Ramanagara: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಚುನಾವಣಾ ಸಮಿತಿ ಸಭೆ
2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಪಕ್ಷ ಬುಧವಾರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ವೀಕ್ಷಕರ ಮೂಲಕ ಚುನಾವಣಾ ಸಮಿತಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.29): 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಪಕ್ಷ ಬುಧವಾರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ವೀಕ್ಷಕರ ಮೂಲಕ ಚುನಾವಣಾ ಸಮಿತಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣಾ ಸ್ಪರ್ಧೆಗೆ ಅರ್ಜಿ ಆಹ್ವಾನ ಮಾಡಿತ್ತು. ಅದರಂತೆ ಒಂದೊಂದು ಕ್ಷೇತ್ರದಲ್ಲಿ ಮೂರ್ನಾಲ್ಕು ಹಾಗೂ ಏಳೆಂಟು ಅರ್ಜಿಗಳೂ ಸಲ್ಲಿಕೆಯಾಗಿವೆ. ಜಿಲ್ಲಾ ಸಮಿತಿಗಳಿಗೆ ಆ ಅರ್ಜಿಗಳನ್ನು ವಾಪಸ್ ಕಳುಹಿಸಿ ಪ್ರತಿ ಕ್ಷೇತ್ರದಿಂದ ಗೆಲ್ಲುವಂತಹ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿ ಕಳುಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಾಮನಗರದ ಹೊರ ವಲಯದ ರೆಸಾರ್ಚ್‌ನಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಸದಸ್ಯೆ ಮಾಜಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಟಿಕೆಟ್ ಆಕಾಂಕ್ಷಿತರ ಅರ್ಜಿ ವಿಲೇವಾರಿ ಮಾಡುವ ಸಲುವಾಗಿಯೇ ರಾಮನಗರ ಜಿಲ್ಲಾ ಚುನಾವಣಾ ಸಮಿತಿ ಸಭೆ ನಡೆಯಿತು. ರಾಮನಗರ, ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿತ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಹಿರಿಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ವೀಕ್ಷಕರು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪಂಚರತ್ನ ಜಾರಿಗೆ: ನಿಖಿಲ್ ಕುಮಾರಸ್ವಾಮಿ
ಈ ಸಭೆಯಲ್ಲಿ ಆಕಾಂಕ್ಷಿತ ಅಭ್ಯರ್ಥಿಗಳ ಬಗ್ಗೆ ಇರುವ ಅಭಿಪ್ರಾಯ ಹಾಗೂ ಗೆಲ್ಲುವ ಸಾಮಥ್ಯರ್ಗಳ ಕುರಿತು ಚರ್ಚೆ ನಡೆಸಿರುವ ವೀಕ್ಷಕರು, ಯಾವುದೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸದೇ ಪಟ್ಟಿಸಿದ್ಧಪಡಿಸಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಿಕೊಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ವೀಕ್ಷಕರನ್ನು ಕಳುಹಿಸಿ ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಟಿಕೆಟ್ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಪ್ರತ್ಯೇಕ ಸಮೀಕ್ಷೆ ನಡೆಸಿದ್ದಾರೆ. ಆ ಮೂಲಕ ಆಯಾಯ ಕ್ಷೇತ್ರಗಳು ಹಾಗೂ ಆಕಾಂಕ್ಷಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಈಗಾಗಲೇ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ 11 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಬಯಸಿದ್ದಾರೆ. ಪ್ರತಿಯೊಬ್ಬ ಆಕಾಂಕ್ಷಿಯ ಬಗ್ಗೆ ಕ್ಷೇತ್ರದಲ್ಲಿರುವ ಅಭಿಪ್ರಾಯ, ಜಾತಿ ಲೆಕ್ಕಾಚಾರ, ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯ ಸೋಲಿನ ಅಂತರ, ಹಾಲಿ ಶಾಸಕರ ಬಗ್ಗೆ ಕ್ಷೇತ್ರದಲ್ಲಿರುವ ಅಭಿಪ್ರಾಯ, ಹೊಸ ಮುಖಗಳ ಬಗ್ಗೆ ಇರುವ ಮಾಹಿತಿ ಎಲ್ಲವೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆಯಾಗಲಿದೆ. ಅಭ್ಯರ್ಥಿಗಳಿಗೆ ಇರುವ ಗೆಲ್ಲುವ ಶಕ್ತಿ ಹಾಗೂ ಅವರ ಬಗ್ಗೆ ಸಮೀಕ್ಷೆಗಳಲ್ಲಿ ಬಂದಿರುವ ಮಾಹಿತಿಯ ಬಗ್ಗೆ ಸಮಾಲೋಚನೆ ನಡೆಸಿದ ತರುವಾಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಚನ್ನಪಟ್ಟಣ ಕ್ಷೇತ್ರ ಅಭ್ಯರ್ಥಿ ಆಯ್ಕೆ ಕಗ್ಗಂಟು: ರಾಮನಗರ, ಮಾಗಡಿ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿತ ಅಭ್ಯರ್ಥಿಗಳ ಹೆಸರು ಅಂತಿಮಗೊಂಡರೆ, ಚನ್ನಪಟ್ಟಣ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿಗಳ ಆಯ್ಕೆಯೂ ಕಗ್ಗಂಟಾಗಿಯೇ ಉಳಿಯಿತು. ಚುನಾವಣಾ ಸಮಿತಿ ಸಭೆಯಲ್ಲಿ ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್, ಮಾಗಡಿ ಕ್ಷೇತ್ರದಿಂದ ಬಾಲಕೃಷ್ಣ ಹಾಗೂ ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಅಭ್ಯರ್ಥಿಗಳೆಂದು ಅಂತಿಮಗೊಳಿಸಲು ಸಹಮತ ವ್ಯಕ್ತವಾಯಿತು. ಮೊದಲು ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದ ಕೆಪಿಸಿಸಿ ವೀಕ್ಷಕರು ಆನಂತರ ಆಕಾಂಕ್ಷಿತ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು.
