ಬೆಂಗಳೂರು [ಡಿ.10]:  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗೆದ್ದು ‘ಅರ್ಹ’ರಾದ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಂಬಂಧ ಶೀಘ್ರ ಸಂಪುಟ ವಿಸ್ತರಣೆ ಮಾಡುವುದು ನಿಶ್ಚಿತವಾಗಿದೆ.

ಈ ಸಂಬಂಧ ಎರಡು ಅಥವಾ ಮೂರು ದಿನಗಳಲ್ಲಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಅದಾದ ಬಳಿಕ ಸಂಪುಟ ವಿಸ್ತರಣೆ ನಡೆಸಿ ಗೆದ್ದವರಿಗೆ ಸಚಿವ ಸ್ಥಾನ ದಯಪಾಲಿಸಲಿದ್ದಾರೆ. ಎಲ್ಲವೂ ಒಂದು ವಾರದಲ್ಲಿ ಮುಗಿಯುವ ನಿರೀಕ್ಷೆಯಿದೆ. ಇದೇ ವೇಳೆ ಸಂಪುಟ ಪುನಾರಚನೆಯ ಪ್ರಸ್ತಾಪ ಕೇಳಿಬಂದಿದ್ದರೂ ಅದರ ಸಾಧ್ಯತೆ ಕಡಿಮೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಹಾಗೆ ನೋಡಿದರೆ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿ ಒಪ್ಪಿಗೆ ಪಡೆಯುವ ಸನ್ನಿವೇಶವೇನೂ ಇಲ್ಲ. ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆದ್ದ ಬಳಿಕ ಸಚಿವ ಸ್ಥಾನ ನೀಡುವುದಕ್ಕೆ ವರಿಷ್ಠರು ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ. ಆದರೂ ಔಪಚಾರಿಕವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಖುದ್ದಾಗಿ ಸಮಾಲೋಚನೆ ನಡೆಸಲು ಮುಖ್ಯಮಂತ್ರಿಗಳು ಬಯಸಿದ್ದಾರೆ. ಒಂದು ವೇಳೆ ಮುಖಾಮುಖಿ ಭೇಟಿ ಸಾಧ್ಯವಾಗದಿದ್ದರೆ ದೂರವಾಣಿಯ ಮೂಲಕವೇ ಮಾತುಕತೆ ನಡೆಸಿ ಪ್ರಕ್ರಿಯೆ ಮುಗಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಉಪಚುನಾವಣೆ ಫಲಿತಾಂಶ, ಹೌದೋ ಹುಲಿಯಾ, ಅಬ್ಬಬ್ಬಾ ಎಂತೆಂಥಾ ಟ್ರೋಲ್!...

ಬಿಜೆಪಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ವೇಳೆಯೇ ಎಲ್ಲವನ್ನೂ ಅಳೆದು ತೂಗಿ ಅನರ್ಹ ಶಾಸಕರಿಗಾಗಿ ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ, ಈಗ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಕಾಕ್‌ನ ರಮೇಶ್‌ ಜಾರಕಿಹೊಳಿ, ಅಥಣಿಯ ಮಹೇಶ್‌ ಕುಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್‌, ಯಲ್ಲಾಪುರದ ಶಿವರಾಂ ಹೆಬ್ಬಾರ್‌, ಹಿರೇಕೆರೂರಿನ ಬಿ.ಸಿ.ಪಾಟೀಲ್‌, ವಿಜಯನಗರದ ಆನಂದ್‌ ಸಿಂಗ್‌, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್‌, ಕೆ.ಆರ್‌.ಪುರದ ಬೈರತಿ ಬಸವರಾಜು, ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ, ಯಶವಂತಪುರದ ಎಸ್‌.ಟಿ.ಸೋಮಶೇಖರ್‌, ಕೆ.ಆರ್‌.ಪೇಟೆಯ ನಾರಾಯಣಗೌಡ ಅವರು ಸಚಿವರಾಗುವುದು ಬಹುತೇಕ ನಿಶ್ಚಿತವಾಗಿದೆ.

ಚುನಾವಣಾ ಪ್ರಚಾರದ ವೇಳೆಯೂ ಯಡಿಯೂರಪ್ಪ ಅವರು ಸಚಿವ ಸ್ಥಾನ ನೀಡುವ ಬಗ್ಗೆ ಬಹಿರಂಗವಾಗಿಯೇ ಹಲವು ಬಾರಿ ಪ್ರಸ್ತಾಪಿಸಿದ್ದರು. ಆ ಮೂಲಕ ತಾವು ಹಿಂದೆ ನೀಡಿರುವ ಭರವಸೆ ಈಡೇರಿಸುವುದಾಗಿ ವಾಗ್ದಾನವನ್ನೂ ಮಾಡಿದ್ದರು. ಇದೀಗ ಸೋಮವಾರ ಫಲಿತಾಂಶ ಹೊರಬಿದ್ದ ಬಳಿಕವೂ ಯಡಿಯೂರಪ್ಪ ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಶೀಘ್ರ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ.

ಈ ಸಂಪುಟ ವಿಸ್ತರಣೆ ಅಥವಾ ‘ಅರ್ಹ’ ಶಾಸಕರನ್ನು ಸಂಪುಟದಲ್ಲಿ ಒಳಗೊಳ್ಳುವ ಬಗ್ಗೆ ಹಾಲಿ ಸಚಿವರು ಹಾಗೂ ಬಿಜೆಪಿ ನಾಯಕರು ಮುಂಚಿತವಾಗಿಯೇ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆ ಹೆಚ್ಚು ಗೊಂದಲಕ್ಕೀಡು ಮಾಡಲಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.