೌನ್‌ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳೋಣ. ಸಚಿವರಿಗೆ ಉಸ್ತುವಾರಿ ನೀಡಲಾಗಿದ್ದು, ಅವರು ನೀಡುವ ವರದಿಗನುಗುಣವಾಗಿ ಮುಂದಿನ ಹೆಜ್ಜೆ ಇಡೋಣ ಎಂದು ಯಡಿಯೂರಪ್ಪ ಹೇಳಿದರು ಎನ್ನಲಾಗಿದೆ.

ಈ ನಡುವೆ, ಖಾಸಗಿ ಆಸ್ಪತ್ರೆಗಳು ಕನಿಷ್ಠ ಮಾನವೀಯತೆಯನ್ನು ತೋರಿಸದೆ ಹಣ ವಸೂಲಿ ದಂಧೆ ಮಾಡುತ್ತಿವೆ. ಇಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಜತೆ ಕೈ ಜೋಡಿಸದಿರುವುದು ಮತ್ತು ಒಪ್ಪಂದದಂತೆ ನಡೆದುಕೊಳ್ಳುತ್ತಿಲ್ಲ ಎಂದು ಕೆಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹಲವೆಡೆ ನಿರೀಕ್ಷೆ ಮೀರಿ ಸೋಂಕು ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಅಮಾವೀಯತೆಯಿಂದ ನಡೆದುಕೊಂಡರೆ ಸರ್ಕಾರಕ್ಕೆ ಕೆಟ್ಟಹೆಸರು ಬರಲಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದುಪ್ಪಟ್ಟು ದರದಲ್ಲಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಸಚಿವರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios