ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ನ್ಯಾಯಾಂಗ ತನಿಖೆ: ಸಿಎಂ ಬೊಮ್ಮಾಯಿ
ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆ ಎಲ್ಲರ ಕಣ್ಣು ತೆರೆಸಿದ್ದು, ಮುಂದೆ ಇಂತಹ ಸಮಸ್ಯೆಯಾಗದಂತೆ ಪ್ರಸ್ತುತ ಗುರುತಿಸಿರುವ ರಾಜಕಾಲುವೆ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು.
ವಿಧಾನಸಭೆ (ಸೆ.20): ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆ ಎಲ್ಲರ ಕಣ್ಣು ತೆರೆಸಿದ್ದು, ಮುಂದೆ ಇಂತಹ ಸಮಸ್ಯೆಯಾಗದಂತೆ ಪ್ರಸ್ತುತ ಗುರುತಿಸಿರುವ ರಾಜಕಾಲುವೆ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಜತೆಗೆ ಕೆರೆ, ರಾಜಕಾಲುವೆ ಹಾಗೂ ಅವುಗಳ ಬಫರ್ ಜೋನ್ ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಸಲಾಗಿರುವ ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ವರದಿ ಬಗ್ಗೆಯೂ ತನಿಖೆಗೆ ವಹಿಸಲಾಗುವುದು ಎಂದು ಘೋಷಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಮಳೆ ಹಾನಿ ಕುರಿತ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ನಗರದಲ್ಲಿ ಒಟ್ಟು 2,626 ಒತ್ತುವರಿ ಗುರುತಿಸಿದ್ದು, 2016ರ ವೇಳೆಗೆ 428 ಒತ್ತುವರಿ ತೆರವುಗೊಳಿಸಲಾಗಿತ್ತು. 2018ರಿಂದ ಈಚೆಗೆ 1,502 ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 602 ಒತ್ತುವರಿಗಳ ತೆರವು ಬಾಕಿಯಿತ್ತು. ಕೊರೋನಾ ಹಿನ್ನೆಲೆಯಲ್ಲಿ ಹೈಕೋರ್ಚ್ ಒತ್ತುವರಿ ತೆರವಿಗೆ ತಡೆಯಾಜ್ಞೆ ನೀಡಿದ್ದರಿಂದ ಒತ್ತುವರಿ ತೆರವಿಗೆ ಹಿನ್ನಡೆ ಉಂಟಾಗಿತ್ತು. ಇದೀಗ ಮತ್ತೆ ಅನುಮತಿ ಪಡೆದು ತೆರವು ಕಾರ್ಯ ಶುರು ಮಾಡಿದ್ದು, ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರಿಯಾಂಕ್ ವಿರೋಧವೇಕೆ: ಸಿಎಂ ಬೊಮ್ಮಾಯಿ
ಇನ್ನು ಮುಂದೆಯೂ ಸಮಸ್ಯೆಯಾಗದಂತೆ ಹೆಚ್ಚುವರಿ ಒತ್ತುವರಿ ಗುರುತಿಸಲು ಕೆರೆ, ರಾಜಕಾಲುವೆ ಹಾಗೂ ಅವುಗಳ ಬಫರ್ ಜೋನ್ ಒತ್ತುವರಿ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಇದಕ್ಕಾಗಿ ನಿವೃತ್ತ ನ್ಯಾಯಾಧೀಶರು ಹಾಗೂ ತಾಂತ್ರಿಕ ತಜ್ಞರನ್ನು ಒಳಗೊಂಡ ನ್ಯಾಯಾಂಗ ಆಯೋಗ ರಚಿಸಿ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನಾಗರಿಕತೆ ಬೆಳೆದಂತೆ ಗೋಮಾಳ, ಸರ್ಕಾರಿ ಜಮೀನುಗಳನ್ನು ಉಳಿಸುವುದು ಕಷ್ಟವಾಗುತ್ತಿದೆ. ಯಾರ ಕಾಲದಲ್ಲಿ ಒತ್ತುವರಿಯಾಗಿದೆ ಎಂಬುದು ಎಲ್ಲವೂ ತನಿಖೆಯಲ್ಲಿ ಹೊರಬರಲಿದೆ.
