Asianet Suvarna News Asianet Suvarna News

Ramanagara: ಕಮಲ ಅರ​ಳಿ​ಸಲು ಬಿಜೆ​ಪಿ​ಯಿಂದ ಶ್ರೀರಾ​ಮನ ಜಪ: ಎಚ್‌ಡಿಕೆ, ಡಿಕೆ​ಶಿ ಕಟ್ಟಿಹಾಕುವ ಪ್ಲಾನ್‌

ವಿಧಾ​ನ​ಸಭಾ ಚುನಾ​ವ​ಣೆಗೆ ಮೂರ್ನಾಲ್ಕು ತಿಂಗಳು ಬಾಕಿ​ಯಿ​ರುವ ಕಾರಣ ಹಳೇ ಮೈಸೂರಿನಲ್ಲಿ ನೆಲೆ ಕಂಡು​ಕೊ​ಳ್ಳಲು ಹಾತೊ​ರೆ​ಯು​ತ್ತಿ​ರುವ ಬಿಜೆಪಿ ಇದೀಗ ಶ್ರೀರಾ​ಮನ ಜಪ ಮಾಡಲು ಆರಂಭಿ​ಸಿದೆ. 

Karnataka BJP government all set to build Ram Mandir at Ramdevara Betta near Ramanagara gvd
Author
First Published Dec 30, 2022, 7:54 PM IST

ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ (ಡಿ.30): ವಿಧಾ​ನ​ಸಭಾ ಚುನಾ​ವ​ಣೆಗೆ ಮೂರ್ನಾಲ್ಕು ತಿಂಗಳು ಬಾಕಿ​ಯಿ​ರುವ ಕಾರಣ ಹಳೇ ಮೈಸೂರಿನಲ್ಲಿ ನೆಲೆ ಕಂಡು​ಕೊ​ಳ್ಳಲು ಹಾತೊ​ರೆ​ಯು​ತ್ತಿ​ರುವ ಬಿಜೆಪಿ ಇದೀಗ ಶ್ರೀರಾ​ಮನ ಜಪ ಮಾಡಲು ಆರಂಭಿ​ಸಿದೆ. ಜೆಡಿ​ಎಸ್‌- ಕಾಂಗ್ರೆಸ್‌ ಭದ್ರ​ಕೋ​ಟೆ​ಯಾ​ಗಿ​ರುವ ಹಳೇ ಮೈಸೂರು ಭಾಗ​ದಲ್ಲಿ ಕಮಲ ಅರ​ಳಿ​ಸು​ವುದು ಹಾಗೂ ಜೆಡಿ​ಎಸ್‌ ವರಿಷ್ಠ ಕುಮಾ​ರ​ಸ್ವಾಮಿ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಧಾರ್ಮಿ​ಕ​ ಭಾವ​ನೆ​ಯಲ್ಲಿ ಕಟ್ಟಿಹಾಕು​ವ ಪ್ಲಾನ್‌ ಬಿಜೆ​ಪಿ​ಯದು. ಇದ​ಕ್ಕಾ​ಗಿಯೇ ರಾಮ​ನ​ಗ​ರ​ದ​ಲ್ಲಿ​ರುವ ರಾಮ​ದೇ​ವರ ಬೆಟ್ಟ​ವನ್ನು ​​ಅ​ಯೋಧ್ಯೆ ದಕ್ಷಿಣ ಕೇಂದ್ರ​ವ​ನ್ನಾಗಿ ಮಾಡಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ದಾಳ​ ಉರು​ಳಿ​ಸಿದೆ.

ಅಲ್ಲದೆ, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮದೇವರ ಬೆಟ್ಟದಲ್ಲಿರುವ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ ಒಂದು ದೇಗುಲ ನಿರ್ಮಿಸಲು ತ್ವರಿತವಾಗಿ ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸಬೇಕೆಂದು ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಜ​ರಾಯಿ ಖಾತೆ ಸಚಿವೆ ಶಶಿ​ಕಲಾ ಜೊಲ್ಲೆ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಇದೆಲ್ಲ ಕಾರ​ಣ​ದಿಂದಾಗಿ ರಾಮ​ದೇ​ವರ ಬೆಟ್ಟ ತೀವ್ರ ಚರ್ಚೆಗೆ ಗ್ರಾಸ​ವಾ​ಗಿದೆ.

