ಬೆಂಗಳೂರು [ಡಿ.09]: ರಾಜ್ಯದಲ್ಲಿ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆಡಳಿತ ಪಕ್ಷ ಬಿಜೆಪಿಯತ್ತ ಜನರು ಒಲವು ತೋರಿಸಿದ್ದು, 15 ಕ್ಷೇತ್ರಗಳಲ್ಲಿ 12 ಸ್ಥಾನ ಬಿಜೆಪಿಗೆ ಒಲಿದಿದೆ.  ಅನರ್ಹರಾಗಿ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಿಸಿದವರು ಇದೀಗ ಅರ್ಹರಾಗಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಸುಧಾಕರ್ 
ಚಿಕ್ಕಬಳ್ಳಾಪುರ
ಬಿಜೆಪಿ

ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಧಾಕರ್ ಇದೀಗ ವಿಜಯಿಯಾಗಿದ್ದಾರೆ. ನರೇಂದ್ರ ಮೋದಿ ಅವರ ಜನಪರ ಕಾರ್ಯಗಳಿಂದ ಹಾಗೂ ಜನರ ಆಶಿರ್ವಾದದಿಂದ ತಾವು ಗೆಲುವು ಸಾಧಿಸಿದ್ದಾಗಿ ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 
ಯಡಿಯೂರಪ್ಪ ಮುಖಾಂತರ ಕೊಟ್ಟ ಭರವಸೆ ಈಡೇರಿಸುತ್ತೇ ಎಂದರು. ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದರು.

ಅರುಣ್ ಕುಮಾರ್
ರಾಣೆಬೆನ್ನೂರು
ಬಿಜೆಪಿ

ಶಂಕರ್ ಅನರ್ಹತೆಯಿಂದ ತೆರವಾದ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಜಯಗಳಿಸಿದ್ದು, ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಕ್ಷೇತ್ರದ ಜನರು ತಮ್ಮ ಕೈ ಹಿಡಿದಿದ್ದು ಈ ಗೆಲುವು ಖುಷಿ ಕೊಟ್ಟಿದೆ ಎಂದರು.  ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರಿರಾಮಲು ಅವರಿಗೆ ಧನ್ಯವಾದ ತಿಳಿಸಿದ್ದಾರೆ.  ನನ್ನ ವಿರೋಧಿಗಳು ಯಾವುದೇ ರೀತಿಯ ಕುತಂತ್ರ ಮಾಡಿದರು ಏನು ಮಾಡಲಾಗಲಿಲ್ಲ. ನನ್ನ ಮುಂದಿನ ಗುರಿ ಸ್ವಚ್ಚ ಭಾರತ ಕ್ಕೆ ಕೈ ಜೋಡಿಸುವುದು, ಜೊತೆಗೆ ಕ್ಷೆತ್ರದ ಅಭಿವೃದ್ದಿ ಕಡೆ ನಮ್ಮ ಕೆಲಸ ಎಂದರು.


ಮಹೇಶ್ ಕುಮಟಳ್ಳಿ
ಅಥಣಿ
ಬಿಜೆಪಿ

ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಅನರ್ಹತೆಯಿಂದ ಮತ್ತೊಮ್ಮೆ ಚುನಾವಣೆ ನಡೆದಿದ್ದು, ಮತ್ತೊಮ್ಮೆ ಜನರು ಕುಮಟಳ್ಳಿ ಕೈ ಹಿಡಿದಿದ್ದಾರೆ. ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಲಕ್ಷ್ಮಣ್ ಸವದಿ, ಯಡಿಯೂರಪ್ಪ ನೇತೃತ್ವದಲ್ಲಿ ತಮಗೆ ಗೆಲುವು ಒಲಿದಿದೆ. ವಿರೋಧ ಪಕ್ಷಗಳ ಟೀಕೆಗೆ ಜನರು ತಕ್ಕ ಉತ್ತರ ನೀಡಿದ್ದಾರೆ.  ಕ್ಷೇತ್ರದ ಕಾರ್ಯಕರ್ತರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವುದಾಗಿ ಹೇಳಿದರು. 

