ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್
ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವಂತೆ ಯಾವುದೇ ಅಕ್ರಮ ನಡೆದಿಲ್ಲ. ನಿಯಮಬದ್ಧವಾಗಿ ದಯಾನಂದ ಪೈ ಅವರನ್ನು ಆಜೀವ ಟ್ರಸ್ಟಿಯಾಗಿ ನೇಮಿಸಲಾಗಿದೆ.
ವಿಧಾನಸಭೆ (ಸೆ.23): ‘ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವಂತೆ ಯಾವುದೇ ಅಕ್ರಮ ನಡೆದಿಲ್ಲ. ನಿಯಮಬದ್ಧವಾಗಿ ದಯಾನಂದ ಪೈ ಅವರನ್ನು ಆಜೀವ ಟ್ರಸ್ಟಿಯಾಗಿ ನೇಮಿಸಲಾಗಿದೆ. ಆಜೀವ ಟ್ರಸ್ಟಿಯಾದ ತಕ್ಷಣ ಅವರಿಗೆ ಬೇರೆಯವರಿಗಿಂತ ವಿಶೇಷ ಅಧಿಕಾರವೇನೂ ಇರುವುದಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆದೇ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರ ನೀಡಿದ ಅವರು, ‘ಸದನವನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳಿ, ದ್ವೇಷ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಬೇಡಿ.
ಒಂದು ವಾರದಿಂದ ಸಿನಿಮಾ ಟ್ರೇಲರ್ ಬಿಡ್ತೀನಿ, ಬಿಡ್ತೀನಿ ಎನ್ನುತ್ತಿದ್ದರು. ಇದರಲ್ಲಿ ಏನಿದೆ ಬಿಡುವುದಕ್ಕೆ?’ ಎಂದು ತಿರುಗೇಟು ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಕಾನೂನು ಬದ್ಧವಾಗಿ ಅಡ್ವೊಕೇಟ್ ಜನರಲ್, ಕಾನೂನು ಸಚಿವರ ಅಭಿಪ್ರಾಯ ಪಡೆದೇ ಏನು ನಿರ್ಧಾರ ಮಾಡಬೇಕೋ ಅದನ್ನು ಮಾಡಿದೆ. ಈ ವಿಚಾರದಲ್ಲಿ ಎಲ್ಲಾ ಹಂತದಲ್ಲೂ ನಿಯಮಗಳ ಪ್ರಕಾರವೇ ಸರ್ಕಾರ ನಡೆದುಕೊಂಡಿದೆ’ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಲು ಮುಂದಾದ ಕುಮಾರಸ್ವಾಮಿ ಬಗ್ಗೆ ಗರಂ ಆದ ಅವರು, ‘ನೀವು 2 ಗಂಟೆ ಮಾತನಾಡಿದಾಗ ನಾನು ತಾಳ್ಮೆಯಿಂದ ಕೇಳಿಸಿಕೊಂಡಿದ್ದೇನೆ. ನನಗೆ ಉತ್ತರ ನೀಡಲು 10 ನಿಮಿಷ ಸಾಕು. ಕೇಳಿಸಿಕೊಳ್ಳುವ ತಾಳ್ಮೆ ಬೆಳೆಸಿಕೊಳ್ಳಿ’ ಎಂದು ತರಾಟೆಗೆ ತೆಗೆದುಕೊಂಡರು.
