ಸೂಲಿಬೆಲೆ[ನ.20]: ಪಕ್ಷ ಸಂಘಟನೆಗೆ ನೀಡಿದ ಆರ್ಥಿಕ ನೆರವನ್ನು ವೈಯಕ್ತಿಕವಾಗಿ ನೀಡಿದ ನೆರವು ಎಂದು ಬಿಂಬಿಸುವ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌, ಸಿದ್ದರಾಮಯ್ಯ ಅವರ ಮುಂದೆ ಧೂಳಿಗೂ ಸಮವಲ್ಲ. ಎಂಟಿಬಿ ಬಳಿ ಸಾವಿರಾರು ಕೋಟಿ ರುಪಾಯಿ ಹಣವಿರಬಹುದು. ಆದರೆ, ಸಿದ್ದರಾಮಯ್ಯ ಹಿಂದೆ ಲಕ್ಷಾಂತರ ಮಂದಿ ಇದ್ದಾರೆ ಎಂದು ಹೊಸಕೋಟೆ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಪತಿ ಬೈರತಿ ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಂಟಿಬಿ ನಾಗರಾಜ್‌ ಅವರು ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾದ ಮಾತುಗಳನ್ನು ಆಡುತ್ತಿದ್ದಾರೆ. ಪಕ್ಷಕ್ಕೆ ಖರ್ಚು ಮಾಡಿದ್ದನ್ನು ವೈಯಕ್ತಿಕವಾಗಿ ಕೊಟ್ಟವರ ರೀತಿ ಹೇಳುತ್ತಿರುವುದು ರಾಜಕೀಯ ಧರ್ಮ ಅಲ್ಲ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಾಗರಾಜು ಅವರಿಗೆ ಇಲ್ಲ ಎಂದರು.

ಕುರುಬರ ಸಂಘ ಹಾಗೂ ರಾಜ್ಯ ಕುರುಬರ ಸಂಘವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಹೋಗಬಾರದು. ಜಾತಿ ಆಧರಿಸಿ ನಾಯಕನೊಬ್ಬನಿಗೆ ಬೆಂಬಲ ಕೊಡುವುದು ಸರಿಯಲ್ಲ. ಸಿದ್ದರಾಮಯ್ಯ ಬಗ್ಗೆ ಕೀಳು ಮಾತುಗಳನ್ನು ಆಡುತ್ತಿರುವ ಎಂ.ಟಿ.ಬಿ.ನಾಗರಾಜು ಅವರಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ನಾಗರಾಜು ರಾತೋರಾತ್ರಿ ಪಕ್ಷ ಬಿಟ್ಟು ಓಡಿಹೋಗಿದ್ದು ಪ್ರಾಮಾಣಿಕತೆಯೇ. ಕ್ಷೇತ್ರದಲ್ಲಿ ಈ ಬಾರಿ ಭಾರಿ ಪ್ರಮಾಣದಲ್ಲಿ ಹಣ ಬಲ, ತೋಳ್ಬಲ ಪ್ರದರ್ಶನ ನಡೆಯುತ್ತಿದ್ದರೆ ಅದಕ್ಕೆ ಅನರ್ಹ ಶಾಸಕರೇ ಕಾರಣ ಎಂದು ಟೀಕಿಸಿದರು.

ಹೊಸಕೋಟೆ ತವರುಮನೆ: ಸುಮಲತಾ ಅಂಬರೀಷ್ ಹಾದಿಯಲ್ಲಿ ಪದ್ಮಾವತಿ ಸುರೇಶ್?

ಹೊಸಕೋಟೆ ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬೇರುಗಳು ಭದ್ರವಾಗಿವೆ. ಕಾಂಗ್ರೆಸ್‌ನಿಂದಾಗಿಯೇ ಎಂಟಿಬಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಈಗ ಕಾಂಗ್ರೆಸ್‌ಗೆ ಮೋಸ ಮಾಡಿ, ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದು ಕೇವಲ ಸ್ವಾರ್ಥ ಹಾಗೂ ವೈಯಕ್ತಿಕ ಲಾಭಕ್ಕಾಗಿ ಉಪ ಚುನಾವಣೆ ಬರುವಂತೆ ಮಾಡಿದ್ದಾರೆ. ಇಂತಹ ಎಂಟಿಬಿಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಮಹಿಳಾ ಮತ​ದಾ​ರ​ರು:

ಮಹಿಳೆಯೊಬ್ಬರು ಶಾಸಕರಾದರೆ ಕ್ಷೇತ್ರ ಅಭಿವೃದ್ಧಿಯಾಗುವುದಿಲ್ಲ ಎಂದು ಎಂಟಿಬಿ ನಾಗರಾಜು ಹೇಳುತ್ತಾರೆ. ಈ ಎಂಟಿಬಿ ತಾಯಿ ಕೂಡ ಒಬ್ಬ ಹೆಣ್ಣು. ನಮ್ಮ ಭಾರತಾಂಬೆ ಹೆಣ್ಣು. ಎಂಟಿಬಿಯ ಈ ಮಾತಿಗೆ ಮಹಿಳಾ ಮತದಾರರೇ ಉತ್ತರ ಕೊಡಲಿದ್ದಾರೆ. ಮಹಿಳೆಯರನ್ನು ಜರಿಯಬೇಡಿ ಎಂದು ಎಂಟಿಬಿಗೆ ಮನವಿ ಮಾಡುತ್ತೇನೆ ಎಂದರು.

ಪ್ರಾಮಾಣಿಕತೆ ಎಂದರೆ ಎಂಟಿಬಿ ಅಂತಾರೆ. ಕಾಂಗ್ರೆಸ್‌ ಬಿಟ್ಟು ರಾತ್ರೋರಾತ್ರಿ ಬಿಜೆಪಿಗೆ ಓಡಿ ಹೋಗಿದ್ದು ಪ್ರಾಮಾಣಿಕತೆಯಾ? ಯಾವುದು ಪ್ರಾಮಾಣಿಕತೆ ಎಂದು ಮತದಾರ ತೀರ್ಮಾನ ಮಾಡುತ್ತಾರೆ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.