ಬೆಂಗಳೂರು, [ಡಿ.10]: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವಿಗೆ ಕಾರಣವಾಗಿದ್ದ ಉಪ ಚುನಾವಣೆ ಫಲಿತಾಂಶ ಸೋಮವಾರ ಹೊರಬಿದ್ದಿದೆ.

15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ಗೆದ್ದು ಸರ್ಕಾರ ಸೇಫ್ ಮಾಡಿಕೊಂಡಿದೆ. ಇನ್ನು ಕಾಂಗ್ರೆಸ್ ಹುಣಸೂರು ಹಾಗೂ ಶಿವಾಜಿಗನರದಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಜೆಡಿಎಸ್ ಯಾವುದೇ ಸ್ಥಾನ ಸಿಕ್ಕಿಲ್ಲ. ಅಚ್ಚರಿ ಅಂದ್ರೆ 3 ಕ್ಷೇತ್ರಗಳಲ್ಲಿ ಜೆಡಿಎಸ್​ಗಿಂತಲೂ ನೋಟಾ ಗಳಿಸಿದ ಮತಗಳೇ ಹೆಚ್ಚು.

2018ಕ್ಕೂ ಉಪಚುನಾವಣೆಗೂ ಅಜಗಜಾಂತರ: ದಿಗ್ಭ್ರಮೆ ಮೂಡಿಸಿದ ಅಭ್ಯರ್ಥಿಗಳ ವಿನ್ನಿಂಗ್ ಅಂತರ

ಹೌದು...ಹೌದು ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗಿಂತ ನೋಟಾಗೆ ಹೆಚ್ಚಿನ ಮತಗಳು ಲಭಿಸಿವೆ. ಯಲ್ಲಾಪುರ, ರಾಣೆಬೆನ್ನೂರು, ಕೆ.ಆರ್​.ಪುರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿ ನೋಟಾ ಮತಗಳು ಕಾಣಿಸಿಕೊಂಡಿವೆ.

ಯಲ್ಲಾಪುರ
ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ 80442 ಮತ ಪಡೆದಿದ್ದರೆ, ಕಾಂಗ್ರೆಸ್ ನ ಭೀಮಣ್ಣ ನಾಯ್ಕ 49034 ಮತ ಪಡೆದಿದ್ದರು. ಆದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿದ್ದ ಚೈತ್ರಾ ಗೌಡಗೆ ಲಭಿಸಿದ್ದು ಕೇವಲ 1235 ಮತಗಳು. ಆದರೆ ಮತದಾರರು ಅವರಿಗಿಂತ ಹೆಚ್ಚಿನ ಮತಗಳನ್ನು (1444) ನೋಟಾಗೆ ನೀಡಿದ್ದಾರೆ.

ಕೆ.ಆರ್. ಪುರ
 ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಜಯಗಳಿಸಿದ್ದಾರೆ. ಬೈರತಿಗೆ 1,39,833 ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಂ ನಾರಾಯಣ ಸ್ವಾಮಿಗೆ 76,428 ಮತ ಲಭಿಸಿವೆ. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಅವರು ಗಳಿಸಿದ್ದು ಕೇವಲ 2,048 ಮತಗಳನ್ನು ಮಾತ್ರ. ಆದರೆ ಕ್ಷೇತ್ರದಲ್ಲಿ ಒಟ್ಟು 5,181 ಜನರು ನೋಟಾಗೆ ಜೈ ಎಂದಿದ್ದಾರೆ.

ರಾಣೆಬೆನ್ನೂರು
ಹಾವೇರಿಯ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಅರುಣ್ ಕುಮಾರ್ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಅರುಣ್ ಕುಮಾರ್ 95,408 ಮತ ಪಡೆದರೆ, ಹಳೆ ಹುಲಿ ಕಾಂಗ್ರೆಸ್ ನ ಕೆ ಬಿ ಕೋಳಿವಾಡ 72,187 ಮತಗಳನ್ನು ಗಳಿಸಿದ್ದರು. ಇಲ್ಲಿ ನೋಟಾಗೆ 1608 ಮತಗಳು ಚಲಾವಣೆಯಾಗಿದ್ದರೆ, ಅದಕ್ಕಿಂತಲೂ ಕಡಿಮೆ ಅಂದರೆ ಕೇವಲ 979 ಮತಗಳು ಜೆಡಿಎಸ್ ನ ಮಲ್ಲಿಕಾರ್ಜುನ ರುದ್ರಪ್ಪ ಹಲಗೇರಿ ಅವರಿಗೆ ಲಭಿಸಿವೆ.