ಹುಣಸೂರು[ನ.22]: ಬಿಜೆಪಿ ಸರ್ಕಾರ ರಕ್ಷಿಸಲು ಬೆಂಬಲ ನೀಡುತ್ತೇನೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ ಯೂಟರ್ನ್‌ ತೆಗೆದುಕೊಂಡಿದ್ದು, ಉಪಚುನಾವಣೆಯ ಫಲಿತಾಂಶದ ಬಳಿಕ ಮೈತ್ರಿ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ತಾಲೂಕಿನ 21 ಹಳ್ಳಿಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಗುರುವಾರ ಮತಯಾಚಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿರುವಂತೆ 8 ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳಲಿದೆ. ಅಲ್ಲಿಯವರೆಗೆ ನಾನೇಕೆ ಮೈತ್ರಿ ಬಗ್ಗೆ ಮಾತನಾಡಲಿ. ಡಿ.9ರ ಫಲಿತಾಂಶವನ್ನು ಕಾದು ನೋಡುತ್ತೇನೆ. ನಂತರದ ಬೆಳವಣಿಗೆಗಳನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಹುಣಸೂರು ಸೇರಿದಂತೆ 10 ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯಭೇರಿ ಬಾರಿಸಲಿದ್ದು, ಫಲಿತಾಂಶ ಬಂದ ಬಳಿಕ ದೆಹಲಿಯಿಂದ ಹಿಡಿದು ಎಲ್ಲ ನಾಯಕರು ನಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ನಿರ್ಣಾಯಕವಾಗಲಿದೆ ಎಂದರು.

ಜೆಡಿಎಸ್, ಕಾಂಗ್ರೆಸ್ ಒಳಒಪ್ಪಂದ?: ಎಚ್. ಡಿ. ದೇವೇಗೌಡರು ಕೊಟ್ರು ಸ್ಪಷ್ಟನೆ!

ಸರ್ಕಾರ ಉಳಿಯಲ್ಲ:

ಜೆಡಿಎಸ್‌ ಪಕ್ಷಕ್ಕೆ ಮೋಸ ಮಾಡಿ, ನಮ್ಮ ಬೆನ್ನಿಗೆ ಚೂರಿ ಹಾಕಿದ ಎಚ್‌.ವಿಶ್ವನಾಥ್‌ ಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ತಾನೆ ಅವರು ಮಂತ್ರಿಯಾಗುವುದು. ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಉಳಿಯಲ್ಲ .ಅನರ್ಹರು ಮಂತ್ರಿಗಳ ಆಗಲ್ಲ ಕಾದು ನೋಡಿ. ನಮಗೆ ಹಾಗೂ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜನತಾ ನ್ಯಾಯಾಲಯ ತಕ್ಕಉತ್ತರ ನೀಡಲಿದೆ ಎಂದು ತಿಳಿಸಿದರು.

ಶ್ರೀಗಳೇ ಟಿಕೆಟ್‌ ಕೇಳಿದ್ದರು:

ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಉಪ ಚುನಾವಣೆಯಲ್ಲಿ ಗೆಲ್ಲಲು ಹೊರಟಿದೆ. ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿ ಸ್ವಾಮೀಜಿಯನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಸಭೆ ನಡೆಸಿದ್ದಾರೆ. ರಂಭಾಪುರಿ ಸ್ವಾಮೀಜಿಗಳು ರಟ್ಟೀಹಳ್ಳಿ ಶ್ರೀಗಳ ಮನವೊಲಿಸಿದ್ದಾರೆ. ನಾನು ಸ್ವಾಮೀಜಿಗೆ ಕರೆದು ಟಿಕೆಟ್‌ ಕೊಟ್ಟಿರಲಿಲ್ಲ. ಅವರೇ ಜೆಡಿಎಸ್‌ ಟಿಕೆಟ್‌ ಕೇಳಿದ್ದರು ಎಂದರು.

'ರಾಜಕೀಯವೇ ಹೀಗಯ್ಯ' ಮತ್ತೆ ಸಿದ್ದು ಜೆಡಿಎಸ್ ದೋಸ್ತಿ ಮಾತು, ದೊಡ್ಡಗೌಡ್ರು ಏನಂತರಾರೋ!

ಜಿಟಿಡಿ ಜತೆ ನೋ ಟಾಕಿಂಗ್‌

ಮಾಜಿ ಸಚಿವ ಜಿ.ಟಿ. ದೇವೇಗೌಡರ ಜೊತೆ ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ಚುನಾವಣೆ ಎಂದ ಮೇಲೆ ಎಲ್ಲರು ಒಂದೊಂದು ತಂತ್ರ ಮಾಡುತ್ತಾರೆ. ಒಬ್ಬೊಬ್ಬರ ಬೆಂಬಲ ಕೋರುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಕೂಡ ಜಿ.ಟಿ.ದೇವೆಗೌಡರ ಬೆಂಬಲ ಕೇಳಿರಬಹುದು. ಆದರೆ, ನಾನು ಜಿ.ಟಿ.ದೇವೇಗೌಡರ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರೇ ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾನೆ ಅಂತ ಬೆಂಬಲ ಕೊಟ್ಟರೆ ಸ್ವಾಗತ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.