ನನ್ನಿಂದ ಹಣ ಪಡೆದಿದ್ದಾರೆಂದ ಎಂಟಿಬಿಗೆ ಸಿದ್ದರಾಮಯ್ಯ ತಿರುಗೇಟು!
ಸಾಲನೇ ಪಡೆದಿಲ್ಲ; ವಾಪಸ್ ಕೊಡೊದೆಲ್ಲಿಂದ?| ಎಂಟಿಬಿ ನಾಗರಾಜ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು| ಅನರ್ಹ ಶಾಸಕರ ವಿರುದ್ಧ ಕೆಂಡಾಮಂಡಲ
ಮೈಸೂರು[ನ.22]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್ ನಾಯಕರು ನನ್ನ ಬಳಿ ಹಣ ಪಡೆದಿದ್ದು, ಈವರೆಗೂ ವಾಪಸ್ ಮಾಡಿಲ್ಲ ಎಂದಿದ್ದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಎಂ.ಟಿ.ಬಿ. ನಾಗರಾಜ್‌ನಿಂದ ಸಾಲವನ್ನೇ ತೆಗೆದುಕೊಂಡಿಲ್ಲ. ಎಲ್ಲಿ ವಾಪಸ್ ಕೊಡ್ಲಿ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಅವನಿಂದ ಸಾಲ ತಗೆದುಕೊಂಡಿಲ್ಲ. ಇನ್ನು ಎಲ್ಲಿ ವಾಪಸ್ ಕೊಡ್ಲಿ? ಅವನಿಂದ ಸಾಲ ಪಡೆದವರು ವಾಪಸ್ ಕೊಟ್ಟಿಲ್ವಾ? ಕೃಷ್ಣ ಭೈರೇಗೌಡ ಕೊಟ್ಟಿಲ್ವಾ ಎಂದು ಪ್ರಶ್ನಿಸಿದರು.
'ಸಿದ್ದು ನನ್ನಿಂದ ಹಣ ಪಡೆದಿದ್ದಾರೆ, ನನ್ನ ಋುಣದಲ್ಲಿ ಹಲವು ಕಾಂಗ್ರೆಸ್ಸಿಗರಿದ್ದಾರೆ'
ಬಿಎಸ್‌ವೈಗೆ ಸಾಲ ಕೊಟ್ಟಿದ್ದಾರೆ!:
ಎಂ.ಟಿ.ಬಿ.ನಾಗರಾಜ್ ಆಪರೇಷನ್ ಕಮಲದಲ್ಲಿ ಯಡಿಯೂರಪ್ಪಗೆ ಸಾಲ ಕೊಟ್ಟಿದ್ದಾರೆ. ಹೀಗಾಗಿ, ಎಂಟಿಬಿ ಪರ ಯಡಿಯೂರಪ್ಪ ಹೆಚ್ಚು ಒಲವಿನಿಂದ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ಸರ್ಕಾರವು ಪಾರದರ್ಶಕ ಉಪ ಚುನಾವಣೆ ನಡೆಸುತ್ತಿಲ್ಲ. ಕುಕ್ಕರ್, ಸೀರೆ ಎಲ್ಲಾ ಸಿಕ್ಕ ಮೇಲೆ ಇನ್ನೆಲ್ಲಿ ಪಾರದರ್ಶಕತೆ? ಇವರು ಮಾರಾಟವಾದಾಗ ದುಡ್ಡು ಬಂದಿತು. ಈಗ ಚುನಾವಣೆಗೂ ಕೋಡುತ್ತಿದ್ದಾರೆ. ಅಡ್ಡಾದಿಡ್ಡಿ ದುಡ್ಡು ಖರ್ಚು ಮಾಡುತ್ತಿದ್ದಾರೆ ಎಂದು ದೂರಿದರು.
ಜನರೇ ಸೋಲಿಸುತ್ತಾರೆ:
ನಮ್ಮ ನಿರೀಕ್ಷೆ ಮೀರಿ ಜನರು ಸ್ಪಂದಿಸಿದ್ದಾರೆ. ಜನರೇ ಹೇಳುತ್ತಿದ್ದಾರೆ ಅನರ್ಹರು, ಹಣಕ್ಕಾಗಿ ಹೋದವರು ಅಂತ. ನನ್ನ ಭಾಷಣಕ್ಕೂ ಮುನ್ನ ಜನರೆ ಹೇಳ್ತುತ್ತಿದ್ದರು. ನನ್ನ ಪ್ರಕಾರ 15 ಜನರೂ ಸೋಲುತ್ತಾರೆ. ಎಷ್ಟೆನಯವಿನಯದಿಂದ ಮಾತನಾಡಿದರೂ ಜನ ಸೋಲಿಸುತ್ತಾರೆ ಎಂದು ಅವರು ತಿಳಿಸಿದರು.
ಸಮುದಾಯ ಒಡೆಯಬಾರದು:
ಕನಕ ವೃತ್ತದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಯಾಕೆ ಕ್ಷಮೆ ಕೇಳಿದರು? ಅದನ್ನು ಅಲ್ಲಿಗೆ ಬಿಡಬೇಕಿತ್ತು. ಜಾತಿ ಜಾತಿಗಳ ನಡುವೆ ರಾಜಕೀಯ ಮಾಡುವ ಅವಶ್ಯಕತೆ ಇರಲಿಲ್ಲ. ಸಮುದಾಯ ಒಡೆಯುವ ಕೆಲಸ ಮಾಡಬಾರದು. ಇದನ್ನ ಇಲ್ಲಿಗೆ ನಿಲ್ಲಿಸಿದರೇ ಒಳ್ಳೆಯದು ಎಂದು ಹೇಳಿದರು.