ಬೀದರ್ನ ಜೋಡೆತ್ತುಗಳಿಗೊಲಿದ ಸಚಿವ ಸ್ಥಾನ: ಖಂಡ್ರೆಗೆ ಅರಣ್ಯ, ರಹೀಮ್ ಖಾನ್‌ಗೆ ಪೌರಾಡಳಿತ ಖಾತೆ ಸಾಧ್ಯತೆ
ಮತ್ತೊಮ್ಮೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ. ಅದೂ ಗಡಿ ಜಿಲ್ಲೆ ಕರ್ನಾಟಕದ ಕಿರೀಟ ಎಂದೇ ಖ್ಯಾತವಾದ ಬೀದರ್ಗೆ ಎರಡೆರೆಡು ಸಚಿವ ಸ್ಥಾನ. ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಬೀದರ್ ಶಾಸಕ ರಹೀಮ್ ಖಾನ್ ಇವರಿಬ್ಬರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಅಪ್ಪಾರಾವ್ ಸೌದಿ
ಬೀದರ್ (ಮೇ.28) : ಮತ್ತೊಮ್ಮೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ. ಅದೂ ಗಡಿ ಜಿಲ್ಲೆ ಕರ್ನಾಟಕದ ಕಿರೀಟ ಎಂದೇ ಖ್ಯಾತವಾದ ಬೀದರ್ಗೆ ಎರಡೆರೆಡು ಸಚಿವ ಸ್ಥಾನ. ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಬೀದರ್ ಶಾಸಕ ರಹೀಮ್ ಖಾನ್ ಇವರಿಬ್ಬರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸಕ್ತ ವಿಧಾನಸಭಾ ಚುನಾವಣೆ(Karnataka assembly electin)ಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡು ಮೂರರಿಂದ ಎರಡಕ್ಕೆ ಇಳಿದಿದ್ದರೂ ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈ ಇಬ್ಬರಿಗೂ ಸಚಿವ ಸ್ಥಾನ ನೀಡಿದಂತಿದ್ದರೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್(DK Shivakumar) ಜೋಡೆತ್ತಿನ ಸರ್ಕಾರದಿಂದ ಬೀದರ್ಗೆ ಜೋಡೆತ್ತುಗಳ ಬಂಪರ್ ಕೊಡುಗೆ ಎಂದರೆ ತಪ್ಪಾಗಲಿಕ್ಕಿಲ್ಲ.
ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ
ಭಾಲ್ಕಿ ವಿಧಾನಸಭಾ ಕ್ಷೇತ್ರ(Bhalki assembly constituency)ದಿಂದ ಸತತ 4 ಚುನಾವಣೆಗಳಲ್ಲಿ ಜಯಭೇರಿ ಬಾರಿಸಿರುವ ಈಶ್ವರ ಖಂಡ್ರೆ (Eshwar khandre)ಈ ಬಾರಿಯ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದ ಜಯ ದಾಖಲಿಸಿದ್ದರೆ, ಬೀದರ್ ಕ್ಷೇತ್ರದಿಂದ ರಹೀಮ್ ಖಾನ್ ಕೂಡ 4 ಬಾರಿ ಸತತ ಜಯ ದಾಖಲಿಸಿದ್ದು ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಾಧನೆ ಎಂದೆನ್ನಬಹುದು.
ಕಳೆದ 2016ರಲ್ಲಿ ಪೌರಾಡಳಿತ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿ ಅರಣ್ಯ, ಪರಿಸರ ವಿಜ್ಞಾನ ಹಾಗೂ ಪರಿಸರ ಖಾತೆಯ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿದ್ದು ಜಿಲ್ಲೆಯ ಅಭಿವೃದ್ಧಿಗೆ ಪೂರಕ ಯೋಜನೆಗಳ ಜಾರಿಯ ಭರವಸೆ ಮೂಡಿದೆ.
ಭಾಲ್ಕಿ ಕ್ಷೇತ್ರದಲ್ಲಿನ ಅರಣ್ಯೀಕರಣಕ್ಕೆ ಆದ್ಯತೆ, ರೈತರಿಗೆ ಕಾರಂಜಾದಿಂದ ನೀರು ಪೂರೈಕೆಗೆ ಪೂರ್ಣಪ್ರಮಾಣದ ವ್ಯವಸ್ಥೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಕಾರಂಜಾ ಸಂತ್ರಸ್ತರಿಗೆ ಪರಿಹಾರ, ಗೋದಾವರಿ ನದಿ ನೀರಿನ ಸದ್ಬಳಕೆಗೆ ಯೋಜನೆ, ಬೆಳೆ ಹಾನಿ ಪರಿಹಾರ, ರೈತ ಪರ ನೀರಾವರಿ ಯೋಜನೆಗಳ ಜಾರಿ ಸೇರಿದಂತೆ ರಾಜ್ಯದ ಹಲವಾರು ಪ್ರಗತಿ ಪರ ಕಾರ್ಯಕ್ರಮಗಳು ಹೀಗೆಯೇ ಸಾಲು ಸಾಲು ಸವಾಲುಗಳು ಸ್ವಾಗತಿಸುತ್ತಿವೆ.
