ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆಯಲಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ನಗರದ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಮತ್ತು ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಸೂಚಿಸಿದ್ದಾರೆ.
ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಅಧಿಕೃತ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇಂದು (ಸೋಮವಾರ) ಸಂಜೆ 04:00 ಗಂಟೆಗೆ ನಿಗದಿಯಾಗಿದೆ. ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲೋಕಭವನದ ಸುಂದರ ಗಾಜಿನ ಮನೆಯಲ್ಲಿ (Glass House) ಈ ಹೈಪ್ರೊಫೈಲ್ ಕಾರ್ಯಕ್ರಮ ಜರುಗಲಿದ್ದು, ಭದ್ರತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ಪೊಲೀಸರು ನಗರದ ಕೇಂದ್ರ ವ್ಯಾಪಾರ ವಲಯದ (CBD) ಪ್ರಮುಖ ರಸ್ತೆಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದ್ದಾರೆ.
ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
ಲೋಕಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕೇವಲ ಅಧಿಕೃತ ಆಹ್ವಾನಿತರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಈ ಸಮಾರಂಭ ವೀಕ್ಷಿಸಲು ನೇರ ಅವಕಾಶ ಇರುವುದಿಲ್ಲ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೇಸ್‌ಕೋರ್ಸ್ ರಸ್ತೆ ಹಾಗೂ ಸುತ್ತಮುತ್ತಲಿನ ರಾಜಮಾರ್ಗಗಳಲ್ಲಿ ವಿಐಪಿ ವಾಹನಗಳ ಸಂಚಾರ ಹೆಚ್ಚಾಗಲಿದ್ದು, ಸಂಚಾರ ದಟ್ಟಣೆ (Traffic Jam) ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮಧ್ಯಾಹ್ನ 2:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಸಾರ್ವಜನಿಕ ವಾಹನ ಸಂಚಾರದಲ್ಲಿ ಮಹತ್ವದ ಮಾರ್ಪಾಡುಗಳನ್ನು ಮಾಡಲಾಗಿದೆ.
ಇದಲ್ಲದೆ, ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಮಧ್ಯಾಹ್ನ 2:00 ರಿಂದ ರಾತ್ರಿ 10:00 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರೀ ವಾಹನಗಳ (Heavy Vehicles) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಾಹನ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವಿವರಗಳು
ಸಮಾರಂಭಕ್ಕೆ ಅಧಿಕೃತ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಸಾಮಾನ್ಯ ಸಾರ್ವಜನಿಕರ ಎಲ್ಲಾ ಮಾದರಿಯ ವಾಹನಗಳಿಗೆ ಕೆಳಗಿನ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ನಿರ್ಬಂಧಿತ ರಸ್ತೆ / ಜಂಕ್ಷನ್ : ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಮತ್ತು ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ.
ಪರ್ಯಾಯ ಸಂಚಾರ ಮಾರ್ಗ : ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರದ ಕಡೆಗೆ ಬಲತಿರುವು ಅಥವಾ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡತಿರುವು ಪಡೆದು ಮುಂದುವರಿಯಬಹುದು.
ನಿರ್ಬಂಧಿತ ರಸ್ತೆ / ಜಂಕ್ಷನ್: ಬಾಳೇಕುಂದಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ಮಾರ್ಗ
ಪರ್ಯಾಯ ಸಂಚಾರ ಮಾರ್ಗ: ಕ್ರೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಚಲಿಸಬಹುದು.
ನಿರ್ಬಂಧಿತ ರಸ್ತೆ / ಜಂಕ್ಷನ್: ಕ್ರೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಮತ್ತು ಲೋಕ ಭವನದ ಕಡೆಗೆ ಬರುವ ಮಾರ್ಗ (ಸೆಂಟ್ ಮಾರ್ಕ್ಸ್ ರಸ್ತೆ ಸೇರಿ).
ಪರ್ಯಾಯ ಸಂಚಾರ ಮಾರ್ಗ: ಕ್ರೀನ್ಸ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಅನಿಲ್ ಕುಂಬ್ಳೆ ಜಂಕ್ಷನ್ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಸಂಚರಿಸಬೇಕು.
ಪ್ರಮುಖ ವಲಯಗಳ ಪರ್ಯಾಯ ಮಾರ್ಗಗಳು
ಹಲಸೂರು ಮತ್ತು ಹಳೆ ವಿಮಾನ ನಿಲ್ದಾಣ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಾಗೂ ಬಸವೇಶ್ವರ ಜಂಕ್ಷನ್ ಕಡೆಗೆ ಹೋಗುವವರು: ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು, ಶಿವಾಜಿನಗರ ಬಸ್ ನಿಲ್ದಾಣದ ಮೂಲಕ ಬಾಳೆಕುಂದ್ರಿ ಜಂಕ್ಷನ್ ತಲುಪಿ, ಅಲ್ಲಿಂದ ಕನ್ನಿಂಗ್ ಹ್ಯಾಂ ರಸ್ತೆ ಹಾಗೂ ವಸಂತನಗರದ ಮುಖಾಂತರ ಹೆಬ್ಬಾಳ ರಸ್ತೆಯನ್ನು ಸಂಪರ್ಕಿಸಬಹುದು.
ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಹೆಬ್ಬಾಳ ಕಡೆಗೆ ಸಂಚರಿಸುವವರು: ನಗರದ ಒಳಗಿನ ದಟ್ಟಣೆ ತಪ್ಪಿಸಲು ಹಲಸೂರು ಕೆರೆ (Ulsoor Lake) ಮಾರ್ಗವಾಗಿ ಟಿನ್ ಫ್ಯಾಕ್ಟರಿ ಜಂಕ್ಷನ್ ತಲುಪಿ, ಅಲ್ಲಿಂದ ನೇರವಾಗಿ ಹೊರ ವರ್ತುಲ ರಸ್ತೆ (Ring Road) ಮೂಲಕ ಹೆಬ್ಬಾಳ ಕಡೆಗೆ ಚಲಿಸುವುದು ಸೂಕ್ತ.
ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆ ಕಡೆಯಿಂದ ಬರುವ ವಾಹನಗಳು: ಬಿ.ಆರ್.ವಿ. ಜಂಕ್ಷನ್‌ನಿಂದ ಶಿವಾಜಿನಗರ ಬಸ್ ನಿಲ್ದಾಣದ ಮಾರ್ಗವಾಗಿ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ ಮತ್ತು ವಸಂತನಗರದ ಮುಖಾಂತರ ಹೆಬ್ಬಾಳದ ಕಡೆಗೆ ಸಾಗಬಹುದು.
ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ (No Parking) ಸಂಪೂರ್ಣ ನಿಷೇಧ
ಸಂಚಾರ ಸುಗಮಗೊಳಿಸುವ ಸಲುವಾಗಿ ಇಂದು ಮಧ್ಯಾಹ್ನದಿಂದಲೇ ಕೆಳಕಂಡ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ:
- ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ (ಬಾಳೇಕುಂದ್ರಿ ವೃತ್ತದಿಂದ ಕೆ.ಆರ್. ವೃತ್ತದವರೆಗೆ)
- ಲೋಕಭವನ ರಸ್ತೆ (ಬಿ.ಆರ್.ವಿ. ವೃತ್ತದಿಂದ ಲೋಕಭವನ ಜಂಕ್ಷನ್ ವರೆಗೆ)
- ಎಲ್.ಹೆಚ್. ರಸ್ತೆ (ಲೋಕಭವನ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದವರೆಗೆ)
- ಕ್ರೀನ್ಸ್ ರಸ್ತೆ (ಬಾಳೇಕುಂದ್ರಿ ಜಂಕ್ಷನ್‌ನಿಂದ ಕ್ರೀನ್ಸ್ ವೃತ್ತದವರೆಗೆ)
- ಪ್ಯಾಲೇಸ್ ರಸ್ತೆ (ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರದ ಕೆಳಸೇತುವೆಯವರೆಗೆ)
- ದೇವರಾಜ ಅರಸ್ ರಸ್ತೆ (ಚಾಲುಕ್ಯ ವೃತ್ತದಿಂದ ಎಂ.ಎಸ್. ಬಿಲ್ಡಿಂಗ್ ಒಳಭಾಗದ ರಸ್ತೆ ಒಳಗೊಂಡಂತೆ)
- ಪಾರ್ಕ್ ಹೌಸ್ ರಸ್ತೆ (ಎ.ಜಿ.ಎಸ್. ಜಂಕ್ಷನ್‌ನಿಂದ ಸಿ.ಐ.ಡಿ. ವೃತ್ತದವರೆಗೆ)
- ಕಬ್ಬನ್ ಉದ್ಯಾನವನದ (Cubbon Park) ಒಳಗಿನ ಎಲ್ಲಾ ಲಿಂಕ್ ರಸ್ತೆಗಳು
- ಮಿಲ್ಲರ್ ರಸ್ತೆ (ಎಲ್.ಆರ್.ಡಿ.ಇ. ಜಂಕ್ಷನ್‌ನಿಂದ ಬಸವೇಶ್ವರ ವೃತ್ತದವರೆಗೆ)
- ಇನ್‌ಫೆಂಟ್ರಿ ರಸ್ತೆ (ಅಲಿ ಆಸ್ಕರ್ ರಸ್ತೆ ಜಂಕ್ಷನ್‌ನಿಂದ ಸಂಚಾರ ಪೊಲೀಸ್ ಪ್ರಧಾನ ಕಚೇರಿ ಜಂಕ್ಷನ್ ವರೆಗೆ)
- ಅಲಿ ಆಸ್ಕರ್ ರಸ್ತೆ (ರಾಜಭವನ ಜಂಕ್ಷನ್‌ನಿಂದ ಅಲಿ ಆಸ್ಕರ್ ಕ್ರಾಸ್ ವರೆಗೆ)
- ಕೆ.ಜಿ. ರಸ್ತೆ (ಪೊಲೀಸ್ ಕಾರ್ನರ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ)
