ಸಿದ್ದರಾಮಯ್ಯರನ್ನ ಕೆಳಗಿಳಿಸಲು ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ ನಡೆದಿದೆ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಶಾಸಕರ ಖರೀದಿಗಾಗಿ ಅವರ ಪಕ್ಷದ ಘಟಾನುಘಟಿ ನಾಯಕರೇ ಸಾವಿರಾರು ಕೋಟಿ ರು. ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು (ನ.16): ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಶಾಸಕರ ಖರೀದಿಗಾಗಿ ಅವರ ಪಕ್ಷದ ಘಟಾನುಘಟಿ ನಾಯಕರೇ ಸಾವಿರಾರು ಕೋಟಿ ರು. ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆ ಆಗುವುದು ಖಾತ್ರಿಯಾಗಿ ಕಾಂಗ್ರೆಸ್ಸಿನ ಘಟಾನುಘಟಿಗಳು ಇವತ್ತು ಸಾವಿರಾರು ಕೋಟಿ ರು.ಗಳೊಂದಿಗೆ ತಮ್ಮದೇ ಪಕ್ಷದ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೂ ಬಂದಿದೆ. ಆಡಳಿತದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರಿಗೂ ಈ ಮಾಹಿತಿ ಸಿಕ್ಕಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ಹೇಳಿಕೆ ನನಗೆ ಗೊತ್ತಿಲ್ಲ; ಗಂಡುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಇಲ್ಲ: ರಾಮಲಿಂಗಾರೆಡ್ಡಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದೊಳಗಡೆ ಕುದುರೆ ವ್ಯಾಪಾರ ನಡೆದಿದೆ. ಬಿಜೆಪಿಯಲ್ಲಿ ಇರುವುದು ಕೇವಲ 66 ಶಾಸಕರು ಮಾತ್ರ. ಆ ಪ್ರಶ್ನೆ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯನವರೇ, ನಿಮ್ಮ ಅಕ್ಕಪಕ್ಕ ಇರುವ ಹಿರಿಯ ಸಚಿವರಿಗೆ ತಾವು ಭಯ ಪಡಬೇಕಿದೆ. ಬಿಜೆಪಿ ಬಗ್ಗೆ ಆತಂಕ ಬೇಕಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಬದಲಾವಣೆ ಆಗುವುದಿಲ್ಲ. ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಳಿಕ ಯಾವಾಗ ಬೇಕಿದ್ದರೂ ತೀರ್ಮಾನ ಆಗಲಿದೆ. ಸಿದ್ದರಾಮಯ್ಯನವರು ಅತಿ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎಂದು ಇದೇ ವೇಳೆ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.