ತುಮಕೂರು [ಡಿ.13]:  ಎಂಟು ದಿನಗಳ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಬೆಂಗಳೂರು ಮತ್ತು ತುಮಕೂರಿನ ಸಮಾರಂಭಗಳಲ್ಲಿ ಪ್ರತ್ಯೇಕವಾಗಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಜಾರ್ಖಂಡ್‌ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರು ಪ್ರಚಾರದಿಂದ ಬಂದ ಬಳಿಕ ಭೇಟಿಗೆ ಕಾಲಾವಕಾಶ ಕೋರಿದ್ದೇನೆ ಎಂದರು.

ಮುಂದಿನ ನಾಲ್ಕೈದು ದಿನ ನಾನು ದೆಹಲಿಗೆ ಹೋಗುವುದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಮಯಾವಕಾಶ ನೀಡಿ ದೆಹಲಿಗೆ ಬರುವಂತೆ ಸೂಚಿಸಿದಾಗ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಅಂತಿಮವಾಗಲಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ನಗೆ ಚಟಾಕೆ: ಈಶ್ವರಪ್ಪ ಡೈಲಾಗ್ ಸಕ್ಕತ್, ಸಿದ್ದು ಕೊಟ್ರು ಚಮಕ್ ವಿಡಿಯೋ...

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಪಚುನಾವಣೆಯಲ್ಲಿ ಸೋತವರಿಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಮೊನ್ನೆ ನಡೆದ ಉಪಚುನಾವಣೆಯಲ್ಲಿ ಹದಿನೈದು ಸ್ಥಾನಗಳ ಪೈಕಿ ಹನ್ನೆರಡರಲ್ಲಿ ಗೆದ್ದಿದ್ದೇವೆ. ಅಷ್ಟುಸ್ಥಾನ ಗೆಲ್ಲದೇ ಇದ್ದಿದ್ದರೆ ಇಂದು ಇಷ್ಟೊಂದು ಸಮಾಧಾನದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಮೂರೂವರೆ ವರ್ಷ ಯಾವುದೇ ತಂಟೆ, ತಕರಾರು ಇಲ್ಲದೆ ಕೆಲಸ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಫೆಬ್ರವರಿ ತಿಂಗಳಿನಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸಾಕಷ್ಟುಯೋಜನೆಗಳನ್ನು ಘೋಷಿಸುವ ಸುಳಿವು ನೀಡಿದ ಯಡಿಯೂರಪ್ಪ, ನಾಡಿನ ರೈತರ ಸಂಕಷ್ಟಬಗೆಹರಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಗುರಿಯಿದ್ದು, ಸ್ವಾಭಿಮಾನದಿಂದ ಬದುಕುವುದಕ್ಕೆ ಏನು ನಿರೀಕ್ಷೆ ಮಾಡುತ್ತೀರೋ ಅದನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.