- ಹಳೇ ಅಂಚೆ ಕಚೇರಿ ರಸ್ತೆ (ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್. ವೃತ್ತದವರೆಗೆ)
- ನೃಪತುಂಗ ರಸ್ತೆ (ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್ ವರೆಗೆ)
- ಕಸ್ತೂರಿಬಾ ರಸ್ತೆ (ಹಡ್ಸನ್ ವೃತ್ತದಿಂದ ಕ್ರೀನ್ಸ್ ವೃತ್ತದವರೆಗೆ)
- ಮಲ್ಯ ಆಸ್ಪತ್ರೆ ರಸ್ತೆ (ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ)
- ಆರ್.ಆರ್.ಎಂ.ಆರ್. ರಸ್ತೆ (ಆರ್.ಆರ್.ಎಂ.ಆರ್. ಜಂಕ್ಷನ್‌ನಿಂದ ಹಡ್ಸನ್ ವೃತ್ತದವರೆಗೆ)
- ಕಬ್ಬನ್ ರಸ್ತೆ (ಸಿ.ಟಿ.ಓ. ವೃತ್ತದಿಂದ ಮಣಿಪಾಲ್ ಸೆಂಟರ್ ವರೆಗೆ)
- ಟಿ. ಚೌಡಯ್ಯ ರಸ್ತೆ (ಹಳೇ ಹೈಗ್ರೌಂಡ್ಸ್ ಜಂಕ್ಷನ್‌ನಿಂದ ಕಾವೇರಿ ಜಂಕ್ಷನ್ ವರೆಗೆ)
- ರಮಣ ಮಹರ್ಷಿ ರಸ್ತೆ (ಕಾವೇರಿ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ)
ಅಧಿಕೃತ ವಾಹನ ನಿಲುಗಡೆ (Parking) ಸ್ಥಳಗಳ ವಿವರ
ಸಮಾರಂಭಕ್ಕೆ ಬರುವ ಗಣ್ಯರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಪೊಲೀಸರು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.
1.ಕಾರ್ಯಕ್ರಮದ ಅಧಿಕೃತ 'ಪಾಸ್' ಹೊಂದಿರುವ ವಾಹನಗಳಿಗೆ:
- ವಿಧಾನಸೌಧದ ಆವರಣದಲ್ಲಿರುವ ಸಿಮೆಂಟ್ ಪಾರ್ಕಿಂಗ್ ಸ್ಥಳ.
- ವಿಕಾಸಸೌಧದ ಸುತ್ತಮುತ್ತಲಿನ ನಿಗದಿಪಡಿಸಿದ ಜಾಗ.
- ರಾಜಭವನದ ಹಿಂಭಾಗದಲ್ಲಿರುವ ಎಲ್.ಹೆಚ್. (LH) ವಾಹನ ನಿಲುಗಡೆ ಪ್ರದೇಶ.
- ಜವಾಹರಲಾಲ್ ನೆಹರೂ ತಾರಾಲಯದ (Planetarium) ಆವರಣ.
2.'ಪಾಸ್' ಇಲ್ಲದೆ ಬರುವ ಇತರೆ ವಾಹನಗಳಿಗೆ:
- ಕೊಂಡಜ್ಜಿ ಭವನದ ಆವರಣ.
- ಶಿವಾಜಿನಗರ ಬಸ್ ನಿಲ್ದಾಣದ ಮೇಲ್ಭಾಗದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ (MLCP) ಸಂಕೀರ್ಣ.
- ಕಂಠೀರವ ಕ್ರೀಡಾಂಗಣದ (Kanteerava Stadium) ಆವರಣ.
- ಯು.ಬಿ. ಸಿಟಿ (UB City) ಪಾರ್ಕಿಂಗ್ ಸ್ಥಳ.
- ಸರ್ಕಾರಿ ಕಲಾ ಕಾಲೇಜು ಆವರಣ.
- ಬಿಬಿಎಂಪಿ ಕಾರ್ಪೊರೇಷನ್ ಕಚೇರಿ ಆವರಣ.
- ಪ್ಯಾಲೇಸ್ ಮೈದಾನದ (Palace Grounds) ಗೇಟ್ ನಂಬರ್ 2, 3 ಮತ್ತು 4 ರ ಒಳಭಾಗ.
ವಾಹನ ಸವಾರರು ಜವಾಬ್ದಾರಿಯುತವಾಗಿ ಸಹಕರಿಸಿ, ಸೂಚಿತ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನೆರವಾಗಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ವಿನಂತಿಸಿದೆ.


