ಬೆಂಗಳೂರು, (ಮಾ.01):  ದೇಶದ 27 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ, ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ 2.0 ಇಂದಿನಿಂದ ( ಮಾ.1) ಆರಂಭವಾಗಿದೆ. 

 ದ್ವಿತೀಯ ಹಂತದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು. ಇನ್ನು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 70 ವರ್ಷ ದಾಟಿರುವ ನನಗೇಕೆ ಕೋವಿಡ್ ಲಸಿಕೆ? ಯುವಕರಿಗೆ ಕೊಡಿ ಎಂದಿದ್ದಾರೆ. 

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಹೌದು... ನನಗೇಕೆ ಕೊರೋನಾ ವೈರಸ್ ಲಸಿಕೆ..? ನನಗೆ ಈಗಾಗಲೇ 70 ವರ್ಷ ದಾಟಿದೆ. ಇನ್ನು 10 ರಿಂದ 15 ವರ್ಷ ಬದುಕಬಹುದು. ನನ್ನ ಬದಲು ಯುವಕರಿಗೆ ಲಸಿಕೆ ಕೊಡಿ, ಅವರ ದೀರ್ಘಾಯುಷ್ಯಕ್ಕೆ ನೆರವಾಗಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕೊಟ್ಟಿದ್ದರು.

ಖರ್ಗೆ ಅವರ ಈ ಹೇಳಿಕೆಗೆ ರಾಜ್ಯ ಬಿಜೆಪಿ ಟಾಂಗ್ ಕೊಟ್ಟಿದ್ದು, ಲಸಿಕೆ ಪಡೆದು ದೇಶದ ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಬದಲು ಹೀಗೆ ಜಾರಿಕೊಳ್ಳುವುದು ಶೋಭೆ ತರುವುದಿಲ್ಲ ಎಂದು ಟ್ವೀಟ್ ಮೂಲಕ ತಿವಿದಿದೆ.

2019 ರ ಲೋಕಸಭೆಗೆ ಸ್ಪರ್ಧಿಸುವಾಗ, ರಾಜ್ಯ ಸಭಾ ವಿಪಕ್ಷ ನಾಯಕನ ಸ್ಥಾನ ಪಡೆದುಕೊಳ್ಳುವಾಗ ನೆನಪಾಗದ ವಯಸ್ಸು ಈಗ ನೆನಪಾಗಿದ್ದು ವಿಪರ್ಯಾಸವೇ ಸರಿ! ಇಲ್ಲೂ ನಿಮ್ಮ ರಾಜಕೀಯ ಬುದ್ಧಿ ತೋರ್ಪಡಿಸುವ ಅಗತ್ಯವೇನಿತ್ತು? ಪ್ರಶ್ನಿಸಿದೆ.