*   ಅಧಿಕಾರ ಹಿಡಿಯಲು ರಾಷ್ಟ್ರೀಯ ಪಕ್ಷಗಳಿಂದ ತಿರುಚಿದ ಸಮೀಕ್ಷೆ*   ನಮಗೆ ಯಾವುದೇ ಆತಂಕ ಇಲ್ಲ*   ರಾಜ್ಯದ ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರ್ಕಾರ ತರಬೇಕು ಎಂದು ನಾವು ಹೊರಟಿದ್ದೇವೆ

ಬೆಂಗಳೂರು(ಜು.01): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ಕಾಂಗ್ರೆಸ್‌ ನಾಯಕರ ಪರಿಸ್ಥಿತಿ ಅವಲಂಬಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಅಲ್ಲದೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ದೊಡ್ಡ ದೊಡ್ಡ ಸಮೀಕ್ಷೆ ಮಾಡುವ ಕಂಪನಿ ಜತೆ ಸೇರಿ ತಿರುಚುವ ಕೆಲಸ ಮಾಡುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ಗುರುವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರ ಪರಿಸ್ಥಿತಿ ಏನಿದೆ ಎಂಬುದು ಗೊತ್ತಿದೆ. ಯಡಿಯೂರಪ್ಪ ಮುಂದೆ ಏನು ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಕಾಂಗ್ರೆಸ್‌ ಮುಂದಿನ ಹೆಜ್ಜೆ ಇಡುವ ಚಿಂತನೆ ನಡೆಸಿದೆ. ಈ ಹಿಂದೆ ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿದ್ದ ದಿನದ ಲೆಕ್ಕಾಚಾರವನ್ನು ಕಾಂಗ್ರೆಸ್‌ ನಾಯಕರು ಹಾಕಿದ್ದಾರೆ. ಪತ್ರಿಕೆಯೊಂದರಲ್ಲಿ (ಕನ್ನಡಪ್ರಭ) ಪ್ರಕಟವಾಗಿರುವ ಆಂತರಿಕ ವರದಿ ಗಮನಿಸಿದ್ದೇನೆ. ಆ ವರದಿಯಲ್ಲಿ ಮೂರು ರೀತಿಯ ಪ್ರತಿಕ್ರಿಯೆ ಇದೆ ಎಂದು ತಿಳಿಸಿದರು.

ಮೋದಿ ಮಾತು ಕೇಳಿದ್ದರೆ ಎಚ್‌ಡಿಕೆ 5 ವರ್ಷ ಸಿಎಂ ಆಗಿರ್ತಿದ್ರು: ರೇವಣ್ಣ

ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳೇ ಹೇಳುತ್ತಿವೆ. ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಗುರಿ ಮುಟ್ಟಲೇಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರ್ಕಾರ ತರಬೇಕು ಎಂದು ನಾವು ಹೊರಟಿದ್ದೇವೆ. ಜೆಡಿಎಸ್‌ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿರಬಹುದು. ಆದರೆ, ಅವರಲ್ಲಿಯೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರಬರುತ್ತದೆ. ಕಾಂಗ್ರೆಸ್‌ ಎಲ್ಲ ಕಡೆ ಮುಳುಗುತ್ತಿದೆ ಎಂದು ಟೀಕಿಸಿದರು.