ಬೆಂಗಳೂರು :  ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕ ಮುಂಬರುವ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಸೋಮವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರೇ ಖುದ್ದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯನ್ನು ತಕ್ಷಣವೇ ಕೈಗೆತ್ತಿಕೊಂಡರೆ ಅದರಿಂದ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಉಭಯ ನಾಯಕರು ವಿಸ್ತೃತವಾಗಿ ಚರ್ಚಿಸಿದರು ಎಂದು ತಿಳಿದು ಬಂದಿದೆ.

ಕೂಡಲೇ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಮಾಡಿದರೆ ಬೆಳಗಾವಿ ಅಧಿವೇಶನದಲ್ಲಿ ಸಂದರ್ಭದಲ್ಲಿ ಸರ್ಕಾರ ಮತ್ತು ಎರಡೂ ಪಕ್ಷಗಳ ವಿರುದ್ಧವಾಗಿ ಟೀಕೆಗಳು ವ್ಯಕ್ತವಾಗಬಹುದು. ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಅಧಿವೇಶನದ ಸಂದರ್ಭದಲ್ಲಿ ಹೋರಾಟಗಳನ್ನು ಆರಂಭಿಸಬಹುದು. ಈಗಾಗಲೇ ಕಬ್ಬು ಬೆಳೆಗಾರರ ಹೋರಾಟ ನಡೆಯುತ್ತಿದ್ದು, ಇದನ್ನೇ ದಾಳವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆಗಳು ಉಂಟಾಗಬಹುದು. ಹೀಗಾಗಿ, ಬೆಳಗಾವಿ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಣೆ ಒಳಿತು ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಕ್ರಾಂತಿ ನಂತರ ವಿಸ್ತರಣೆ:

ಡಿ.10ರಿಂದ 20ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ. ಡಿ.14ರಿಂದ ಶೂನ್ಯ ಮಾಸ ಆರಂಭವಾಗಲಿದ್ದು, ಶೂನ್ಯ ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಒಂದು ವೇಳೆ, ಅಧಿವೇಶನ ಮುಗಿದ ಬಳಿಕ ಪ್ರಕ್ರಿಯೆ ನಡೆಸದಿದ್ದರೆ, ಸಂಕ್ರಾಂತಿ ಹಬ್ಬದ ವೇಳೆಗೆ ವಿಸ್ತರಣೆ ಮಾಡಿದರೂ ಆಶ್ಚರ್ಯವಿಲ್ಲ. ಹೀಗಾಗಿ, ಉಪ ಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ಕಾತುರದಿಂದ ಕಾಯುತ್ತಿರುವ ಸಚಿವ ಸ್ಥಾನ ಆಕಾಂಕ್ಷಿಗಳು ಇನ್ನೂ ಎರಡು ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು ಎನ್ನಲಾಗುತ್ತಿದೆ.

ಆದರೆ, ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಸದ್ಯದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸಿಎಂ ಹೇಳಿಕೆಗೆ ಸಿದ್ದು ಸಿಟ್ಟು

ನಾಲ್ಕು ವರ್ಷದಿಂದ ಕಬ್ಬಿನ ಬಾಕಿ ಹಣ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದಿನ ಸರ್ಕಾರವನ್ನು ಟೀಕಿಸಿರುವುದಕ್ಕೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸ್ವತಃ ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಸಮಾಧಾನಪಡಿಸಲು ಪ್ರಯತ್ನ ಮಾಡಿದ್ದಾರೆ. ಸಾಧ್ಯವಾಗದಿದ್ದಾಗ ಖುದ್ದಾಗಿ ಕುಮಾರಕೃಪ ಅತಿಥಿಗೃಹಕ್ಕೆ ಭೇಟಿ ನೀಡಿ ಸಮಾಧಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.