*  ಏ.12ರಿಂದ 3-4 ತಂಡಗಳಲ್ಲಿ 4 ದಿನ ರಾಜ್ಯ ಭೇಟಿ*  ಕಟೀಲ್‌, ಬಿಎಸ್‌ವೈ, ಶೆಟ್ಟರ್‌ ನೇತೃತ್ವದಲ್ಲಿ ತಂಡ?*  ವಿಧಾನಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆ  

ಬೆಂಗಳೂರು(ಮಾ.23): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Election) ಈಗಿನಿಂದಲೇ ಸಿದ್ಧತೆ ಆರಂಭಿಸಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ(BJP) ನಾಯಕರು ಬರುವ ಏಪ್ರಿಲ್‌ ಎರಡನೇ ವಾರದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಬಹುತೇಕ ಏ.12ರಿಂದ ನಾಲ್ಕು ದಿನಗಳ ಕಾಲ ರಾಜ್ಯ ನಾಯಕರು ಪ್ರವಾಸ ಕೈಗೊಳ್ಳಲಿದ್ದು, ಬಳಿಕ 16 ಮತ್ತು 17ರಂದು ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಮೂರು ಅಥವಾ ನಾಲ್ಕು ತಂಡಗಳನ್ನಾಗಿ ರಚಿಸಿ ಪ್ರವಾಸ ಕೈಗೊಳ್ಳುವ ಸಂಭವವಿದ್ದು, ಪ್ರವಾಸದ ರೂಪುರೇಷೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಮತ್ತಿತರ ನೇತೃತ್ವದಲ್ಲಿ ತಂಡಗಳು ರಚನೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

'ಮೇಕೆದಾಟು: ಡಿಎಂಕೆ ಮನವೊಲಿಕೆಗೆ ಕಾಂಗ್ರೆಸ್‌ನವರು ಸ್ಪೆಷಲ್ ಫ್ಲೈಟ್‌ನಲ್ಲಿ ಹೋಗಲಿ'

ಇದೇ ತಿಂಗಳಾಂತ್ಯಕ್ಕೆ ವಿಧಾನಮಂಡಲದ ಬಜೆಟ್‌ ಅಧಿವೇಶನ(Assembly Session) ಮುಗಿಯಲಿದೆ. ಅದರ ಬೆನ್ನಲ್ಲೇ ಏ.1ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಒಂದು ದಿನದ ಪ್ರವಾಸಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅವರು ಬಂದು ಹೋದ ಬಳಿಕ ಪಕ್ಷ ಸಂಘಟನೆ ತೀವ್ರಗೊಳಿಸುವ ಉದ್ದೇಶವನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ರಾಜ್ಯಾಧ್ಯಕ್ಷ ಕಟೀಲ್‌ ಅವರು ಆಹ್ವಾನಿಸಿದ್ದಾರೆ. ಆ ಬಳಿಕ ಪಕ್ಷ ಸಂಘಟನೆ ದೃಷ್ಟಿಯಿಂದ ಸರಣಿ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

31ರಂದು ಅರುಣ್‌ ಸಿಂಗ್‌ ಆಗಮನ?

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌(Arun Singh) ಅವರು ಈ ತಿಂಗಳ 31ರಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಏ.1ರಂದು ಅಮಿತ್‌ ಶಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಕಸರತ್ತು ಮತ್ತು ನಿಗಮ ಮಂಡಳಿಗಳ ನೇಮಕ ಕುರಿತಂತೆ ಸಮಾಲೋಚನೆ ನಡೆಯುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಅರುಣ್‌ ಸಿಂಗ್‌ ಅವರು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌

ಬೆಂಗಳೂರು: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಅದೇ ಉತ್ಸಾಹದಲ್ಲಿರುವ ಕೇಂದ್ರ ನಾಯಕರು ಸಿಎಂ ಬೊಮ್ಮಾಯಿ ಸಂಪುಟಕ್ಕೆ ಒಂದು ಹೊಸ ರೂಪ ನೀಡಲು ಸಜ್ಜಾಗಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.

