Asianet Suvarna News Asianet Suvarna News

ಧಾರವಾಡ: ಸತತ ಒಬ್ಬನೇ ಅಭ್ಯರ್ಥಿಗೆ ಮಣೆ ಹಾಕದ ಗ್ರಾಮೀಣ ಮತದಾರರು!

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿಶೇಷತೆಯೇ ಬೇರೆ. 1985ರಿಂದ 2018ರ ವರೆಗೆ ಕರ್ನಾಟಕ ವಿಧಾನಸಭೆಗೆ ನಡೆದಿರುವ ಹತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ಎರಡು ಸಲ ಯಾವುದೇ ಅಭ್ಯರ್ಥಿ ಆಯ್ಕೆಯಾಗಿಲ್ಲ!

Karnataka assembly election Rural voters who do not face a single candidate at dharwad rav
Author
First Published Apr 1, 2023, 10:05 AM IST

ಕ್ಷೇತ್ರ ಪರಿಚಯ - ಭಾಗ 2

ಬಸವರಾಜ ಹಿರೇಮಠ

 ಧಾರವಾಡ (ಏ.1) : ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿಶೇಷತೆಯೇ ಬೇರೆ. 1985ರಿಂದ 2018ರ ವರೆಗೆ ಕರ್ನಾಟಕ ವಿಧಾನಸಭೆಗೆ ನಡೆದಿರುವ ಹತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ಎರಡು ಸಲ ಯಾವುದೇ ಅಭ್ಯರ್ಥಿ ಆಯ್ಕೆಯಾಗಿಲ್ಲ!

1967ರಿಂದ ಈ ಕ್ಷೇತ್ರದಲ್ಲಿ ಚುನಾವಣೆಗಳು ಆರಂಭವಾಗಿದ್ದು, ಮೊದಲ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಎಸ್‌.ವಿ. ಅಗ್ನಿಹೋತ್ರಿ ಜಯ ದಾಖಲಿಸಿದ್ದರು. ನಂತರದ 1972 ಹಾಗೂ 1978ರಲ್ಲಿ ಕಾಂಗ್ರೆಸ್ಸಿನ ಸುಮತಿ ಮಡಿಮನ್‌(Sumati madiman) ಸತತ ಎರಡು ಬಾರಿ ಎನ್‌ಸಿಒ ಹಾಗೂ ಜನತಾ ಪಕ್ಷದ ಅಭ್ಯರ್ಥಿಗಳ ವಿರುದ್ಧ ಗೆಲವು ಸಾಧಿ​ಸಿದರೆ, 1981 ಹಾಗೂ 1983ರ ಚುನಾವಣೆಯಲ್ಲೂ ಸತತವಾಗಿ ಕಾಂಗ್ರೆಸ್ಸಿನ ಸಿ.ವಿ. ಪುಡಕಲಕಟ್ಟಿಜನತಾ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದು ಮಾತ್ರ ಇತಿಹಾಸ. ಅಲ್ಲಿಂದ ಅಂದರೆ, 1985ರಿಂದ ಕಳೆದ 2018ರ ಚುನಾವಣೆ ವರೆಗೂ ಮೂರೂವರೆ ದಶಕದ ವರೆಗೆ ಯಾರೊಬ್ಬರು ಸತತವಾಗಿ ಎರಡು ಬಾರಿ ಆಯ್ಕೆಯಾಗಿಲ್ಲ.

