ಬೆಂಗಳೂರು[ನ.22]: ಪ್ರಸಕ್ತ ಉಪಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವುದಾಗಿದ್ದರೆ ನಾವೇಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೆವು ಎಂದು ಮಾರ್ಮಿಕವಾಗಿ ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಪ್ರಚಾರ ಮಾಡುತ್ತಿದ್ದಾರೆ. ಅವರೇನು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಾರಾ? ಇಲ್ಲವಲ್ಲ. ಅವರ ಅಭ್ಯರ್ಥಿ ಪರವಾಗಿ ಮತ ಯಾಚಿಸುತ್ತಾರೆ. ಹೀಗಾಗಿ, ನಮ್ಮ ಹೋರಾಟ ನಾವು ಮಾಡುತ್ತೇವೆ. ಸಾರ್ವಜನಿಕ ರಂಗದಲ್ಲಿ ಹೇಳಿಕೆಗಳು ಬೇರೆ ಬೇರೆ ಆಗಿರುತ್ತವೆ. ಈ ಜೆಡಿಎಸ್‌ ಪಕ್ಷವನ್ನು ಯಾರದ್ದೋ ಪಾಲಾಗಲು ಬಿಡಲ್ಲ. ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನೇರವಾಗಿ ಜನರ ಬಳಿ ಹೋಗುತ್ತೇನೆ. ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೋ ನೋಡೋಣ ಎಂದರು.

'ರಾಜಕೀಯವೇ ಹೀಗಯ್ಯ' ಮತ್ತೆ ಸಿದ್ದು ಜೆಡಿಎಸ್ ದೋಸ್ತಿ ಮಾತು, ದೊಡ್ಡಗೌಡ್ರು ಏನಂತರಾರೋ!

ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಮೊದಲು ಬೇರೆಯವರಿಗೆ ಬಿ ಫಾರಂ ಕೊಡಲಾಗಿತ್ತು. ಕಣಕ್ಕಿಳಿದಿದ್ದ ಕಬ್ಬಿಣಕಂತಿ ಮಠದ ಸ್ವಾಮೀಜಿಗಳ ಮೇಲೆ ಒತ್ತಡ ಹೇರಿ ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಪುತ್ರ ಹಾಗೂ ವಿವಿಧ ಸ್ವಾಮೀಜಿಗಳು ಕೂಡ ಒತ್ತಡ ಹೇರಿದ್ದಾರೆ. ಮಾನಸಿಕವಾಗಿ ಅವರ ಮೇಲೆ ಒತ್ತಡ ತರಲಾಗಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಕಷ್ಟಎಂಬ ಮಾತನ್ನು ಆ ಸ್ವಾಮೀಜಿ ಹೇಳಿದರು. ಹೀಗಾಗಿ, ನಾಮಪತ್ರ ವಾಪಸ್‌ ಪಡೆಯಲು ಸಮ್ಮತಿಸಿದೆವು ಎಂದು ಬೇಸರದಿಂದ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ದೇವೇಗೌಡರು, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ನಮ್ಮ ಪಕ್ಷದ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಚಪ್ಪಲಿ ಎಸೆಯುವ ಅಗತ್ಯ ನಮ್ಮ ಕಾರ್ಯಕರ್ತರಿಗೆ ಇಲ್ಲ. ಕೆ.ಆರ್‌.ಪೇಟೆ ಕ್ಷೇತ್ರ ನಮ್ಮ ಮನೆ ಇದ್ದಂತೆ. ಅಲ್ಲಿ ಅರೆ ಮಿಲಿಟರಿ ಪಡೆ ಬಂದು ನಿಂತರೂ ಪರವಾಗಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಪಾದಿಸಿದರು.

ಹಿರೇಕೆರೂರಲ್ಲಿ ಉಜಿನಪ್ಪಗೆ ಜೆಡಿಎಸ್‌ ಬೆಂಬಲ?

ಪಕ್ಷದ ಅಭ್ಯರ್ಥಿಯಾಗಿದ್ದ ಕಬ್ಬಿಣಕಂತಿ ಮಠದ ಶ್ರೀಗಳು ತಮ್ಮ ನಾಮಪತ್ರ ವಾಪಸ್‌ ಪಡೆದುಕೊಂಡ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಉಜಿನಪ್ಪ ಜಟ್ಟಪ್ಪ ಕೋಡಿಹಳ್ಳಿ ಅವರಿಗೆ ಬೆಂಬಲ ನೀಡಲು ಜೆಡಿಎಸ್‌ ಚಿಂತನೆ ನಡೆಸಿದೆ. ಈ ಮೊದಲು ಉಜಿನಪ್ಪ ಅವರಿಗೇ ಬಿ ಫಾರಂ ಕೊಟ್ಟಿದ್ದೆವು. ಆದರೆ, ಕೊನೆಯ ಕ್ಷಣದಲ್ಲಿ ಕಬ್ಬಿಣಕಂತಿ ಶ್ರೀಗಳು ಕಣಕ್ಕಿಳಿಯಲು ಬಯಸಿ ಟಿಕೇಟ್‌ ಕೆಳಿದ್ದರು. ಹೀಗಾಗಿ, ಅವರಿಗೆ ಬಿ ಫಾರಂ ಕೊಟ್ಟೆವು. ಆದರೆ, ಈಗ ಅವರು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಹೀಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಜಿನಪ್ಪ ಅವರಿಗೆ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅವರು ಕೂಡ ಪಕ್ಷದ ಬೆಂಬಲ ಕೋರಿಲ್ಲ ಎಂದು ದೇವೇಗೌಡರು ಮಾಹಿತಿ ನೀಡಿದರು.

ಮಹಾಲಕ್ಷ್ಮಿ ಲೇ ಔಟ್‌ ಸವಾಲಾಗಿ ತೆಗೆದುಕೊಂಡಿರುವೆ

ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೇನೆ ಎಂದು ದೇವೇಗೌಡರು ಗುಡುಗಿದ್ದಾರೆ. ಆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ಗಿರೀಶ್‌ ನಾಶಿ ಅವರ ಮನೆ ಮೇಲೆ ಹಾಕಲಾಗಿದ್ದ ಪೋಸ್ಟರ್‌ ಕಿತ್ತು ಹಾಕಿದ್ದಾರೆ. ಅಲ್ಲದೆ, ಅವರು ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಸುದ್ದಿ ಹಬ್ಬಿಸಿದ್ದನ್ನೂ ಗಮನಿಸಿದ್ದೇನೆ. ನಮ್ಮ ಅಭ್ಯರ್ಥಿ ಕಣದಿಂದ ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೋಪಾಲಯ್ಯ ಅವರನ್ನು ನಾನು ರಕ್ಷಣೆ ಮಾಡಿದ್ದೆ. ಎಚ್‌.ಡಿ.ಕುಮಾರಸ್ವಾಮಿ ಅವರು ವಿರೋಧಿಸಿದರೂ ನಾನು ಗೋಪಾಲಯ್ಯ ಪತ್ನಿಯನ್ನು ಉಪಮೇಯರ್‌ ಆಗಿ ಮಾಡಿದ್ದೆ. ಇರಲಿ. ಈಗ ಚುನಾವಣೆಯಲ್ಲಿ ಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಯೋ ಗೊತ್ತಿಲ್ಲ. ಆದರೆ, ನಾವು ಗೆಲ್ಲುವುದಕ್ಕೆ ಎಲ್ಲ ಪ್ರಯತ್ನವನ್ನೂ ನಡೆಸುತ್ತೇವೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.