ಇಂದು ಭ್ರಷ್ಟಾಚಾರಿಗಳ ಹೆಸರು ಬಯಲು: ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಸಿಎಂ
ರಾಜ್ಯದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಎಂಬ ಸುಳ್ಳು ಆರೋಪದ ಬಗ್ಗೆ ಸದನದಲ್ಲಿ ಗುರುವಾರ ಚರ್ಚೆ ನಡೆಸಲಾಗುವುದು. ಈ ವೇಳೆ ಭ್ರಷ್ಟಾಚಾರದಲ್ಲಿ ಯಾರ್ಯಾರ ಹೆಸರು ಹೊರಗೆ ಬರಲಿದೆ ಎಂಬುದನ್ನು ಕಾದು ನೋಡಿ. ಭ್ರಷ್ಟಾಚಾರದ ಚರ್ಚೆಗೆ ನೀವೇ ಉತ್ತರ ಕೊಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸದಸ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ (ಸೆ.22): ರಾಜ್ಯದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಎಂಬ ಸುಳ್ಳು ಆರೋಪದ ಬಗ್ಗೆ ಸದನದಲ್ಲಿ ಗುರುವಾರ ಚರ್ಚೆ ನಡೆಸಲಾಗುವುದು. ಈ ವೇಳೆ ಭ್ರಷ್ಟಾಚಾರದಲ್ಲಿ ಯಾರ್ಯಾರ ಹೆಸರು ಹೊರಗೆ ಬರಲಿದೆ ಎಂಬುದನ್ನು ಕಾದು ನೋಡಿ. ಭ್ರಷ್ಟಾಚಾರದ ಚರ್ಚೆಗೆ ನೀವೇ ಉತ್ತರ ಕೊಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸದಸ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಯು.ಟಿ. ಖಾದರ್ ಅವರು, ‘40 ಪರ್ಸೆಂಟ್ ಭ್ರಷ್ಟಾಚಾರದ ಚರ್ಚೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರ ತಂದಿದ್ದೀರಿ’ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಚರ್ಚೆಯಿಂದ ನಾವು ಪಲಾಯನವಾದ ಮಾಡುತ್ತಿಲ್ಲ. ನಾವೇ ಗುರುವಾರ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿದ್ದೇವೆ. ಒಂದಲ್ಲ 2 ದಿನ ಚರ್ಚೆ ಮಾಡಿದರೂ ಮಾತನಾಡಲು ನಾವು ಸಿದ್ಧರಿದ್ದೇವೆ. ಭ್ರಷ್ಟಾಚಾರದಲ್ಲಿ ಯಾರ್ಯಾರ ಹೆಸರು ಬಹಿರಂಗವಾಗಲಿದೆ ಎಂಬುದನ್ನು ನೀವು ಕಾದು ನೋಡಿ. ಭ್ರಷ್ಟಾಚಾರದ ಬಗ್ಗೆ ನೀವೇ ಉತ್ತರ ನೀಡಬೇಕಾಗಿ ಬರಲಿದೆ’ ಎಂದು ಎಚ್ಚರಿಸಿದರು.
ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್ ಖರ್ಗೆ
ಎಲ್ಲ ಹಗರಣ ಚರ್ಚೆಗೆ ಸ್ಪೀಕರ್ ಸಮ್ಮತಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಸಕ್ತ ಸರ್ಕಾರದ 40 ಪರ್ಸೆಂಟ್ ಕಮಿಷನ್ ಆರೋಪ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಒಟ್ಟಿಗೆ ಸೇರಿಸಿ ಚರ್ಚೆಗೆ ಅವಕಾಶ ನೀಡಲಾಗುವುದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ. ಗುರುವಾರ ಅಥವಾ ಶುಕ್ರವಾರ ಚರ್ಚೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಬುಧವಾರ ಶೂನ್ಯವೇಳೆ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಚರ್ಚೆಗೆ ಅವಕಾಶ ನೀಡಬೇಕು’ ಎಂದು ನಿಲುವಳಿ ಸೂಚನೆ ಮಂಡಿಸಿದರು.
ಆದರೆ, ಸಭಾಧ್ಯಕ್ಷರು, ‘ಇದನ್ನು ಕಚೇರಿಯಲ್ಲಿಯೇ ತಿರಸ್ಕರಿಸಲಾಗಿದ್ದು, ಬೇರೆ ಸ್ವರೂಪದಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಪ್ರತಿಬಾರಿ ಈ ರೀತಿ ಮಾಡುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಈ ವಿಚಾರವು ಬಹಳ ಗಂಭಿರವಾಗಿದೆ. ರಾಜ್ಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಇತ್ತೀಚೆಗೆ ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ.
ಕಾಮಗಾರಿ ಪಡೆಯಲು 40 ಪರ್ಸೆಂಟ್ ಕಮಿಷನ್ ಪಡೆಯಬೇಕು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಚರ್ಚೆಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು. ತಿರಸ್ಕಾರ ಮಾಡಿರುವ ತೀರ್ಮಾನವನ್ನು ಪುನರ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು. ಈ ವೇಳೆ ಕಾನೂನು ಮತ್ತು ಸಂಸದೀಯ ಜೆ.ಸಿ.ಮಾಧುಸ್ವಾಮಿ, ‘ಪ್ರತಿಪಕ್ಷದ ನಾಯಕರ ಮನವಿ ಸರಿಯಲ್ಲ. ಈ ಬಗ್ಗೆ ಅವರು ದಾಖಲೆಯನ್ನು ಒದಗಿಸಿಲ್ಲ. ಸಮರ್ಪಕವಾದ ದಾಖಲೆ ನೀಡದ ಕಾರಣ ನಿಲುವಳಿ ಸೂಚನೆಯಡಿ ಇದಕ್ಕೆ ಅವಕಾಶ ನೀಡಬಾರದು’ ಎಂದು ಕೋರಿದರು.
ಚರ್ಚೆಗೆ ಸಿದ್ಧ- ಸಿಎಂ: ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ವಿಚಾರವು ಅತ್ಯಂತ ಗಂಭೀರವಾಗಿದೆ. ಭ್ರಷ್ಟಾಚಾರ ಇವತ್ತು, ನಿನ್ನೆಯದಲ್ಲ. ಬೇರೆ ಬೇರೆ ರೂಪದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಚರ್ಚೆಗೆ ಸಿದ್ಧವಿದೆ. ಸಮಯ ನಿಗದಿ ಮಾಡಿ, ನಾವು ಚರ್ಚೆಗೆ ಸಿದ್ಧ. ಯಾವುದೇ ಅಭ್ಯಂತರ ಇಲ್ಲ’ ಎಂದು ತಿಳಿಸಿದರು.
ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ನ್ಯಾಯಾಂಗ ತನಿಖೆ: ಸಿಎಂ ಬೊಮ್ಮಾಯಿ
ತದನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗುವುದು. ಇದೇ ವೇಳೆ ಬಿಜೆಪಿ ಸದಸ್ಯ ಪಿ.ರಾಜೀವ್ ಅವರೂ ಸಹ ಒಂದು ಪತ್ರ ನೀಡಿದ್ದಾರೆ. 2013-18ರ ಅವಧಿಯಲ್ಲಿ ಹಲವು ನೇಮಕಾತಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದು, ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಹೀಗಾಗಿ ಎರಡೂ ಸೇರಿಸಿ ಒಟ್ಟಿಗೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು. ‘ಎರಡೂ ಒಟ್ಟಿಗೆ ಚರ್ಚೆ ನಡೆಸಲು ಯಾವುದೇ ಅಭ್ಯಂತರ ಇಲ್ಲ’ ಎಂದು ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ ಬಳಿಕ ಮುಂದಿನ ಕಾರ್ಯಕಲಾಪವನ್ನು ಸಭಾಧ್ಯಕ್ಷರು ಮುಂದುವರಿಸಿದರು.