ವಿಜಯ್‌ ಮಲಗಿಹಾಳ

ಬೆಂಗಳೂರು [ಜ.13]:  ಉಪಚುನಾವಣೆಯ ಫಲಿತಾಂಶ ಹೊರಬಿದ್ದು ಒಂದು ತಿಂಗಳಾದರೂ ಅರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಂಪುಟ ವಿಸ್ತರಣೆಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಮಯಾವಕಾಶ ಕಲ್ಪಿಸದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈ ತಿಂಗಳ 18ರಂದು ಹುಬ್ಬಳ್ಳಿಗೆ ಬಂದಾಗಲೂ ಆ ಬಗ್ಗೆ ಸಮಾಲೋಚನೆ ನಡೆಸುವುದು ಅನುಮಾನವಿದೆ.

ಸರ್ಕಾರದ ಆಡಳಿತವೈಖರಿಗೆ ಸಂಬಂಧಿಸಿದಂತೆ ಕೆಲವು ಆಂತರಿಕ ವಿಚಾರಗಳು ಇತ್ಯರ್ಥಗೊಳ್ಳದ ಹೊರತು ಸಂಪುಟ ವಿಸ್ತರಣೆ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಸಾಧ್ಯವಿಲ್ಲ ಎಂಬ ಸಂದೇಶವನ್ನು ವರಿಷ್ಠರು ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ಇದುವರೆಗೂ ಅಮಿತ್‌ ಶಾ ಅವರು ತಮ್ಮ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ, ಆಡಳಿತವೈಖರಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳು ಬಗೆಹರಿಯಬೇಕು. ಅವುಗಳನ್ನು ಇತ್ಯರ್ಥಗೊಳಿಸಿದಲ್ಲಿ ಅವರ ಮುಂದಿನ ದಾರಿಯನ್ನು ನಾವು ಸುಗಮಗೊಳಿಸುತ್ತೇವೆ. ಮುಂದಿನ ಮೂರೂವರೆ ವರ್ಷಗಳ ಕಾಲ ಆಡಳಿತ ಹೇಗೆ ಸಾಗುತ್ತದೆ ಎಂಬುದು ನಮಗೆ ಮನವರಿಕೆಯಾಗಬೇಕು. ಅದನ್ನು ಮೊದಲು ಮನವರಿಕೆ ಮಾಡದೆ ಸಂಪುಟ ವಿಸ್ತರಣೆ ಮಾಡುವುದು ಸರಿಯಲ್ಲ. ಏನೇ ಇದ್ದರೂ ಈಗಲೇ ಎಲ್ಲವೂ ಸ್ಪಷ್ಟವಾಗಬೇಕು ಎಂಬ ಸಂದೇಶ ರೂಪದ ಮಾತನ್ನು ಅಮಿತ್‌ ಶಾ ಅವರು ಕೆಲವು ದಿನಗಳ ಹಿಂದೆಯೇ ಯಡಿಯೂರಪ್ಪ ಅವರ ಆಪ್ತರ ಮೂಲಕ ರವಾನಿಸಿದ್ದಾರೆ. ಆದರೆ, ಆ ಆಂತರಿಕ ವಿಚಾರಗಳು ಯಾವುವು ಎಂಬುದನ್ನು ಮೂಲಗಳು ತಿಳಿಸಲು ನಿರಾಕರಿಸಿವೆ.

ಬಿಗ್ ಶಾಕ್ ಕೊಟ್ಟ ಹೈಕಮಾಂಡ್: ಸಚಿವರಾಗ್ಬೇಕೆಂದು ಬಿಜೆಪಿಗೆ ಹೋದವರಿಗೆಲ್ಲ ಇಲ್ಲ ಮಂತ್ರಿಗಿರಿ?...

ಇದೇ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಕಳೆದೊಂದು ತಿಂಗಳಿಂದ ದೆಹಲಿಗೆ ತೆರಳುತ್ತೇನೆ ಎಂದು ಹೇಳುತ್ತಲೇ ಇದ್ದಾರೆಯೇ ಹೊರತು ದೆಹಲಿಗೆ ಹೋಗಲೇ ಇಲ್ಲ. ಅಮಿತ್‌ ಶಾ ಅವರು ಬ್ಯುಸಿಯಾಗಿದ್ದಾರೆ ಎಂದೂ ಹೇಳಿದರು. ಅಮಿತ್‌ ಶಾ ಅವರು ಭೇಟಿಗೆ ಇನ್ನೂ ಸಮಯ ನೀಡಿಲ್ಲ ಎಂಬ ಮಾತನ್ನೂ ಹೇಳಿದರು. ವಾಸ್ತವವಾಗಿ ಶನಿವಾರ ರಾತ್ರಿ ದೆಹಲಿಗೆ ತೆರಳಲು ಸಿದ್ಧರಾಗಿದ್ದರು. ಆದರೆ, ಭೇಟಿಯ ಬಗ್ಗೆ ಯಾವುದೇ ಮಾತು ಬರದೇ ಇರುವ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ಬರಿಗೈಲಿ ವಾಪಸ್‌ ಬಂದರೆ ಅದು ಮುಜುಗರ ಉಂಟುಮಾಡಬಹುದು ಎಂಬ ಕಾರಣಕ್ಕಾಗಿ ರದ್ದುಪಡಿಸಿದರು ಎನ್ನಲಾಗಿದೆ.

