ದಾವಣಗೆರೆ, (ನ.24): ನಾಯಕತ್ವದ ಬದಲಾವಣೆಯ ಚರ್ಚೆಯೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ  ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್‌ ರಚನೆ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಮುಖ್ಯಮಂತ್ರಿ, ನಾವು ಕೇಂದ್ರ ನಾಯಕರ ಜತೆಗೆ ಮಾತನಾಡಿದ್ದೇವೆ. ಕೆಲವೇ ದಿನಗಳಲ್ಲಿ ಆಗುತ್ತದೆ. ಕಾದು ನೋಡಿ ಎಂದು ಹೇಳಿದರು.

ಬಿಜೆಪಿ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ಹಾಜರ್: ಹಲ್‌-ಚಲ್ ಎಬ್ಬಿಸಿದ ರಮೇಶ್ ಜಾರಕಿಹೊಳಿ

ಮುಖ್ಯಮಂತ್ರಿಗಳು ಮತ್ತು ನಾನು 15 ದಿನಕ್ಕೊಮ್ಮೆ ಭೇಟಿಯಾಗುತ್ತೇವೆ. ಅದೇ ರೀತಿ ಸಂತೋಷ್‌ಜಿ ಅವರು ನಮ್ಮ ಮಾರ್ಗದರ್ಶಕರು. ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇವೆ ಎಂದು ತಮ್ಮ ಭೇಟಿಗೆ ಸ್ಪಷ್ಟನೆ ನೀಡಿದರು. 

ಇದೇ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಪ್ರತಿಕ್ರಿಯಿಸಿ, ನಿಗಮ ಆಗಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಮಾಡಿದ್ದಾರೆ. ಅನುದಾನವನ್ನು ಬೇಡಿಕೆಯಂತೆ ಮುಖ್ಯಮಂತ್ರಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.