ಹಾಗೆಯೇ ರಹೀಮ್ ಖಾನ್ 2018ರಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಖಾತೆಯ ಸಚಿವರಾಗಿದ್ದರು. ಈಗ ಮತ್ತೊಂದು ಅವಧಿಯ ಸಚಿವ ಸ್ಥಾನ ಲಭಿಸಿದ್ದು ಈ ಬಾರಿ ಪೌರಾಡಳಿತ ಖಾತೆ ಸಚಿವರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸುವುದು ಅಲ್ಲದೆ ಬೀದರ್ನಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ, ಬೀದರ್ ಮಿನಿ ವಿಧಾನ ಸೌಧ ನಿರ್ಮಾಣ, ಐತಿಹಾಸಿಕ ಕರೇಜ್ ಪುನರುಜ್ಜೀವನ, ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅಗತ್ಯ ಕಾರ್ಯ ಯೋಜನೆ, ನಿರುದ್ಯೋಗ ಸಮಸ್ಯೆಗೆ ಪರಿಹಾರೋಪಾಯಗಳು ಹೀಗೆಯೇ ಹತ್ತು ಹಲವು ಕಾರ್ಯ ಅಲ್ಲದೆ ಯೋಜನೆಗಳ ಜಾರಿ ಸೇರಿದಂತೆ ರಾಜ್ಯದ ಹಲವಾರು ಪ್ರಗತಿ ಪರ ಕಾರ್ಯಕ್ರಮಗಳ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ಅಗತ್ಯತೆಯಿದೆ.
ಹೀಗಾಗಿ ಒಟ್ಟಾರೆ ಜಿಲ್ಲೆಯ ಈ ಇಬ್ಬರು ಸಚಿವರುಗಳ ಮೇಲೆ ಜನತೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೋದ್ಯಮ, ನೀರಾವರಿ, ಶೈಕ್ಷಣಿಕ ಪ್ರಗತಿ, ಕಾರಂಜಾ ಸಂತ್ರಸ್ತರ ಪರಿಹಾರ, ರಸ್ತೆ ಸುಧಾರಣೆ ಸೇರಿದಂತೆ ಮತ್ತಿತರವುಗಳ ಕಾರ್ಯಕ್ರಮ, ಕಾಮಗಾರಿಗಳತ್ತ ಹೆಚ್ಚಿನ ಒಲುವು ತೋರಬೇಕಿದೆ.
ನಮ್ಮ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್‌ನ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿ, ಪಕ್ಷ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡಿದ್ದೇನೆ, ಒಳ್ಳೆಯ ಆಡಳಿತ ಕೊಡುತ್ತೇವೆ. ನಮ್ಮ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮವಹಿಸುತ್ತೇನೆ, ಹಗರಣ ರಹಿತ ದಕ್ಷ ಆಡಳಿತ ನೀಡ್ತೇವೆ.
-ಈಶ್ವರ ಖಂಡ್ರೆ, ನೂತನ ಸಚಿವ
ಕಲಬುರಗಿ: ಡಾ. ಶರಣಪ್ರಕಾಶ ಪಾಟೀಲರಿಗೆ ಮತ್ತೆ ಮಂತ್ರಿ ಭಾಗ್ಯ!
ಎರಡನೇ ಬಾರಿಗೆ ಸಚಿವನನ್ನಾಗಿ ಮಾಡಿರುವ ಕಾಂಗ್ರೆಸ್‌ನ ವರಿಷ್ಠರಿಗೆ ನಾನು ಚಿರ ಋುಣಿಯಾಗಿದ್ದೇನೆ. ಬೀದರ್ನ ಸರ್ವ ಜನಾಂಗದ ಜನರನ್ನು ಜೊತೆಗೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತ ಮುಂದಾಗುತ್ತೇನೆ. ರಾಜ್ಯದ ಅಭಿವೃದ್ಧಿಯ ಜೊತೆ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೂ ಹೆಚ್ಚಿನ ಶ್ರಮ ಹಾಕುತ್ತೇನೆ. ಸಚಿವನಾಗಿ ಕಾರ್ಯ ಮಾಡುವ ಅವಕಾಶದ ಸದ್ಬಳಕೆ ಮಾಡಿಕೊಂಡು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ.
-ರಹೀಮ್ ಖಾನ್, ನೂತನ ಸಚಿವ