ಒಂದೆಡೆ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಅಮಿತ್‌ ಶಾ ಅವರು ಭೇಟಿಗೇ ಸಮಯ ನೀಡುತ್ತಿಲ್ಲ. ಮತ್ತೊಂದೆಡೆ ಪ್ರತಿನಿತ್ಯ ಬೆಳಗಾದರೆ ಅರ್ಹ ಶಾಸಕರು ಸಂಪುಟ ವಿಸ್ತರಣೆ ಕೈಗೊಳ್ಳುವಂತೆ ಒತ್ತಾಯಿಸಿ ಯಡಿಯೂರಪ್ಪ ಅವರ ಮನೆಗೆ ಎಡತಾಕುತ್ತಲೇ ಇದ್ದಾರೆ. ಇದೆಲ್ಲದರಿಂದಾಗಿ ಯಡಿಯೂರಪ್ಪ ಅವರಿಗೆ ಬೇಸರ ಆಗಿದ್ದರೂ ಅದನ್ನು ತೋರ್ಪಡಿಸಿಕೊಳ್ಳುವಂತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದುವರೆಗೆ ಧನುರ್ಮಾಸದ ಕಾರಣ ಮುಂದೊಡ್ಡಿ ಅರ್ಹ ಶಾಸಕರನ್ನು ಸಮಾಧಾನಗೊಳಿಸಲಾಗಿತ್ತು. ಇದೀಗ ಸಂಕ್ರಾಂತಿಗೆ ಧನುರ್ಮಾಸ ಮುಗಿದ ಬಳಿಕವೂ ವಿಳಂಬವಾದಲ್ಲಿ ಆಗ ಅರ್ಹ ಶಾಸಕರಿಗೆ ಏನು ಹೇಳಬೇಕು ಎಂಬ ಜಿಜ್ಞಾಸೆಯಲ್ಲಿ ಯಡಿಯೂರಪ್ಪ ಅವರಿದ್ದಾರೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರು ಪ್ರತಿಷ್ಠಿತ ವಿಶ್ವ ಆರ್ಥಿಕ ಶೃಂಗ ಸಮ್ಮೇಳನದಲ್ಲಿ ಭಾಗಿಯಾಗಲು ಸ್ವಿಜರ್‌ಲೆಂಡ್‌ಗೆ ತೆರಳಬೇಕಿದ್ದ ಪ್ರವಾಸವನ್ನೂ ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಅಮಿತ್‌ ಶಾ ಅವರು 18ರಂದು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಗೆ ತೆರೆ ಬೀಳುತ್ತಾ ಅಥವಾ ಮತ್ತಷ್ಟುಕಾಲ ವಿಳಂಬವಾಗುತ್ತಾ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿ ಮೂಡಿದೆ.

ಸಿಎಂ, ವರಿಷ್ಠರ ಭೇಟಿ ವಿಳಂಬ ಏಕೆ?

-ಬಿಎಸ್‌ವೈ ಆಡಳಿತವೈಖರಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳು ಬಗೆಹರಿಯಬೇಕು ಎಂಬುದು ವರಿಷ್ಠರ ಪಟ್ಟು

-ಮುಂದಿನ ಮೂರೂವರೆ ವರ್ಷಗಳ ಕಾಲ ಆಡಳಿತ ಹೇಗೆ ಸಾಗುತ್ತದೆ ಎಂಬುದು ಮನವರಿಕೆಯಾಗಬೇಕು. ಇದಾಗದೆ ಸಂಪುಟ ವಿಸ್ತರಣೆ ಮಾಡುವುದು ಸರಿಯಲ್ಲ ಎಂಬುದು ಬಿಜೆಪಿ ವರಿಷ್ಠರ ಅಭಿಮತ

- ಹೀಗಾಗಿ ಹುಬ್ಬಳ್ಳಿಗೆ ಜ.18ರಂದು ಅಮಿತ್‌ ಶಾ ಆಗಮಿಸಿದಾಗಲೂ ಬಿಎಸ್‌ವೈ ಚರ್ಚೆ ಅನುಮಾನ