ಮತಪಟ್ಟಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪವನ್ನು ವಿಷಯಾಂತರ ಮಾಡಲು ರಾಜ್ಯ ಬಿಜೆಪಿ ಸರ್ಕಾರವು ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು (ಡಿ.16): ಮತಪಟ್ಟಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪವನ್ನು ವಿಷಯಾಂತರ ಮಾಡಲು ರಾಜ್ಯ ಬಿಜೆಪಿ ಸರ್ಕಾರವು ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಬಿಜೆಪಿ ಮತ್ತು ಸಚಿವರು ತಿರುಗೇಟು ನೀಡಿದ್ದಾರೆ. ಟ್ವೀಟರ್‌ ಮೂಲಕ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಕಿಡಿಕಾರಿದರೆ, ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕ್ಕರ್‌ ಸ್ಫೋಟದ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದ್ದಾರೆ. ಆದರೆ, ಅದಕ್ಕೆ ಡಿ.ಕೆ.ಶಿವಕುಮಾರ್‌ ಕೆಂಡಾಮಂಡಲವಾಗಿದ್ದು, ಉಗ್ರನನ್ನು ಉಗ್ರ ಎನ್ನದೇ ಡಿ.ಕೆ.ಶಿವಕುಮಾರ್‌ ಅವರಂತೆ ನಮ್ಮ ಬ್ರದರ್ಸ್‌ ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್‌ ಉಗ್ರರ ಪರ ನಿಲ್ಲುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Karnataka Politics: ಒಗ್ಗಟ್ಟು ತೋರಿ ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು

ಸ್ಫೋಟದ ಬಳಿಕ ಎನ್‌ಐಎ ತೀವ್ರಗತಿಯಲ್ಲಿ ಪರಿಗಣಿಸಿ ‘ಡಿಕೆಶಿ ಬ್ರದರ್ಸ್‌’ನನ್ನು ಬಂಧಿಸಿದ ನಂತರ ಉಗ್ರಗಾಮಿ ಸಂಘಟನೆಗಳು ನೇರವಾಗಿ ಬೆಂಬಲ ಘೋಷಿಸಿದ್ದಲ್ಲದೇ ನಮ್ಮ ಹುಡುಗ ಯಶಸ್ವಿಯಾಗಿದ್ದಾನೆ ಎಂದು ಹೇಳಿಕೆ ನೀಡಿದ್ದವು. ಉಗ್ರಗಾಮಿಗಳೇ ಉಗ್ರ ನಮ್ಮವನು ಎಂದು ಅಬ್ಬರಿಸಿದರೂ ಡಿ.ಕೆ.ಶಿವಕುಮಾರ್‌ ಒಪ್ಪಿಕೊಳ್ಳದಿರುವುದು ಯಾಕೆ? ಒಂದು ಸಮುದಾಯದಿಂದ ಸಿಗುವ ನಾಲ್ಕು ಮತಗಳಿಗಾಗಿ ಉಗ್ರನನ್ನೇ ಉಗ್ರನಲ್ಲ ಎನ್ನುವ ಹಂತದಲ್ಲಿ ಕಾಂಗ್ರೆಸ್‌ ಇದೆ ಎಂದರೆ ಇವರಿಗೆ ಅಧಿಕಾರ ನೀಡಿದರೆ ಉಗ್ರರ ಟೆಕ್‌ ಪಾರ್ಕ್ನ್ನೇ ನಿರ್ಮಿಸಿದರೂ ಅಚ್ಚರಿ ಇಲ್ಲ ಎಂದು ಹರಿಹಾಯ್ದಿದೆ.

ಮಂಗಳೂರು ಕುಕ್ಕರ್‌ ಸ್ಫೋಟವನ್ನು ಇಡೀ ಸಮಾಜ ಖಂಡಿಸಿದೆ. ಮುಸಲ್ಮಾನ ಸಮಾಜವೂ ಅದನ್ನು ಖಂಡಿಸಿದೆ. ಆದರೆ, ಕಾಂಗ್ರೆಸ್‌ ಅಧ್ಯಕ್ಷರು ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಾರೆ! ಈ ಮೂಲಕ ತಾವು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಮುನ್ಸೂಚನೆಯನ್ನು ನೀಡಿದ್ದಾರೆ. ಸರ್ಜಿಕಲ್‌ ಸ್ಟೆ್ರೖಕ್‌ ಅನ್ನು ಅಲ್ಲಗೆಳೆದರು, ಏರ್‌ಸ್ಟೆ್ರೖಕ್‌ ಅನ್ನು ಅಲ್ಲಗೆಳೆದರು. ಪುಲ್ವಾಮಾ ದಾಳಿಯನ್ನು ಪಾಕಿಸ್ತಾನದ್ದಲ್ಲ ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ನಡೆದ ಬಹುತೇಕ ಭಯೋತ್ಪಾದನಾ ಘಟನೆಗಳನ್ನೂ ಸಮರ್ಥಿಸಿಕೊಂಡರು. ಕಾಂಗ್ರೆಸ್‌ ಏನನ್ನು ಹೇಳಲು ಹೊರಟಿದೆ? ಭಯೋತ್ಪಾದಕರನ್ನು ಭಯೋತ್ಪಾದಕ ಎನ್ನಲು ಕಾಂಗ್ರೆಸ್ಸಿಗೇಕೆ ಭಯ? ಎಂದು ಕಿಡಿಕಾರಿದೆ.

