ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ಕ್ಷಣಗಣನೆ ಆರಂಭವಾಗಿದ್ದು, ನೂತನ ಸಚಿವರ ಪಟ್ಟಿ ಅಂತಿಮಗೊಳಿಸಲು ಮಂಗಳವಾರ ರಾತ್ರಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಸಿದ್ಧಪಡಿಸಿದ ಪಟ್ಟಿಗಳನ್ನು ಪರಿಶೀಲಿಸಿ, ಅಂತಿಮ

  • ಬಹು ದಿನಗಳಿಂದ ಕಾದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕೂಡಿಬಂದ ಸಮಯ
  • ಮಂಗಳವಾರ ರಾತ್ರಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಜತೆ ರಾಜ್ಯ ನಾಯಕರ ಭೇಟಿ ನಿಗದಿ
  • ಈ ಸಭೆಯಲ್ಲಿ ರಾಗಾ, ಖರ್ಗೆ, ಸಿಎಂ ಡಿಎಶಿ, ಸಿದ್ದು, ಹರಿ, ಉಸ್ತುವಾರಿ ಸುರ್ಜೇವಾಲಾ ಭಾಗಿ
  • ಮೂವರು ನಾಯಕರು ಮತ್ತು ಹೈಕಮಾಂಡ್‌ ಸಿದ್ಧಪಡಿಸಿದ ಪ್ರತ್ಯೇಕ ಪಟ್ಟಿ ರಾಗಾ ಪರಿಶೀಲನೆ
  • ಬಳಿಕ ಜಿಲ್ಲಾವಾರು, ಸಮುದಾಯವಾರು ಪ್ರಾತಿನಿಧ್ಯ ಪರಿಗಣಿಸಿ ಅಂತಿಮ ಪಟ್ಟಿ ಸಿದ್ಧಕ್ಕೆ ತಯಾರಿ

ಬೆಂಗಳೂರು (ಜು.28): ಸಚಿವ ಸಂಪುಟ ವಿಸ್ತರಣೆ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರೊಂದಿಗೆ ರಾಜ್ಯ ನಾಯಕರ ನಿರ್ಣಾಯಕ ಸಭೆ ಇಂದು (ಮಂಗಳವಾರ) ರಾತ್ರಿ 8 ಗಂಟೆಗೆ ನಡೆಯಲಿದೆ.

ಸಭೆಯಲ್ಲಿ ನೂತನ ಸಚಿವರ ಪಟ್ಟಿ ಅಂತಿಮಗೊಂಡರೆ ಬಹುತೇಕ ಗುರುವಾರ ಸಂಜೆ ಲೋಕಭವನದಲ್ಲಿ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾಲಿ ಇರುವ 20 ಸ್ಥಾನಗಳ ಪೈಕಿ 18 ಸಚಿವರ ಪಟ್ಟಿಯನ್ನು ಮಾತ್ರ ಅಂತಿಮಗೊಳಿಸಿ, ಎರಡು ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಸೋಮವಾರವೇ ದೆಹಲಿಗೆ ತಲುಪಿದ್ದರು.

ಸೋಮವಾರ ರಾಜ್ಯ ನಾಯಕರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರು ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ಗುರುವಾರ ನೀಟ್‌ ಪರೀಕ್ಷೆ ಕುರಿತ ಚರ್ಚೆ ನಡೆಯಲಿದ್ದು, ಇದಕ್ಕಾಗಿ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಸೋಮವಾರ ಸಂಜೆ ಅವರು ರಾಜ್ಯ ನಾಯಕರ ಭೇಟಿಗೆ ಲಭ್ಯವಾಗಿರಲಿಲ್ಲ. ಇನ್ನು ಸಂಸತ್‌ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಸಭೆ ನಿಗದಿ ಮಾಡಿದ್ದು, ಈ ವೇಳೆ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ.

ರಾಜ್ಯ ನಾಯಕರ ಪಟ್ಟಿ ಸಲ್ಲಿಕೆ:

