ರಾಜ್ಯದಲ್ಲಿ  ನಡೆಯುವ ಉಪ ಚುನಾವಣೆ ಕ್ಷೇತ್ರಗಳಿಗೆ ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಯಾರ್ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ..?

 ಬೆಂಗಳೂರು (ಮಾ.19): ರಾಜ್ಯದಲ್ಲಿ ಉಪ ಚುನಾವಣೆ ಪ್ರಕಟವಾಗಿರುವ ಎರಡು ವಿಧಾನಸಭೆ ಕ್ಷೇತ್ರಗಳು ಹಾಗೂ ಇನ್ನೂ ಚುನಾವಣೆ ದಿನಾಂಕ ಪ್ರಕಟವಾಗಿಲ್ಲದ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಏ.17ರಂದು ಚುನಾವಣಾ ದಿನಾಂಕ ನಿಗದಿಯಾಗಿರುವ ಬಸವಕಲ್ಯಾಣ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಮಲ್ಲಮ್ಮ ಬಿ. ನಾರಾಯಣರಾವ್‌ ಹಾಗೂ ಮಸ್ಕಿ ಕ್ಷೇತ್ರಕ್ಕೆ ಬಸನಗೌಡ ತುರವಿಹಾಳ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಇನ್ನೂ ಚುನಾವಣೆ ಅಧಿಸೂಚನೆ ಪ್ರಕಟವಾಗದ ಸಿಂದಗಿ ಕ್ಷೇತ್ರಕ್ಕೂ ಈಗಲೇ ಅಭ್ಯರ್ಥಿಯನ್ನು ಘೋಷಿಸಿದ್ದು, ಮಾ.9ರಂದು ಕಾಂಗ್ರೆಸ್‌ ಸೇರ್ಪಡೆಗೊಂಡ ಎಂ.ಸಿ.ಮನಗೂಳಿ ಪುತ್ರ ಅಶೋಕ್‌ ಮನಗೂಳಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ.

ಇತ್ತೀಚೆಗೆ ಕೊರೋನಾ ಸೋಂಕಿನಿಂದ ನಿಧನರಾದ ಬಿ.ನಾರಾಯಣರಾವ್‌ ಅವರಿಂದ ತೆರವಾದ ಬಸವ ಕಲ್ಯಾಣ ಕ್ಷೇತ್ರಕ್ಕೆ ಅನುಕಂಪದ ಅಲೆಯ ಮೇಲೆ ನಂಬಿಕೆಯಿಟ್ಟು ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್‌ ನೀಡಲಾಗಿದೆ.

ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ..

ಇನ್ನು ಮಸ್ಕಿಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳ ಅಂತರದಿಂದ ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರತಾಪ್‌ಗೌಡ ಪಾಟೀಲ್‌ ಎದುರು ಸೋತಿದ್ದ ಬಸನಗೌಡ ತುರವಿಹಾಳ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಪ್ರತಾಪ್‌ಗೌಡ ಅವರು ಆಪರೇಷನ್‌ ಕಮಲಕ್ಕೆ ಸಿಲುಕಿ ಬಿಜೆಪಿ ಸೇರಿದ್ದರಿಂದ ತುರವಿಹಾಳ್‌ ಕಾಂಗ್ರೆಸ್‌ಗೆ ವಲಸೆ ಬಂದಿದ್ದರು.

ವಿಜಯಪುರ ಜಿಲ್ಲೆ ಸಿಂಧಗಿ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಗೆ ಎಂ.ಸಿ.ಮನಗೂಳಿ ಪುತ್ರ ಅಶೋಕ್‌ ಮನಗೂಳಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಾ.9ರಂದು ಕೆಪಿಸಿಸಿ ಕಚೇರಿಯಲ್ಲಿ ಅಶೋಕ್‌ ಪಕ್ಷ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಟಿಕೆಟ್‌ ಘೋಷಣೆಯಾಗಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದಂತಿದೆ.

ಬೆಳಗಾವಿಗೆ ಸತೀಶ್‌ ಜಾರಕಿಹೊಳಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಟಿಕೆಟ್‌ ಘೋಷಣೆಯಾಗಿಲ್ಲ. ಆದರೆ, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ಸತೀಶ್‌ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯೇ ಹೆಚ್ಚಿದೆ ಎನ್ನುತ್ತವೆ ಮೂಲಗಳು.

ಸತೀಶ್‌ ಜಾರಕಿಹೊಳಿ ಆಪ್ತರ ಪ್ರಕಾರ ಅವರಿಗೆ ಲೋಕಸಭೆಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ, ರಾಜ್ಯ ನಾಯಕರ ಶಿಫಾರಸಿನ ಮೇರೆಗೆ ಹೈಕಮಾಂಡ್‌ ಕಣಕ್ಕೆ ಇಳಿಯುವಂತೆ ಸತೀಶ್‌ ಅವರಿಗೆ ಸೂಚನೆ ನೀಡಲಿದೆ ಎನ್ನಲಾಗಿದೆ. ಹೀಗಾಗಿ ಅಂತಿಮವಾಗಿ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ಲೋಕಸಭಾ ಕಣಕ್ಕೆ ಇಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.