ವಿಧಾನಸಭೆ ಚುನಾವಣೆ: ಧಾರವಾಡದಲ್ಲಿ ಚುರುಕುಗೊಂಡ ರಾಜಕೀಯ ಚಟುವಟಿಕೆ

1985ರಲ್ಲಿ ಈಗಿನ ಶಾಸಕ ಅಮೃತ ದೇಸಾಯಿ(Amrit desai MLA) ಅವರ ತಂದೆ ಎ.ಬಿ. ದೇಸಾಯಿ ಕಾಂಗ್ರೆಸ್ಸಿನ ಸಿ.ವಿ. ಪುಡಕಲಕಟ್ಟಿಅವರನ್ನು ಮಣಿಸಿ ಜನತಾ ಪಕ್ಷದಿಂದ ಆಯ್ಕೆಯಾದರು. 1989ರಲ್ಲಿ ರೈತ ಸಂಘದಿಂದ ಬಾಬಗೌಡ ಪಾಟೀಲ ಧಾರವಾಡ ಗ್ರಾಮೀಣ ಹಾಗೂ ಕಿತ್ತೂರು ಕ್ಷೇತ್ರಗಳಿಂದ ಸ್ಪಧಿ​ರ್‍ಸಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಸಾ​ಧಿಸಿದರು. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದರಿಂದ ಈ ಕ್ಷೇತ್ರಕ್ಕೆ 1990ರಲ್ಲಿ ಮರು ಚುನಾವಣೆ ನಡೆಯಿತು. ಅಲ್ಲಿ ರೈತ ಸಂಘದಿಂದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಕಾಂಗ್ರೆಸ್ಸಿನ ಎಚ್‌.ಸಿ. ಮೊರಬ ಅವರನ್ನು ಮಣಿಸಿದರು.

1994ರಲ್ಲಿ ಕಾಂಗ್ರೆಸ್ಸಿನ ಶ್ರೀಕಾಂತ ಅಂಬಡಗಟ್ಟಿ, 1998ರ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶಶಿಧರ ಅಂಬಡಗಟ್ಟಿಜನತಾದಳದ ಎ.ಬಿ. ದೇಸಾಯಿ ಅವರನ್ನು ಮಣಿಸಿ ಗೆಲವು ಸಾಧಿ​ಸಿದರು. 1999ರಲ್ಲಿ ಅಂಬಡಗಟ್ಟಿಕುಟುಂಬದವರೇ ಆದ ಶಿವಾನಂದ ಅಂಬಡಗಟ್ಟಿಪಕ್ಷೇತರರಾಗಿ ನಿಂತು ಬಿಜೆಪಿಯ ಶಿವಾನಂದ ಹೊಳೆಹಡಗಲಿ ಅವರನ್ನು ಸೋಲಿಸಿದರು. 2004ರ ಚುನಾವಣೆಯಲ್ಲಿ ಜಿಪಂ ಸದಸ್ಯರಾಗಿದ್ದ ವಿನಯ ಕುಲಕರ್ಣಿ ಪಕ್ಷೇತರರಾಗಿ ಸ್ಪಧಿ​ರ್‍ಸಿ ಜೆಡಿಯುನ ಎ.ಬಿ. ದೇಸಾಯಿ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ನಂತರ ಕಾಂಗ್ರೆಸ್‌ ಸೇರ್ಪಡೆಯಾದರು. 2008ರಲ್ಲಿ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ ಅವರನ್ನು ಸೋಲಿಸಿ ಬಿಜೆಪಿಯ ಸೀಮಾ ಮಸೂತಿ ವಿಧಾನಸಭೆಗೆ ಪಾದಾರ್ಪಣೆ ಮಾಡಿದರು. ಹಾಗೆಯೇ, 2013ರಲ್ಲಿ ಜೆಡಿಎಸ್‌ನ ಅಮೃತ ದೇಸಾಯಿ ಅವರನ್ನು ಸೋಲಿಸಿ ವಿನಯ ಕುಲಕರ್ಣಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು.

ಇನ್ನು, 2018ರ ಚುನಾವಣೆಗೆ ಮುನ್ನ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಕೈವಾಡವಿದೆ ಎಂದು ಬಿಜೆಪಿಯ ಆಪಾದನೆ ಮಾಡಿತ್ತು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಗೆ ಆಗಿನ ಸಿದ್ದರಾಮಯ್ಯ ಸರ್ಕಾರ ಒಪ್ಪಿರಲಿಲ್ಲ. ವಿನಯ ಕುಲಕರ್ಣಿ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಪಡೆದು ಚುನಾವಣೆಯಲ್ಲಿ ಸ್ಪ​ರ್ಧಿಸಿದರೂ ಬಿಜೆಪಿಯ ಅಮೃತ ದೇಸಾಯಿ ವಿರುದ್ಧ ಗೆಲ್ಲಲು ಆಗಲಿಲ್ಲ.

