ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮದವರೇ ಹೇಳುತ್ತಿದ್ದಾರೆ ಬಿಟ್ರೆ ನಮಗೇನು ಅದರ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರು (ಅ.10): ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮದವರೇ ಹೇಳುತ್ತಿದ್ದಾರೆ ಬಿಟ್ರೆ ನಮಗೇನು ಅದರ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಂತರ ಮಾತನಾಡಿದ ಅವರು, ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ, ಪುನರ್ ರಚನೆ ಯಾವಾಗ ಬೇಕಾದರೂ ಆಗಬಹುದು. ರಚನೆ ಯಾವಾಗ ಬೇಕಾದರೂ ಆಗಬಹುದು, ಔತಣಕೂಟಕ್ಕೆ ಸಿಎಂ ಸೋಮವಾರ ಕರೆದಿದ್ದಾರೆ. ಸಿಎಂ ಅವರು ಕರೆದು ಬೇಕಾದಷ್ಟು ವಿಚಾರಗಳು ಮಾತಾಡೋದಿದೆ. ಆದರೆ ನೀವೆಲ್ಲ ಸೇರಿಕೊಂಡು ಒಂದು ತೀರ್ಮಾನಕ್ಕೆ ಬಂದಂತಿದೆ ಎಂದರು.

ಸಚಿವ ಸಂಪುಟ ಪುನರ್ ರಚನೆ ಅಂತದ್ದೇನು ಇಲ್ಲ.ಸಭೆ ಕರೆದಿದ್ದಾರೆ, ಅಲ್ಲಿ ಏನೇನು ಚರ್ಚೆ ಆಗುತ್ತೆ ನೋಡೋಣ. ಪವರ್ ಶೇರಿಂಗ್ ವಿಚಾರದಲ್ಲಿ ಕೇಳುವ ಪ್ರಶ್ನೆಗೆ ನನ್ನಲ್ಲಿ ಉತ್ತರ ಇಲ್ಲ. ಯಾರು ಏನೇನೋ ಮಾತಾಡಿದ್ರೆ ಅದಕ್ಕೆಲ್ಲ ನಾನು ಉತ್ತರ ಕೊಡಕ್ಕಾಗಲ್ಲ. ಒಬ್ಬರು ಮುಖ್ಯಮಂತ್ರಿ ಇದ್ದಾಗ ಅವರ ಬದಲಾವಣೆ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ, ಇದು ಸ್ಪಷ್ಟ. ನಮ್ಮ ಹೈಕಮಾಂಡ್ ಇದ್ದಾರೆ, ಪಕ್ಷದ ಹಿರಿಯ ನಾಯಕರಿದ್ದಾರೆ, ಅವರು ತೀರ್ಮಾನವೇ ಅಂತಿಮ. ಈಗ ಆ ಬಗ್ಗೆ ಮಾತನಾಡುವುದು ಅಪ್ರಸ್ತುತ ಅನಾವಶ್ಯಕ ಅನಗತ್ಯ ಎಂದು ತಿಳಿಸಿದರು.

ಸಿದ್ದರಾಮಯ್ಯ ಮಾಸ್ ಲೀಡರ್

ಮತ್ತೇ ಗರಿಗೆದರಿದ ದಲಿತ ಮುಖ್ಯಮಂತ್ರಿ ವಿಚಾರವಾಗಿ, ರಹಸ್ಯ ಸಭೆ ನಡೆಸಿದ ದಲಿತ ಸಚಿವರ ಕುರಿತು, ಅವರು ಯಾವಾಗಲು ಸಭೆ ಸೇರಿ ಚರ್ಚೆ ನಡೆಸುತ್ತಲೇ ಇರುತ್ತಾರೆ. ಅವರೆಲ್ಲ ಸ್ನೇಹಿತರು, ಹಾಗೆ ಅವರು ಸೇರಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ಬಣ್ಣ ಕೊಡೋದು ಕತೆ ಕಟ್ಟೋದು ಸರಿಯಲ್ಲ. ಸಿದ್ದರಾಮಯ್ಯ ಅವರ ಬದಲಾವಣೆಯ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಒಬ್ರು ಮಾಸ್ ಲೀಡರ್, ಜನಪ್ರಿಯ ನಾಯಕ. ಆ ಕಾರಣ ಅವರ ಬದಲಾವಣೆ ಬಗ್ಗೆ ಯಾವುದೇ ಪ್ರಶ್ನೆ ಅಪ್ರಸ್ತುತ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.