ಬೆಂಗಳೂರು, (ನ.14): ಇಂದು (ಗುರುವಾರ) ಅಧಿಕೃತವಾಗಿ ಬಿಜೆಪಿ ಸೇರಿದ ಅನರ್ಹ ಶಾಸಕರಲ್ಲಿ 13 ಮಂದಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದ್ದು, ಇದೀಗ 2ನೇ ಪಟ್ಟಿ ಬಿಡುಗಡೆ ಮಾಡಿದೆ.

 ಈ ಮೂಲಕ ಬಿಜೆಪಿ 15 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದ್ದು, ರಾಣೇಬೆನ್ನೂರು ಕ್ಷೇತ್ರವೊಂದೇ ಬಾಕಿ ಉಳಿದಂತಾಯ್ತು.

ಬೈ ಎಲೆಕ್ಷನ್: 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

 2ನೇ ಪಟ್ಟಿಯಲ್ಲಿ ಕೇವಲ ಶಿವಾಜಿನಗರದ ಅಭ್ಯರ್ಥಿಯನ್ನು ಮಾತ್ರ ಘೋಷಣೆ ಮಾಡಲಾಗಿದೆ. ಆದ್ರೆ, ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್‌ಗೆ ಶಿವಾಜಿನಗರ ಟಿಕೆಟ್ ಕೈತಪ್ಪಿದ್ದು, ಅಚ್ಚರಿ ಎಂಬಂತೆ  ಮಾಜಿ ಕಾರ್ಪೊರೇಟರ್ ಸರವಣಗೆ ಮಣೆ ಹಾಕಲಾಗಿದೆ.

ಈ ಮೊದಲು ಬೆಂಗಳೂರಿನ ಶಿವಾಜಿನಗರ ಟಿಕೆಟ್‌ ಯಾರಿಗೆ ನೀಡಬೇಕೆನ್ನುವ ಗೊಂದಲ ಬಿಜೆಪಿಯಲ್ಲಿ ಶುರುವಾಗಿತ್ತು. ಕಾಂಗ್ರೆಸ್ ಅನರ್ಹ ಶಾಸಕ ರೇಷನ್ ಬೇಗ್, ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ನಿರ್ಮಲ್‌ ಕುಮಾರಸ್‌ ಸುರಾನ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಅನರ್ಹ ಶಾಸಕ ಶಂಕರ್‌ಗೆ ಟಿಕೆಟ್ ಕಟ್: ರಾಣೇಬೆನ್ನೂರ್‌ಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ

ಆದ್ರೆ, ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದಿರುವುದು ಟಿಕೆಟ್ ನೀಡಲು ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ನಡೆದ ಅನರ್ಹರ ಬಿಜೆಪಿ ಸೇರ್ಪಡೆಯಲ್ಲಿ ರೋಷನ್ ಬೇಗ್ ದೂರ ಉಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.2018ರ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದರು.

ಬಳಿಕ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಯಲ್ಲಿ ಬೇಗ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಾಗಿತ್ತು.

ಇನ್ನು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭ್ರಷ್ಟಾಚಾರ ಪ್ರಕರಣದ ಕಳಂಕ ಎದುರಿಸುತ್ತಿರುವುದರಿಂದ  ಟಿಕೆಟ್ ಕಟ್ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.