"

ಮಂಜುನಾಥ್
ಹುಣಸೂರು
ಕಾಂಗ್ರೆಸ್

ಹುಣಸೂರು ಕ್ಷೇತ್ರದಲ್ಲಿ ಎಚ್.ವಿಶ್ವನಾಥ್ ಅನರ್ಹತೆಯಿಂದ  ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆಲುವು ಸಾಧಿಸಿದ್ದಾರೆ.  ನನ್ನ ಗೆಲುವಿನಿಂದ ತಾಲೂಕಿನ ಜನರ ಅಸ್ಮಿತೆ ಗೆದ್ದಂತಾಗಿದೆ. ಕಾಂಗ್ರೆಸ್ ನಾಯಕರ ಸಾಂಘಿಕ ಹೋರಾಟಕದಿಂದ ನನ್ನ ಗೆಲುವಾಗಿದೆ. ಹಣದ ಹೊಳೆ ಮೀರಿ ಗೆಲುವು ಸಾಧಿಸಿದ್ದು, ಕ್ಷೇತ್ರದ ಜನತೆಗೆ ನನ್ನ ಧನ್ಯವಾದ ಎಂದಿದ್ದಾರೆ. 

ಶಿವರಾಮ್ ಹೆಬ್ಬಾರ್
ಯೆಲ್ಲಾಪುರ
ಬಿಜೆಪಿ

ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮತ್ತೊಮ್ಮೆ ವಿಜಯಿಯಾಗಿದ್ದಾರೆ. 31 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಕ್ಷೇತ್ರದ ಜನರು ಇಟ್ಟಿರುವ ಪ್ರೀತಿ ವಿಶ್ವಾಸ ಗೌರವ ಉಳಿಸಿಕೊಂಡು ಹೋಗುತ್ತೇನೆ. ಅಭಿವೃದ್ಧಿ ಬಗ್ಗೆ ಪ್ರಾಮುಖ್ಯತೆ ನೀಡುತ್ತೇನೆ. ಇಂದಿನಿಂದ ನಾವೆಲ್ಲ ಅರ್ಹರಾಗಿದ್ದೇವೆ. ಮಂತ್ರಿ ಸ್ಥಾನದ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೆಬ್ಬಾರ್ ಹೇಳಿದರು. 

"
ಮಹಾಲಕ್ಷ್ಮೀ ಲೇಔಟ್
ಗೋಪಾಲಯ್ಯ
ಬಿಜೆಪಿ

ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಗೋಪಾಲಯ್ಯ ಅನರ್ಹತೆ ಕಳಂಕ ಕಳಚಿದೆ. ಮತದಾರರ ತೀರ್ಪಿನ ನಂತರ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ದುಡ್ಡಿಗಾಗಿ ನಾನು ಪಕ್ಷ ಬದಲಾಯಿಸದವನಲ್ಲ. ವರ್ಷಕ್ಕೆ ಎರಡು ಮೂರು ಕೋಟಿ ನಾನೇ ದಾನ ಮಾಡುತ್ತೇನೆ ಎಂದರು. ಇನ್ನು ತಮಗೆ ಸಣ್ಣ ನೀರಾವರಿ, ಕೃಷಿ, ಸಹಕಾರ ಇಲಾಖೆಯ ಆಸಕ್ತಿ ಇದ್ದು, ಈ ಕ್ಷೇತ್ರದ ಅನುಭವವೂ ಇದೆ. ಸಚಿವ ಸ್ಥಾನ ನೀಡಿದಲ್ಲಿ ಅಭಿವೃದ್ಧಿ ಮಾಡಲು ಅನುಕೂಲವಾಗಲಿದೆ ಎಂದರು.  ನಮ್ಮ ಕ್ಷೇತ್ರದ ಜನರೆಲ್ಲ ಒಂದೇ ಕುಟುಂಬದ ಮಕ್ಕಳಂತೆ ಇದ್ದೇವೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ, ಯೋಚನೆಗಳಿವೆ ಎಂದರು.

