* ವಿಧಾನಸೌಧದ ರೀತಿ ಸುವರ್ಣಸೌಧದ ಬಳಕೆಗೆ ಕ್ರಮ* ಡಿಸೆಂಬರಲ್ಲಿ ಬೆಳಗಾವಿಯಲ್ಲಿ ಅಧಿವೇಶನ: ಬೊಮ್ಮಾಯಿ

ಬೆಳಗಾವಿ(ಆ.22): ಮುಂದಿನ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುವರ್ಣ ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್‌ ತಿಂಗಳಲ್ಲಿ ಅಧಿವೇಶ ನಡೆಸಬೇಕು ಎಂಬುದು ನಮ್ಮ ಸರ್ಕಾರದ ಇಚ್ಛೆ. ಸುವರ್ಣ ವಿಧಾನಸೌಧವನ್ನು ಶಕ್ತಿ ಕೇಂದ್ರ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇಲ್ಲಿನ ರೈತರ ಅಪೇಕ್ಷೆಯಂತೆ ಸಕ್ಕರೆ ಇಲಾಖೆಯ ಕಚೇರಿಯನ್ನು ಸ್ಥಳಾಂತರ ಮಾಡಲು ಬೆಂಗಳೂರಿಗೆ ಹೋದ ತಕ್ಷಣ ಆದೇಶ ಹೊರಡಿಸಲು ಸೂಚಿಸುತ್ತೇನೆ. ಆದಷ್ಟುಶೀಘ್ರ ಬೆಳಗಾವಿಗೆ ಕಚೇರಿ ಸ್ಥಳಾಂತರವಾಗಲು ಆದೇಶ ಮಾಡುವೆ ಎಂದು ಹೇಳಿದರು.

ಕೆಲವು ಇಲಾಖೆಗಳು ಬೆಳಗಾವಿಗೆ ಸ್ಥಳಾಂತರ ಆಗಬೇಕು ಎಂದು ಸೂಚಿಸಿದ್ದರೂ ಸ್ಥಳಾಂತರವಾಗಿಲ್ಲ. ಅದನ್ನು ಸಂಪೂರ್ಣವಾಗಿ ಪುನರ್‌ ವಿಮರ್ಶಿಸಿ, ಸ್ಥಳಾಂತರಕ್ಕೆ ಆಜ್ಞೆ ಮಾಡುವೆ ಎಂದ ಅವರು, ಸುವರ್ಣ ವಿಧಾನಸೌಧವು ಪೂರ್ಣ ಪ್ರಮಾಣದಲ್ಲಿ ಜನರ ಪರವಾದ ಚಟುವಟಿಕೆಯ ಕೇಂದ್ರವಾಗಬೇಕು. ಜತೆಗೆ, ಇಲ್ಲಿ ಬೆಂಗಳೂರಿನ ವಿಧಾನಸೌಧದ ರೀತಿಯಲ್ಲಿ ಕೆಲಸ, ಕಾರ್ಯಗಳು ಆಗಬೇಕು. ಈ ನಿಟ್ಟಿನಲ್ಲಿ ಎಲ್ಲವನ್ನೂ ಪರಿಶೀಲನೆ ಮಾಡುತ್ತೇನೆ. ಮಹತ್ವದ ಇಲಾಖೆಗಳು ಇಲ್ಲಿಂದಲೇ ಕೆಲಸ ಮಾಡುವುದಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.