ಜಾತಿ, ಧರ್ಮಾಧಾ​ರಿತ ರಾಜ​ಕೀ​ಯಕ್ಕೆ ಮನ್ನಣೆ ನೀಡಲ್ಲ: ಅನಿತಾ ಕುಮಾ​ರ​ಸ್ವಾಮಿ

ರಾಮ​ದೇ​ವರ ಬೆಟ್ಟ ಪರಿ​ಸರ ಸೂಕ್ಷ್ಮ ವಲ​ಯ: ‘ಶೋಲೆ’ ಸಿನಿಮಾ ಮೂಲಕ ಖ್ಯಾತಿಗೆ ಬಂದ ಶ್ರೀ ರಾಮದೇವರ ಬೆಟ್ಟಕ್ಕೆ ಪೌರಾಣಿಕ ಇತಿಹಾಸವಿದೆ. ಜೊತೆಗೆ ರಣಹದ್ದುಗಳ ವನ್ಯಜೀವಿಧಾಮ ಎಂಬ ಹೆಗ್ಗಳಿಕೆಯೂ ಇದೆ. ಈ ಬೆಟ್ಟದಲ್ಲಿರುವ ಅಪ​ರೂ​ಪದ ಲಾಂಗ್‌ ಬಿಲ್ಡ್‌ ಹಾಗೂ ವೈಟ್‌ಬ್ಯಾಕ್‌ ರಣ​ಹ​ದ್ದು​ಗ​ಳನ್ನು ಸಂರ​ಕ್ಷಿ​ಸುವ ಸಲು​ವಾಗಿ ರಾಜ್ಯ ಸರ್ಕಾರ 2012ರಲ್ಲಿಯೇ ಶ್ರೀ ರಾಮದೇವರ ಬೆಟ್ಟವನ್ನು ಅಭಯಾರಣ್ಯ ಎಂದು ಘೋಷಿಸಿದೆ.

ದಕ್ಷಿಣ ಭಾರತದಲ್ಲಿರುವ ಏಕೈಕ ರಣಹದ್ದುಗಳ ವನ್ಯಧಾಮವಾದ ಶ್ರೀ ರಾಮದೇವರಬೆಟ್ಟವನ್ನು ಕೇಂದ್ರ ಸರ್ಕಾರ 2016ರಲ್ಲಿ ಪರಿಸರ ಸೂಕ್ಷ್ಮ ವಲಯವೆಂದು ಗೆಜೆಟ್‌ ಮೂಲಕ ಘೋಷಿಸಿದೆ. ಬೆಟ್ಟದ ಅಂಚಿನಿಂದ ಸುತ್ತಮುತ್ತ 1.80 ಕಿ.ಮೀ. ವ್ಯಾಪ್ತಿಯಲ್ಲಿ (ಹರೀಸಂದ್ರ, ವಡೇರಹಳ್ಳಿ, ಮಾದಾಪುರ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಬಸನವಪುರ, ಹಳ್ಳಿಮಾಳ ಗ್ರಾಮಗಳ ಕೆಲವು ಭಾಗಗಳು, ಬೆಂಗಳೂರು - ಮೈಸೂರು ಹೆದ್ದಾರಿಯ ಕೆಲವು ಭಾಗ ಸೂಕ್ಷ್ಮ ವಲಯಕ್ಕೆ ಒಳಪಟ್ಟಿದೆ) ಪರಿಸರ ಸೂಕ್ಷ್ಮ ವಲಯ ವಿಸ್ತರಿಸಲಾಗಿದೆ.

ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದೆ. ಕೇವಲ ಬೆರ​ಳ​ಣಿ​ಕೆ​ಯ​ಷ್ಟಿದ್ದ ಉದ್ದಕೊಕ್ಕಿನ ರಣಹದ್ದುಗಳನ್ನು ರಕ್ಷಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಈ ಪ್ರದೇಶವನ್ನು ವನ್ಯಜೀವಿಧಾಮವನ್ನಾಗಿ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದೆ.  ಈ ಹಿಂದೆ ಕರ್ನಾ​ಟಕ ಪ್ರವಾ​ಸೋ​ದ್ಯಮ ಇಲಾಖೆ ರಾಮ​ದೇ​ವರ ಬೆಟ್ಟ​ದಲ್ಲಿ ಸುಮಾರು 7.50 ಕೋಟಿ ರುಪಾಯಿ ವೆಚ್ಚ​ದಲ್ಲಿ ತ್ರೀ ಡಿ ವರ್ಚು​ವಲ್‌ ರಿಯಾ​ಲಿಟಿ ವಿಲೇಜ್‌ ಅನ್ನು ನಿರ್ಮಾಣ ಮಾಡಲು ನಿರ್ಧ​ರಿ​ಸಿತ್ತು.

ಮಂದಿರ ನಿರ್ಮಾಣ ಸಚಿ​ವರ ಸಂಕಲ್ಪ: ಶೋಲೆ ಸಿನಿಮಾ ಚಿತ್ರೀ​ಕ​ರಣ ವೇಳೆ ಹಳ್ಳಿಯ ಸೆಟ್‌ ಸೃಷ್ಟಿ​ಸ​ಲಾ​ಗಿತ್ತು. ಅದೇ ಹಳ್ಳಿಯನ್ನು ಮತ್ತೆ ಸೃಷ್ಟಿ​ಸುವುದು ತ್ರೀ ಡಿ ವರ್ಚು​ವಲ್‌ ರಿಯಾ​ಲಿಟಿ ವಿಲೇಜ್‌ ನ ಉದ್ದೇ​ಶ​ವಾ​ಗಿತ್ತು. ಆದರೆ, ಪರಿ​ಸರ ಪ್ರೇಮಿ​ಗಳಿಂದ ತೀವ್ರ ವಿರೋಧ ವ್ಯಕ್ತ​ವಾದ ಹಿನ್ನೆ​ಲೆ​ಯಲ್ಲಿ ಆ ಯೋಜ​ನೆ​ಯನ್ನು ಕೈ ಬಿಡಲಾ​ಯಿತು. ಆದ​ರೀಗ ರಾಮ​ದೇ​ವರ ಬೆಟ್ಟದ ಜೀರ್ಣೋ​ದ್ಧಾ​ರದ ಜೊತೆಗೆ ಅಯೋಧ್ಯೆ ಮಾದರಿ ರಾಮ ಮಂದಿರ ನಿರ್ಮಾ​ಣಕ್ಕೆ ಬಿಜೆಪಿ ಸರ್ಕಾ​ರದ ಸಚಿ​ವರೇ ಸಂಕಲ್ಪ ಮಾಡಿ​ರು​ವುದು ರಾಜ​ಕೀಯ ಚರ್ಚೆಗೆ ಎಡೆ ಮಾಡಿ​ಕೊ​ಟ್ಟಿದೆ.

ಅನುಮತಿ ಸಿಗುವುದು ಅನುಮಾನ: ಲಾಂಗ್‌ ಬಿಲ್ಡ್‌ ವಲ್ಚರ್ಸ್‌ ಒಂದು ಬಾರಿಗೆ ಒಂದೇ ಮೊಟ್ಟೆಯಿಡುವ ಕಾರಣ ಇವುಗಳ ಸಂತತಿ ಬೇಗನೆ ಹೆಚ್ಚಾಗುವುದಿಲ್ಲ. ಹಾಗಾಗಿ ಸೂಕ್ಷ್ಮವಾಗಿ ಇವುಗಳನ್ನು ಕಾಪಾಡಬೇಕಾಗಿದೆ. ಈ ಬೆಟ್ಟವು ದೇಶದ ಏಕೈಕ ರಣಹದ್ದು ಸಂರಕ್ಷಿತಾ ವಲಯ. ಅಲ್ಲದೆ, ರಣಹದ್ದುಗಳಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ರಾಮದೇವರ ಬೆಟ್ಟದ ಸುತ್ತಲು ಸಸಿಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಇಲ್ಲಿ ಭೇಟಿ ನೀಡಲು ಇಲಾಖೆಯಿಂದ ಅನುಮತಿ ಬೇಕು. ಹೀಗಾಗಿ ಈ ಜಾಗದಲ್ಲಿ ಮನರಂಜನಾ, ಕಟ್ಟಡ ನಿರ್ಮಾ​ಣ​ದಂತಹ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೆ ಅವಕಾಶ ನೀಡದೆ ಅರಣ್ಯಇಲಾಖೆಯೇ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಮಾಸ್ಟರ್‌ ಪ್ಲಾನ್‌: ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿದಂತೆ ಜೋನಲ್‌ ಮಾಸ್ಟರ್‌ ಪ್ಲಾನ್‌ ರಾಜ್ಯ ಸರ್ಕಾರ ತಯಾರಿಸಬೇಕು. ಪರಿಸರ, ಅರಣ್ಯ, ನಗರಾಭಿವೃದ್ಧಿ, ನಗರಸಭೆ, ಪ್ರವಾಸೋದ್ಯಮ, ಕೃಷಿ, ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋ​ಕೋ​ಪ​ಯೋಗಿ ಇಲಾಖೆಗಳು ಸೇರಿ ಮಾಸ್ಟರ್‌ ಪ್ಲಾನ್‌ ಸಿದ್ದಪಡಿಸಬೇಕು.

