ಬೆಂಗಳೂರು, [ಜ.02]: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದ ರಾಜಕೀಯವಾಗಿ ಮೂಲೆ ಗುಂಪಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನ ಇದೀಗ ರಾಜ್ಯ ನಾಯಕರು ಒಬ್ಬೊಬ್ಬರಾಗಿ ಭೇಟಿ ಮಾಡುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ನಿನ್ನೆ ಅಷ್ಟೇ ಹೊಸ ವರ್ಷ ದಿನದಂದು ಸಚಿವ ಡಿ.ಕೆ ಶಿವಕುಮಾರ್ ಅವರು ಎಸ್​.ಎಂ.ಕೃಷ್ಣ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸರದಿ.

ರಾಜಕೀಯ ಗುರು ಎಸ್‌ಎಂ ಕೃಷ್ಣ ಭೇಟಿ ಮಾಡಿದ ಡಿಕೆಶಿ...ಕಾರಣ?

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರ ಸೂಚನೆಯಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್​.ಎಂ.ಕೃಷ್ಣ ಅವರ ನಿವಾಸಕ್ಕೆ ಬುಧವಾರ ಬಿ.ಎಸ್​.ಯಡಿಯೂರಪ್ಪ ಭೇಟಿ ನೀಡಿದ್ದು, ಹೊಸ ವರ್ಷದ ಶುಭಾಶಗಳನ್ನ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದು, ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕೃಷ್ಣರಿಗೆ ಬಿಎಸ್​ವೈ ಮನವಿ ‌ಮಾಡಿದ್ದಾರೆ ಎನ್ನಲಾಗಿದೆ.

ಬಿಎಸ್ ವೈ ಮನವಿಗೆ ಸ್ಪಂದಿಸಿರುವ ಕೃಷ್ಣ ಅವರು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಸಮ್ಮತಿಸಿದ್ದಾರೆ. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​.ಎಂ.ಕೃಷ್ಣ, ತಾವಾಗಲಿ ತಮ್ಮ ಮಗಳು ಶಾಂಭವಿಯಾಗಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ಪರ ಪ್ರಚಾರಕ್ಕೆ ಸೀಮಿತರಾಗುವುದಾಗಿ ಸ್ಪಷ್ಟನೆ ನೀಡಿದರು.

ಒಟ್ಟಿನಲ್ಲಿ ಇಷ್ಟು ದಿನ ಪಕ್ಷದಲ್ಲಿದ್ರೂ ಕ್ಯಾರೆ ಎನ್ನದ ರಾಜ್ಯ ಬಿಜೆಪಿಗೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಸ್.ಎಂ. ಕೃಷ್ಣ ನೆನಪಾಗಿದ್ದಾರೆ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.