ಇಷ್ಟಪಟ್ಟು ಮತಾಂತರವಾಗಲು ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶ್ವಥ ನಾರಾಯಣ್
‘2020ರಲ್ಲಿ ದಯಾನಂದ ಪೈ ಅವರನ್ನು ಅಜೀವ ಟ್ರಸ್ಟಿಯಾಗಿ ನೇಮಕ ಮಾಡಲು ಟ್ರಸ್ಟ್ ಪ್ರಸ್ತಾವನೆ ನೀಡಿತ್ತು. 10 ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ಆಧರಿಸಿ ಆಜೀವ ಟ್ರಸ್ಟಿಯಾಗಿ ನೇಮಿಸಲು ನಿರ್ಧಾರ ಮಾಡಿತ್ತು. ನಾನು ಸಚಿವನಾಗಿ ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಪಡೆದು ಈ ಆದೇಶದಿಂದ ಸರ್ಕಾರಕ್ಕೆ ಸಮಸ್ಯೆಯಾಗಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿದ್ದೆ. ದಯಾನಂದ ಪೈ ಅವರ ಬಳಿಕ ಇದು ಸರ್ಕಾರದ ಅಧೀನಕ್ಕೆ ಬರುತ್ತದೆ. ಆಗ ಸರ್ಕಾರ ಯಾವುದೇ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಹೀಗಾಗಿ ಈ ಆಸ್ತಿ ಕಬಳಿಕೆ ಮತ್ತಿತರ ವಿಚಾರಗಳನ್ನು ಹೇಳುವ ಅಗತ್ಯವಿಲ್ಲ’ ಎಂದು ಹೇಳಿದರು.
‘ಟ್ರಸ್ಟ್ 1949ರಲ್ಲಿ ಮೈಸೂರು ಸರ್ಕಾರದಿಂದ ಜಮೀನು ಖರೀದಿ ಮಾಡಿದೆ. 1962ರವರೆಗೂ ಕಾಲ ಕಾಲಕ್ಕೆ ಟ್ರಸ್ಟ್ ಜಮೀನು ಖರೀದಿಸಿದ್ದು, ಯಲಹಂಕದ ಬಳಿ 21 ಎಕರೆ ಸೇರಿ 86 ಎಕರೆ ಜಮೀನು ಹೊಂದಿದೆ. ಇದು ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಸಂಸ್ಥೆಯಾಗಿದೆ. ಸರ್ಕಾರಿ ಕೋಟಾ, ಕಾಮೆಡ್-ಕೆ ಕೋಟಾ ಸೀಟುಗಳನ್ನು ಹಂಚಿಕೆ ಮಾಡುತ್ತಿದೆ. ಇದು 5 ಸಾವಿರ ಕೋಟಿ ರು., 10 ಸಾವಿರ ಕೋಟಿ ರು., ಆಸ್ತಿ ಎಂದು ಬೆಲೆ ಕಟ್ಟಲು ವಾಣಿಜ್ಯ ಕಟ್ಟಡವಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಸಂಸ್ಥೆ. ಇದರ ಬಗ್ಗೆ ಅಪಪ್ರಚಾರ ಮಾಡಬಾರದು’ ಎಂದರು.
ಮುಂದಿನ ಮಳೆಗಾಲಕ್ಕೆ ಐಟಿ ಕಾರಿಡಾರ್‌ನ ಎಲ್ಲ ಸಮಸ್ಯೆಗಳಿಗೆ ಪರಿಹಾರ: ಅಶ್ವತ್ಥ್
ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ: ‘ನನ್ನ ರಾಜಕೀಯ ಜೀವನದ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇಲ್ಲ. ನಾನು ರಾಜಕೀಯ ವಂಶದಿಂದ ಬಂದವನಲ್ಲ. ರಾಜಕೀಯಕ್ಕೆ ಜೀವನಾಂಶಕ್ಕಾಗಿಯೂ ಬಂದಿಲ್ಲ. ಒಳ್ಳೆಯ ಕನಸು ಹೊತ್ತಿಕೊಂಡು ಬಂದಿದ್ದು, ನಾಡಿನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಕೆಲಸ ಮಾಡಿದ್ದೇನೆ. ನನ್ನ ಇಲಾಖೆಯಲ್ಲಿ ಬೆರಳು ತೋರಿಸುವ ಒಂದೂ ಕೆಲಸ ಮಾಡಿಲ್ಲ. ಯಾರು ರಾಜಕೀಯ ವೈಮನಸ್ಸಿನಿಂದ ದ್ವೇಷದ ರಾಜಕೀಯ ಮಾಡಲು ಹೋಗಬೇಡಿ’ ಎಂದು ಏಕ ವಚನದಲ್ಲೇ ಮಾಜಿ ಸಿಎಂಗೆ ತಿರುಗೇಟು ನೀಡಿದರು.