Ramanagara: ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಆಯ್ಕೆ ಕುರಿತು ಚುನಾ​ವಣಾ ಸಮಿತಿ ಸಭೆ

ಪರಿ​ಸರ ಸೂಕ್ಷ್ಮ ವಲಯ ಗಡಿ​ಯಿಂದ 1 ಕಿ.ಮೀ. ಸುತ್ತ​ಳ​ತೆ​ಯಲ್ಲಿ ನಿಷೇ​ಧಿತ - ನಿರ್ಬಂಧಿತ ಚಟು​ವ​ಟಿ​ಕೆ​ಗ​ಳು
ನಿಷೇದಿತ ಚಟುವಟಿಕೆಗಳು:
ಕಲ್ಲು ಗಣಿಗಾರಿಕೆ, ಸಾಮಿಲ್ ಸ್ಥಾಪನೆ, ವಾಯು, ಜಲ, ಶಬ್ದ, ಮಣ್ಣು ಮಾಲಿನ್ಯಕ್ಕೆ ಸಾಧ್ಯವಾಗುವ ಕೈಗಾರಿಕೆಗಳ ನಿರ್ಮಾಣ, ಜಲ ವಿದ್ಯುತ್‌ ಯೋಜನೆ, ಕೃಷಿ ನೀರಾವರಿ ಯೋಜನೆ, ರಾಕ್‌ ಕ್ಲೈಂಬಿಂಗ್‌, ದೊಟ್ಟಮಟ್ಟದ ಕೃಷಿ, ತೋಟಗಾರಿಕೆ ಕ್ಷೇತ್ರದ ಉತ್ಪಾದನಾ ಚಟುವಟಿಕೆ (ಕೈಗಾರಿಕೆ ರೀತಿ), ಮಾಂಸ ಸಂಸ್ಕರಣ ಘಟಕ, ಪ್ರಾಣಿ ಚಿಕಿತ್ಸೆಯಲ್ಲಿ ಡೈಕ್ಲೋಫೆನಾಕ್‌ ಔಷಧಿ ಬಳಕೆ.

ನಿರ್ಬಂಧಿತ ಚಟುವಟಿಕೆಗಳು: ಹೊಸದಾಗಿ ಹೋಟೆಲ್‌ ಗಳು, ರೆಸಾರ್ಚ್‌ಗಳ ಸ್ಥಾಪನೆ , ಹೊಸದಾಗಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ವಿದ್ಯುತ್‌ ಅಥವಾ ಸಂಪರ್ಕ ಟವರ್‌ ಗಳ ಸ್ಥಾಪನೆಗೆ ನಿರ್ಬಂಧ. ರಸ್ತೆಗಳನ್ನು ಸಹ ಅಗಲೀಕರಣ ಮಾಡು​ವಂತಿಲ್ಲ. ಸ್ಥಳೀಯರು ತಮ್ಮ ವಾಸದ ಮನೆ ನಿರ್ಮಿಸಿಕೊಳ್ಳಲು ಅಡ್ಡಿಯಿಲ್ಲ. ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಾಗದ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ.

Follow Us:
Download App:
  • android
  • ios