ಅಲ್ಲದೇ, ಮುಂದಿನ ದಿನದಲ್ಲಿ ಸಮಸ್ಯೆಗಳು ಉದ್ಬವವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಗಳೂರಲ್ಲಿ ಈ ಹಿಂದೆ ಕೆರೆಗಳು ಬತ್ತಿವೆ ಎಂದು ಅವುಗಳ ನಕಾಶೆಯಿಂದ ತೆಗೆಯುವ ಪ್ರಯತ್ನವೂ ನಡೆದಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಆ ಪ್ರಯತ್ನವನ್ನು ಕೈಬಿಡಲಾಯಿತು ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಕೆ.ಜೆ.ಜಾಜ್‌ರ್ ಅವರು ಕೆರೆಗಳನ್ನು ಕೈ ಬಿಡುವ ಬಗ್ಗೆ ಹಿಂದಿನ ಸರ್ಕಾರ ಯಾವುದೇ ತೀರ್ಮಾನ ಮಾಡಿರಲಿಲ್ಲ. ಈ ಬಗ್ಗೆ ದಾಖಲೆ ಇದ್ದರೆ ನೀಡಿ ಎಂದು ಒತ್ತಾಯಿಸಿದಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು 2018ರ ಟಿಪ್ಪಣಿಯನ್ನು ಸದನದಲ್ಲಿ ಓದಿದರು.
ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿಲ್ಲ, ಬದಲಿಗೆ ಪ್ರಯತ್ನ ನಡೆದಿತ್ತು ಎಂದು ಹೇಳಿದೆ. ಕೆಲ ಅಧಿಕಾರಿಗಳು ಕೆರೆಗಳು ನಿರುಪಯುಕ್ತವಾಗಿವೆ. ಇದನ್ನು ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಸರ್ಕಾರಕ್ಕೆ ತಪ್ಪು ಮಾರ್ಗದರ್ಶನ ಮಾಡುವುದು ಸಹಜ. ಅದೇನೇ ಇರಲಿ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಈ ವೇಳೆ ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ, ಮೈಸೂರಲ್ಲಿಯೂ ಒತ್ತುವರಿಯಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಆಗ ಮುಖ್ಯಮಂತ್ರಿಗಳು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಒತ್ತುವರಿ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರದ ಭ್ರಷ್ಟಾಚಾರ ತನಿಖೆ: ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಕಾಂಗ್ರೆಸ್ ಸದಸ್ಯರು ರಾಜಕಾಲುವೆ ಅಭಿವೃದ್ದಿಯಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದರು. ಈ ವೇಳೆ ವರದಿಯೊಂದನ್ನು ತೋರಿಸಿದ ಬಸವರಾಜ ಬೊಮ್ಮಾಯಿ, ‘ನಿಮ್ಮ ಅವಧಿಯ ರಾಜಕಾಲುವೆ ಅಭಿವೃದ್ಧಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವರದಿ ಇಲ್ಲಿದೆ ನೋಡಿ. ಇದನ್ನು ತನಿಖೆಗೆ ವಹಿಸುತ್ತೇನೆ. ನಿಮ್ಮದು 100% ಭ್ರಷ್ಟಸರ್ಕಾರ’ ಎಂದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ‘ತನಿಖೆ ನಡೆಸಿ ಇದಕ್ಕೆ ನಮ್ಮ ಯಾವ ಆಕ್ಷೇಪಣೆಯೂ ಇಲ್ಲ. ನಿಮ್ಮದು 40 ಪರ್ಸೆಂಟ್ ಕಮಿಷನ್ ಸರ್ಕಾರ. ಕಡು ಭ್ರಷ್ಟಸರ್ಕಾರ. ಇದರಿಂದಲೇ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿರೋದು’ ಎಂದು ಕಿಡಿಕಾರಿದರು.