Karnataka Cabinet Expansion: ಸಚಿವಾಕಾಂಕ್ಷಿಗಳಿಗೆ ಶಾಕಿಂಗ್‌ ನ್ಯೂಸ್‌..!

ಚುನಾವಣೆ ವರ್ಷವಾದ್ದರಿಂದ ರಾಜ್ಯದಲ್ಲಿಯೂ ಯಂಗ್ ಆ್ಯಂಡ್ ಎನರ್ಜೆಟಿಕ್ ಟೀಮ್ ಕಟ್ಟಿ, ಚುನಾವಣೆ ಎದುರಿಸಲು ಕೇಂದ್ರ ನಾಯಕರ ಯೋಚಿಸಿದ್ದಾರೆ ಎಂಬ ಮಾತು ರಾಜ್ಯ ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದೆ. ಆದ್ರೆ ಸಂಪುಟ ಪುನರ್ ರಚನೆ ಸಂಬಂಧ ಕೇಂದ್ರ ನಾಯಕರು ಇನ್ನು ಚರ್ಚೆ ಮಾಡಿಲ್ಲ ಎನ್ನುತ್ತಿವೆ ಮೂಲಗಳು.

4 ರಾಜ್ಯದ ಸಂಪುಟ ರಚನೆಯಲ್ಲಿ ಕೇಂದ್ರ ನಾಯಕರು ಬ್ಯುಸಿ

ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯನ್ನು ಏಪ್ರಿಲ್ ಮೊದಲ ವಾರವೇ ಮಾಡ್ತಾರೆ ಎಂಬ ಚರ್ಚೆ ನಡೆಯುತ್ತಿತ್ತು.‌ ಅದರಲ್ಲೂ ಮುಖ್ಯವಾಗಿ ಆದಷ್ಟು ಶೀಘ್ರವಾಗಿ ಸಂಪುಟ ಪುನರ್ ರಚನೆ ಮಾಡಿ ಎಂದು ಸಚಿವಾಕಾಂಕ್ಷಿಗಳು ಸಿಎಂ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ರು. ಆದ್ರೆ ಸದ್ಯದ ಚಿತ್ರಣ ನೋಡಿದ್ರೆ ಎಪ್ರೀಲನಲ್ಲಿ ಸಂಪುಟ ಪುನರ್ ರಚನೆ ಆಗೋದೆ ಡೌಟು. ಹೌದು ಕೇಂದ್ರ ನಾಯಕರು ಪಂಚ ರಾಜ್ಯದ ಚುನಾವಣೆ ಬಳಿಕ ನಾಲ್ಕು ರಾಜ್ಯದ ಸಚಿವ ಸಂಪುಟ ರಚನೆಯಲ್ಲಿ ಬ್ಯುಸಿ ಇದ್ದಾರೆ. ಈಗಷ್ಟೇ ಗೋವಾ, ಮಣಿಪುರ, ಉತ್ತರಖಾಂಡಕ್ಕೆ ಸಿಎಂ ಆಯ್ಕೆ ಮುಗಿಸಿರುವ ಬಿಜೆಪಿ ಹೈಕಮಾಂಡ್ ಈಗ ಆ ಮೂರು ರಾಜ್ಯ ಸೇರಿ ಉತ್ತರಪ್ರದೇಶಕ್ಕೆ ಯೋಗಿ ಸಂಪುಟ ರಚನೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ರಾಜ್ಯ ಸಚಿವ ಸಂಪುಟದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ವರಿಷ್ಠ ಅಮಿತ್ ಶಾ ಇನ್ನೂ ಚರ್ಚೆಯನ್ನು ಮಾಡಿಲ್ಲ ಎನ್ನುತ್ತಿವೆ ಮೂಲಗಳು.