ಈ ನಡುವೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 30 ಮಂದಿ ಶಾಸಕರ ಹೆಸರನ್ನು ಶಿಫಾರಸು ಮಾಡಿ ಪಟ್ಟಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 18 ಸ್ಥಾನಗಳಿಗೆ 30 ಮಂದಿಯ ಹೆಸರು ಶಿಫಾರಸು ಮಾಡಿದ್ದು, ಈ ಪೈಕಿ 18 ಮಂದಿಯನ್ನು ಹೈಕಮಾಂಡ್‌ ಅಂತಿಮಗೊಳಿಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ ಈ ಪಟ್ಟಿಯಲ್ಲಿ ಇರುವ ಪ್ರತಿಯೊಬ್ಬರ ಬಗ್ಗೆಯೂ ಅವರನ್ನು ಏಕೆ ಸಚಿವರನ್ನಾಗಿ ಆಯ್ಕೆ ಮಾಡಲು ಶಿಫಾರಸು ಮಾಡಲಾಗುತ್ತಿದೆ ಎಂಬ ಬಗ್ಗೆ ಸವಿರವಾಗಿ ಲಿಖಿತ ವಿವರಣೆಯನ್ನೂ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಸಿದ್ದರಾಮಯ್ಯ 7-8 ಮಂದಿಗೆ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದು, ಮಂಗಳವಾರ ರಾತ್ರಿ ನಿಗದಿ ಆಗಿರುವ ಸಭೆಯಲ್ಲಿ ಅವರಿಗೆ ಯಾಕೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಮೌಖಿಕವಾಗಿ ತಮ್ಮ ಅಭಿಪ್ರಾಯ ಸಲ್ಲಿಸುವ ಸಾಧ್ಯತೆಯಿದೆ. ಇನ್ನು ಬಿ.ಕೆ. ಹರಿಪ್ರಸಾದ್ ಅವರು ಸಹ ಕೆಲ ಹೆಸರನ್ನು ಶಿಫಾರಸು ಮಾಡಲಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ತಮ್ಮದೇ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿ ಆಧರಿಸಿ ಹೈಕಮಾಂಡ್‌ ಸಹ ಸಚಿವರಾಗುವ ಅರ್ಹತೆ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಈ ಪಟ್ಟಿ ಹಾಗೂ ರಾಜ್ಯ ನಾಯಕರು ನೀಡಿರುವ ಪಟ್ಟಿಯ ಜತೆಗೆ ತುಲನೆ ಮಾಡಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯ ಮಂಗಳವಾರ ಸಂಜೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಮೈಸೂರಿಗೆ ಸಿದ್ದು?

ತಮ್ಮ ಪುತ್ರ ದಿ. ರಾಕೇಶ್‌ ಸಿದ್ದರಾಮಯ್ಯ ಅವರ ನಿಧನರಾದ 10ನೇ ವರ್ಷದ ಸ್ಮರಣಾರ್ಥ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ಬೆಳಗ್ಗೆ 9ಕ್ಕೆ ದೆಹಲಿಯಿಂದ ಹೊರಡಲಿರುವ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದು ನಂತರ ಸಂಜೆ ವೇಳೆಗೆ ಪುನಃ ದೆಹಲಿಗೆ ವಾಪಸಾಗಲಿದ್ದಾರೆ. ನಂತರ ಮಂಗಳವಾರ ಸಂಜೆ ನಿಗದಿಯಾಗಿರುವ ರಾಹುಲ್‌ಗಾಂಧಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜು.30ಕ್ಕೆ ರಾಕೇಶ್ ಸಿದ್ದರಾಮಯ್ಯ ಅವರ ನಿಧನರಾಗಿ 10 ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ವಿಮಾನದಲ್ಲಿ ರಾಜ್ಯಪಾಲ ವಾಪಸ್?

ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸೋಮವಾರ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಜು.29ರಂದು ಬುಧವಾರ ರಾತ್ರಿ 8ರವರೆಗೆ ಗುರು ಪೂರ್ಣಿಮಾ ನಡೆಯಲಿದೆ. ಒಂದು ವೇಳೆ, ಕಾಂಗ್ರೆಸ್‌ ಹೈಕಮಾಂಡ್‌ ಸಚಿವ ಸಂಪುಟ ಸದಸ್ಯರ ಪಟ್ಟಿ ಅಖೈರುಗೊಳಿಸಿ ಪದಗ್ರಹಣಕ್ಕೆ ಒಪ್ಪಿಗೆ ನೀಡಿದರೆ ಗುರುವಾರವೇ ಆಗಮಿಸಿ ಪ್ರಮಾಣ ವಚನ ಸಮಾರಂಭ ನಡೆಸಿಕೊಡುವಂತೆ ರಾಜ್ಯ ಕಾಂಗ್ರೆಸ್‌ ವರಿಷ್ಟರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ ಎನ್ನಲಾಗಿದೆ. ಹೀಗಾದಲ್ಲಿ, ರಾಜ್ಯಪಾಲರನ್ನು ವಿಶೇಷ ವಿಮಾನದಲ್ಲಿ ಕರೆತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.