ಕ್ಷಮೆ ಯಾಚಿಸಬೇಕು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ವಿಚಾರವಾಗಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು. ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಆಗಬೇಕು. ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಯೋತ್ಪಾದಕರ ಬಗ್ಗೆ ಅನುಕಂಪದಿಂದ ಮಾತನಾಡಬಾರದು. ಬಾಂಬ್‌ ಸ್ಫೋಟ ಆದಾಗ ಪಕ್ಷಾತೀತವಾಗಿ ಒಟ್ಟಾಗಿ ನಿಲ್ಲಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಒತ್ತಾಯಿಸಿದ್ದಾರೆ.

ಮತದಾರ ಪಟ್ಟಿ ಅಕ್ರಮದ ಬಗ್ಗೆ ದಾಖಲೆಯಿದ್ದರೆ ಸದನದಲ್ಲಿ ಮಂಡಿಸಿ ಹೋರಾಟ ಮಾಡಲಿ. ಆ ತಾಕತ್ತು ಇಲ್ಲವೇ? ಅದನ್ನು ಬಿಟ್ಟು ಭಯೋತ್ಪಾದಕರನ್ನು ಸಮರ್ಥಿಸಿಕೊಂಡು ಮಾತನಾಡುವುದು ಯಾಕೆ? ಡಿ.ಕೆ. ಶಿವಕುಮಾರ್‌ ಅವರಿಗೆ ಭಯೋತ್ಪಾದಕರ ಬಗ್ಗೆ ಇಷ್ಟೊಂದು ಪ್ರೀತಿ ಯಾಕೆ? ಡಿ.ಕೆ. ಶಿವಕುಮಾರ್‌ ಹೇಳಿಕೆ ನಿಜವಾಗಿಯೂ ಹೇಡಿತನದ್ದು. ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ಕೊಡುವುದು ಅಕ್ಷಮ್ಯ ಅಪರಾಧ. ಕಾಂಗ್ರೆಸ್‌ನವರಿಗೆ ಮುಸ್ಲಿಂ ಭಯೋತ್ಪಾದಕರೆಲ್ಲರೂ ದೇವಲೋಕದಿಂದ ಬಂದ ದೇವತೆಗಳ ರೀತಿ ಕಾಣುತ್ತಾರೆ. ಒಬ್ಬ ಭಯೋತ್ಪಾದಕನಿಗೆ ಪ್ರೀತಿ ತೋರುವುದು ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ: ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಆರೋಪಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಮೂಲಕ ಡಿ.ಕೆ.ಶಿವಕುಮಾರ್‌ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಮತ ರಾಜಕಾರಣಕ್ಕಾಗಿ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಈ ರೀತಿ ಸುತ್ತಿ ಬಳಸಿ ಮಾತನಾಡುವ ಬದಲು ಉಗ್ರ ಕೃತ್ಯ ಎಸಗುವವರೆನ್ನೆಲ್ಲಾ ‘ದೇ ಆರ್‌ ಮೈ ಬ್ರದರ್ಸ್‌’ ಎಂದು ಹೇಳಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತನಿಖೆಯೇ ಇಲ್ಲದೆ ಉಗ್ರ ಎಂದು ಹೇಗೆ ಹೇಳ್ತೀರಾ..?' ಮಂಗಳೂರು ಬ್ಲಾಸ್ಟ್‌ ಬಗ್ಗೆ ಡಿಕೆಶಿ 'ಮೃದು' ಮಾತು

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಟ್ವೀಟ್‌ ಬಗ್ಗೆಯೂ ಶಿವಕುಮಾರ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್‌ಐಎ ತನಿಖೆ ಬಗ್ಗೆ ಗುಮಾನಿಯ ಮಾತನಾಡಿದ್ದಾರೆ. ಹಾಗಾದರೆ ಸ್ಫೋಟ ಪ್ರಕರಣದ ತನಿಖೆಯನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮೂಲಕ ಮಾಡಿಸಬೇಕೇ? ಚುನಾವಣೆ ಹೊಸ್ತಿಲಲ್ಲಿ ಉಗ್ರರೆಲ್ಲಾ ನಿಮ್ಮ ಬಂಧುಗಳಾಗುತ್ತಾರೆಯೇ? ಎಂದು ಕಿಡಿಕಾರಿದ್ದಾರೆ.