"

ವಿಜಯನಗರ
ಆನಂದ್ ಸಿಂಗ್
ಬಿಜೆಪಿ

ಬಳ್ಳಾರಿಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಆನಂದ್ ಸಂಗ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಆನಂದ್ ಸಿಂಗ್ ನನ್ನ ಮೂರು ಬೇಡಿಕೆಗಳಿವೆ. ವಿಜಯನಗರ ಜಿಲ್ಲೆಯಾಗಿಸುವ ಕಲ್ಪನೆಯೂ ಇದ್ದು, ಸರ್ಕಾರ ಈಡೇರಿಸುವ ಭರವಸೆ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ನನ್ನ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಅಭಿನಂದನೆ ಎಂದರು. 

ಹಿರೇಕೆರೂರು
ಬಿ.ಸಿ.ಪಾಟೀಲ್
ಬಿಜೆಪಿ

ಹಾವೇರಿಯ ಹಿರೇಕೆರೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಭಾರೀ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಅನರ್ಹತೆ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ. ರಾಜ್ಯದಂತೆ ದೇಶದಲ್ಲಿಯೂ ಕಾಂಗ್ರೆಸ್ ಮುಕ್ತವಾಗಲಿದೆ. ಹಾವೇರಿಯು ಕಾಂಗ್ರೆಸ್ ಮುಕ್ತವಾಗಿದ್ದು, ಬಣಕಾರ ಹಾಗೂ ನಾನು ಒಂದಾದ ಕಾರಣ ನನ್ನ ಗೆಲುವು ಸುಲಭವಾಗಿ ಆಯಿತು. ರಾಜ್ಯದಲ್ಲಿ ಇನ್ನು ಮುಂದೆ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದರು. 

"

ಹೊಸಕೋಟೆ
ಶರತ್ ಬಚ್ಚೇಗೌಡ
ಪಕ್ಷೇತರ

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಅನರ್ಹತೆಯಿಂದ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ.  ತಮ್ಮ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ ಶರತ್ ಬಚ್ಚೇಗೌಡ ಇದು ನ್ಯಾಯಕ್ಕೆ ಸಂದ ಗೆಲುವು ಎಂದಿದ್ದಾರೆ. ಎಲ್ಲರೂ ನನ್ನ ಜೊತೆ ಸೇರಿ ಕೆಲಸ ಮಾಡಿದ್ದಾರೆ. ಸ್ವಾಭಿಮಾನಕ್ಕೆ ಗೆಲುವು ಸಿಕ್ಕಿದೆ. ಜಾತಿ ಜನಾಂಗ ತೊರೆದು ಅನುಕೂಲಕರ ಫಲಿತಾಂಶ ಬಂದಿದೆ.  ಮುಂದಿನ ನಡೆ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದರು. 

ಅಭಿವೃದ್ಧಿಯತ್ತ ಗಮನ : ಸಿಎಂ

ಇನ್ನು ಬಿಜೆಪಿ ಅಭೂತಪೂರ್ವ ಗೆಲುವಿನ ಬಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ 12 ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದೇವೆ. ನಮ್ಮ ಸಚಿವರು, ಕಾರ್ಯಕರ್ತರ ಪರಿಶ್ರಮದ ಈ ಗೆಲುವಿನ ಹಿಂದೆ ಇದೆ. ಅಸ್ತಿರತೆ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ಇನ್ನಾದರೂ ನಮಗೆ ಸಹಕಾರ ನೀಡಲಿ ಎಂದಿದ್ದಾರೆ. ಇನ್ನು ಮುಂದೆ ರಾಜ್ಯದ ಅಭಿವೃದ್ಧಿಯತ್ತ ಮಾತ್ರ ಗಮನ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಹೈ ಕಮಾಂಡಿಗೆ ಕೊಡುಗೆ ನೀಡುವುದಾಗಿ ಹೇಳಿದರು. 

ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: