ಎಲ್ಲಾ ಶಾಸಕರು, ಸಚಿವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಹತ್ವದ ಸೂಚನೆ
* ಸೆಪ್ಟೆಂಬರ್13 ರಿಂದ 24 ರವರೆಗೆ ವಿಧಾನಸಭಾ ಅಧಿವೇಶನ
* ಶಾಸಕರಿಗೆ ಖಡಕ್ ಸೂಚನೆ ನೀಡಿದ ಸ್ಪೀಕರ್
* ರಜೆ ಕೇಳಬೇಡಿ ಎಂದು ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ
ಮಂಗಳೂರು, (ಆ.27): ಈ ಬಾರಿಯ ಅಧಿವೇಶನಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ, ರಜೆ ಕೇಳಬೇಡಿ ಎಂದು ಸಚಿವರಿಗೆ ಹಾಗೂ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಇಂದು (ಆ.27) ಸುದ್ದಿಗೋಷ್ಠಿ ನಡೆಸಿದ ಅವರು, ಸೆಪ್ಟೆಂಬರ್13 ರಿಂದ 24 ರವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದಲ್ಲಿ ಯಾರೂ ನನ್ನ ಬಳಿ ರಜೆ ಕೇಳುವ ಸ್ಥಿತಿ ಬರಬಾರದು. ಎಲ್ಲಾ ಶಾಸಕರು ಮತ್ತು ಸಚಿವರು ಕಡ್ಡಾಯವಾಗಿ ಪೂರ್ಣಪ್ರಮಾಣದಲ್ಲಿ ಅಧಿವೇಶನದಲ್ಲಿ ಹಾಜರಿರಬೇಕು ಎಂದರು.
ವಿಧಾನಸೌಧದಂತೆ ಸುವರ್ಣಸೌಧ ಬಳಕೆ: ಡಿಸೆಂಬರಲ್ಲಿ ಬೆಳಗಾವಿಯಲ್ಲಿ ಅಧಿವೇಶನ: ಬೊಮ್ಮಾಯಿ
ಜನಪ್ರತಿನಿಧಿಗಳ ಸಂಪೂರ್ಣ ಹಾಜರಾತಿಯ ಅಗತ್ಯತೆ ವಿವರಿಸಿ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ಅಧಿವೇಶನದಲ್ಲಿ ಮಂಡಿಸಬೇಕಾದ ಬಿಲ್ಗಳನ್ನು ಸಹ ಮೊದಲೇ ನನ್ನ ಗಮನಕ್ಕೆ ತರಲು ತಿಳಿಸಿದ್ದೇನೆ ಎಂದರು.
ಎಲ್ಲ ಸಂಬಂಧಿಸಿದ ಅಧಿಕಾರಿಗಳು ಕೂಡ ಕಡ್ಡಾಯವಾಗಿ ಅಧಿವೇಶನದಲ್ಲಿ ಹಾಜರಿರಬೇಕು. ಶಾಸಕರು ಸಹ ಅಧಿವೇಶನವನ್ನ ಗಂಭೀರವಾಗಿ ತೆಗೆದುಕೊಂಡು ಹಾಜರಾಗಬೇಕು. ಜನರು ವ್ಯವಸ್ಥೆಯ ವಿರುದ್ಧ ಅನೇಕ ಬಾರಿ ಬೇಸತ್ತು ಹೋಗಿದ್ದಾರೆ. ಹೀಗಾಗಿ ಸದನದ ಹಾಜರಾತಿ, ಪಾಲ್ಗೊಳ್ಳುವಿಗೆ ಹಾಗೂ ಸದನದ ಶಿಸ್ತಿನ ಚೌಕಟ್ಟು ಮೀರದೆ ವರ್ತಿಸಬೇಕು. ಕರ್ನಾಟಕ ವಿಧಾನಸಭೆಯ ಮೌಲ್ಯತೆ ಕುಸಿಯದಂತೆ ವರ್ತಿಸಬೇಕು ಎಂದು ಹೇಳಿದರು.