ಬೆಂಗಳೂರು, (ನ.24): ರಾಜ್ಯದಲ್ಲಿ ಸಂಪುಟ ಕಸರತ್ತು ಜೋರಾಗಿದ್ದು, ವಿಸ್ತರಣೆಯೋ ಪುನರಚನೆಯೋ ಎನ್ನುವುದು ಇನ್ನೂ ಕೂಡ ನಿಗೂಢವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತ್ತಿವೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದರು. ಇದಾದ ಕೆಲ ಹೊತ್ತಲಿನಲ್ಲಿಯೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್-ಸಿಎಂ ಭೇಟಿ ಭಾರೀ ಕುತೂಹಲ ಮೂಡಿಸಿತ್ತು.

ಸಿಎಂಗಿಂತ ಮೊದಲೇ ಹೋಗಿ ಕುಂತ ಸಾಹುಕಾರ: ದಿಲ್ಲಿಯಲ್ಲಿ ಜಾರಕಿಹೊಳಿ ನಡೆ ಕುತೂಹಲ

ಇದರ ಮುಂದುವರಿದ ಭಾಗವಾಗಿ ಸಚಿವ ರಮೇಶ ಜಾರಕಿಹೊಳಿ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆದಿದೆ. ಹೆಸರಿಗೆ ಭೋಜನಾ ಕೂಟ ಎನ್ನಲಾಗುತ್ತಿದ್ದು, ಇದರಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಶಾಸಕ ರಾಜುಗೌಡ ನಾಯಕ, ಡಾ.ಶಿವರಾಜ್ ಪಾಟೀಲ್, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಇದ್ದರು.

ಇದೇ ಭೋಜನಾ ಕೂಟದ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಭಾಗಿಯಾಗಿರುವುದು ಹಲವು ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.

ಸಾಹುಕಾರ್ ಮನೆಯಲ್ಲಿ ಬಿಜೆಪಿ ಶಾಸಕರ ರಹಸ್ಯ ಸಭೆ: ಇಲ್ಲಿದೆ ಇನ್‍ಸೈಡ್ ಮಾಹಿತಿ

ಶಿರಾ ಹಾಗೂ ಆರ್‌ಆರ್‌ ನಗರ ಉಪಚುನಾವಣೆ ಮುಗಿದ ಬಳಿಕ ಸಂಪುಟ ಕಸರತ್ತು ಜೋರಾಗಿ ನಡೆಯುತ್ತಿದ್ರೆ, ಇದರ ಮಧ್ಯೆ ಸಚಿವ ರಮೇಶ್ ಜಾರಕಿಹೊಳಿ ನಡೆ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಯಾಕಂದ್ರೆ  ಸಿಎಂ ದೆಹಲಿ ತಲುಪುವ ಮುನ್ನವೇ ಬೆಳಗಾವಿ ಸಾಹುಕಾರ ದಿಲ್ಲಿಯಲ್ಲಿದ್ದರು. ಅಲ್ಲದೇ ಬಿ.ಎಲ್ ಸಂತೋಷ್ ಅವರನ್ನ ಭೇಟಿಯಾಗಿದ್ದರು. 

ಇನ್ನು ದೆಹಲಿಗೂ ಹೋಗುವ ಮುನ್ನ ಕಳೆದ ವಾರ ಬೆಂಗಳೂರಿನಲ್ಲಿ ಇದೇ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಓಡಾಟ-ಸಭೆ ರಾಜ್ಯ ಬಿಜೆಪಿಯಲ್ಲಿ ಸಂಚಲವನ್ನುಂಟು ಮಾಡಿರುವುದಂತೂ ಸತ್ಯ