ಅಲ್ಲದೆ, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಗಳಿಂದಲೂ ಆಕಾಂಕ್ಷಿತ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರು ಎನ್ನಲಾಗಿದೆ. ಸಭೆಯಲ್ಲಿ ರಾಮನಗರ ಕ್ಷೇತ್ರ ಅಭ್ಯರ್ಥಿ ವಿಚಾರವಾಗಿ ಒಂದಿಬ್ಬರು ಮುಖಂಡರು ಡಿ.ಕೆ.ಶಿವಕುಮಾರ್ ಅಥವಾ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕು. ಇಲ್ಲಿಂದ ಗೆದ್ದವರು ಮುಖ್ಯಮಂತ್ರಿ ಆಗುತ್ತಾರೆಂದು ಸಲಹೆ ನೀಡಿದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಇಕ್ಬಾಲ್ ಹುಸೇನ್ ಅವರೇ ಅಭ್ಯರ್ಥಿಯಾಗಲಿದ್ದು, ಇದರಲ್ಲಿ ಯಾವ ಅನುಮಾನವೂ ಬೇಡ. ರಾಮನಗರ ಮಾತ್ರವಲ್ಲ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗೆದ್ದವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿ ಬಾಯಿ ಮುಚ್ಚಿಸಿದರು. ಕಳೆದ ಚುನಾವಣೆಯಲ್ಲಿ ಸೋತರೂ ಇಕ್ಬಾಲ್ ಕ್ಷೇತ್ರದಲ್ಲಿ ಜನರ ಕಷ್ಟಸುಖಗಳನ್ನು ಆಲಿಸುತ್ತಿದ್ದಾರೆ. ಇಕ್ಬಾಲ್ ರವರು ಅರ್ಜಿ ಸಲ್ಲಿಸುತ್ತಾರೆ ಅಷ್ಟೆ.
Ramanagara: ರಾಗಿ ಬೆಂಬಲ ಬೆಲೆ ನೋಂದಣಿಯಲ್ಲಿ ಕುಸಿತ!
ಡಿ.ಕೆ.ಶಿವಕುಮಾರ್ ಅವರೇ ಅಭ್ಯರ್ಥಿಯೆಂದು ಭಾವಿಸಿ ಕೆಲಸ ಮಾಡಬೇಕು. ಜೆಡಿಎಸ್ನಿಂದ ಯಾರೇ ಅಭ್ಯರ್ಥಿಯಾದರು ಕುಮಾರಸ್ವಾಮಿರವರೇ ಎದುರಾಳಿಯೆಂದು ತಿಳಿದು ಹೋರಾಟ ನಡೆಸಬೇಕು ಎಂದು ಕಿವಿಮಾತು ಹೇಳಿದರೆಂದು ತಿಳಿದು ಬಂದಿದೆ. ಮಾಗಡಿ ಕ್ಷೇತ್ರದಿಂದ ಬಾಲಕೃಷ್ಣ ಹಾಗೂ ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಪರ ಒಲವು ವ್ಯಕ್ತವಾಯಿತು. ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ 8 ಮಂದಿ ಆಕಾಂಕ್ಷಿತರು ಇದ್ದಿದ್ದರಿಂದ ಅವರೆಲ್ಲರ ಅಭಿಪ್ರಾಯಗಳನ್ನು ವೀಕ್ಷಕರು ಪಡೆದುಕೊಂಡರು. ಕೆಪಿಸಿಸಿ ಉಪಾಧ್ಯಕ್ಷರಾದ ಮಾಜಿ ಸಚಿವ ನರೇಂದ್ರಸ್ವಾಮಿ , ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ , ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.