30 ಎಕರೆ ಪ್ರದೇಶದಲ್ಲಿ ಸಮಾವೇಶ: ಮೋದಿ ಮಂಗ್ಳೂರು ರ‍್ಯಾಲಿಗೆ ಭಾರಿ ಸಿದ್ಧತೆ
ಮಂಗಳೂರಿನಲ್ಲಿ ಮೊದಲ ಬಾರಿಗೆ ಮೋದಿ ಸರ್ಕಾರಿ ಕಾರ್ಯಕ್ರಮ, ಐತಿಹಾಸಿಕವಾಗಿ ಆಯೋಜನೆ ನಡೆಸಲು ಬಿಜೆಪಿಯಿಂದ ನಿರ್ಧಾರ
ಮಂಗಳೂರು(ಆ.26): ಸೆ.2ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಸರ್ಕಾರಿ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ನಡೆಸಲು ಬಿಜೆಪಿ ನಿರ್ಧರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 1 ಲಕ್ಷ ಫಲಾನುಭವಿಗಳನ್ನು ಕಾರ್ಯಕ್ರಮದಲ್ಲಿ ಸೇರಿಸುವ ಯೋಜನೆ ಹಾಕಿಕೊಂಡಿದೆ.
ಕೇರಳದ ಕೊಚ್ಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮೋದಿ ಅವರು ನೇರವಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ನಂತರ ನವ ಮಂಗಳೂರು ಬಂದರಿಗೆ ಭೇಟಿ ನೀಡಿ ಸುಮಾರು .1200 ಕೋಟಿಗಳ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಆ ಬಳಿಕ ಸಂಜೆ 5 ಗಂಟೆಗೆ ನಗರದ ಹೊರವಲಯದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇದೀಗ ಅವರು ಸಂಜೆ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲೇ ಈ ಸರ್ಕಾರಿ ಯೋಜನೆಗಳಿಗೆ ಶಿಲಾನ್ಯಾಸ, ಲೋಕಾರ್ಪಣೆ ನೆರವೇರಿಸಲಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ಮೋದಿಯಿಂದ 'ಬೂಸ್ಟರ್ ಡೋಸ್'
ಮೋದಿ ಕಾರ್ಯಕ್ರಮಕ್ಕಾಗಿ ಒಟ್ಟು 90 ಎಕರೆ ವಿಶಾಲವಾದ ಗೋಲ್ಡ್ ಫಿಂಚ್ ಮೈದಾನದ 30 ಎಕರೆಯಲ್ಲಿ ಬೃಹತ್ ಪೆಂಡಾಲ್ ಹಾಕಿ, ಪಕ್ಕದಲ್ಲೇ ಹೆಲಿಪ್ಯಾಡ್, ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತ ಕೆಲಸ- ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಕಾರ್ಯಕ್ರಮಕ್ಕೆ ಮಳೆಯಿಂದ ತೊಂದರೆಯಾಗದಂತೆಯೂ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.
ಮೋದಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಗುರುವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನವನ್ನೂ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಸಚಿವರೂ ಆದ ಸುನಿಲ್ ಕುಮಾರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 1 ಲಕ್ಷ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕು. ಇದಕ್ಕಾಗಿ ಫಲಾನುಭವಿಗಳ ಪಟ್ಟಿತಕ್ಷಣವೇ ಸಿದ್ಧಪಡಿಸಿ ಸಮಾವೇಶಕ್ಕೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಭೇಟಿ: ಟ್ರೋಲ್ ಪೇಜ್‌ಗಳಲ್ಲಿ ರೋಸ್ಟ್ ಆಗ್ತಿರುವ ಸ್ಥಳೀಯ ಬಿಜೆಪಿಗರು
ಪ್ರಧಾನಿ ಕಿಸಾನ್ ಸನ್ಮಾನ್ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಳೆದೆರಡು ವರ್ಷಗಳ ಫಲಾನುಭವಿಗಳ ಗ್ರಾಮವಾರು ಪಟ್ಟಿಗುರುವಾರ ಸಂಜೆಯೊಳಗೆ ಸಿದ್ಧವಾಗಬೇಕು. ಬಳಿಕ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಆಹ್ವಾನ ನೀಡಬೇಕು. ಸಮಾವೇಶದ ದಿನದಂದು ಮಧ್ಯಾಹ್ನ 2.30ರೊಳಗೆ ಎಲ್ಲರೂ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ಪೆಂಡಾಲ್‌ನಲ್ಲಿ ಇರುವಂತಾಗಬೇಕು ಎಂಬುದು ಸೇರಿದಂತೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
4 ಸಾವಿರ ಕೋಟಿ ಯೋಜನೆಗೆ ಚಾಲನೆ:
ಮೋದಿ ಅವರು ಸಂಜೆ 4 ಗಂಟೆಗೆ ಕೊಚ್ಚಿಯಿಂದ ಆಗಮಿಸಲಿದ್ದು, ಗೋಲ್ಡ್‌ಫಿಂಚ್ ಮೈದಾನದಿಂದಲೇ ಸುಮಾರು 4 ಸಾವಿರ ಕೋಟಿ ರು.ಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆಯನ್ನು ಡಿಜಿಟಲ್ ಮೂಲಕ ನೆರವೇರಿಸುವರು. ಸಂಜೆ 5.30ರವರೆಗೆ ಸಮಾವೇಶ ನಡೆಯಲಿದೆ ಎಂದಿದ್ದಾರೆ.
ಕೇಂದ್ರ ಸಚಿವರು, ಸಿಎಂ ಮಂಗಳೂರಿಗೆ:
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಮಾರು ನಾಲ್ವರು ಕೇಂದ್ರ ಸಚಿವರು, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಸಚಿವರ ದಂಡೇ ಮಂಗಳೂರಿಗೆ ಆಗಮಿಸಲಿದೆ. ಉನ್ನತಾಧಿಕಾರಿಗಳೂ ಭಾಗಿಯಾಗಲಿದ್ದಾರೆ.