ಮನೆಗೆ ಕಳುಹಿಸಿದ ಮತದಾರ..

ಧಾರವಾಡ ಗ್ರಾಮೀಣ ಕ್ಷೇತ್ರ(Dharwad rural assembly constituency)ದ ಮತದಾರರು ಒಂದೇ ಪಕ್ಷಕ್ಕೆ ಒಲವು ತೋರಿದರೂ ಒಬ್ಬನೇ ಅಭ್ಯರ್ಥಿಯನ್ನು ಮಾತ್ರ ಬೆಂಬಲಿಸಿಲ್ಲ. ತಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇರುವ ಶಾಸಕರನ್ನು ಮುಲಾಜಿಲ್ಲದೇ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುವುದು ಇಲ್ಲಿಯ ಮತದಾರರ ವೈಶಿಷ್ಟ್ಯ. ಈ ಸಂಪ್ರದಾಯವನ್ನು ಚೆನ್ನಾಗಿ ಅರಿತಿರುವ ಶಾಸಕರು ಕೂಡಾ ತಮ್ಮ ಅ​ಧಿಕಾರಾವಧಿ​ಯಲ್ಲಿ ಜನರ ನಿರೀಕ್ಷೆಯನ್ನು ಸಫಲಗೊಳಿಸುವತ್ತ ಪ್ರಯತ್ನ ಮಾಡದೇ ಇರುವುದು ಕೂಡಾ ಗಮನಾರ್ಹ ಸಂಗತಿ. ಪ್ರಸ್ತುತ ಶಾಸಕ ಅಮೃತ ದೇಸಾಯಿ ಮತ್ತೊಮ್ಮೆ ಸ್ಪಧಿ​ರ್‍ಸಲಿದ್ದು, ಒಂದು ವೇಳೆ 2023ರ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ ಇಲ್ಲದೇ ಹೋದಲ್ಲಿ ಕ್ಷೇತ್ರದ ಸಂಪ್ರದಾಯ ಮುಂದುವರಿಸುವುದು ನಿಶ್ಚಿತ. ಕ್ಷೇತ್ರದ ಈ ಸಂಪ್ರದಾಯವನ್ನೇ ನೆಪವಾಗಿಟ್ಟುಕೊಂಡು ಬಿಜೆಪಿಯ ಇತರ ಕೆಲವು ಟಿಕೆಟ್‌ ಆಕಾಂಕ್ಷಿಗಳು ತಮ್ಮನ್ನು ಉಮೇದುವಾರಿಕೆಗೆ ಪರಿಗಣಿಸಬೇಕು ಎಂದು ಪಕ್ಷದ ಧುರೀಣರಲ್ಲಿ ದುಂಬಾಲು ಬಿದ್ದಿದ್ದಾರೆ.

ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿರುವ ಪ್ರಧಾನಿ: ಮೋದಿ ವಿರುದ್ಧ ಯಶೋಮತಿ ಠಾಕೂರ್ ವಾಗ್ದಾಳಿ

ಮತದಾರರೆಷ್ಟು?

ಧಾರವಾಡ ಗ್ರಾಮೀಣ ಕ್ಷೇತ್ರವು ಧಾರವಾಡ ತಾಲೂಕು ಹಾಗೂ ನಗರದ ಎಂಟು ವಾರ್ಡ್‌ಗಳನ್ನು ಒಳಗೊಂಡಿದ್ದು 106190 ಪುರುಷ, 105142 ಮಹಿಳಾ, ಒಂಭತ್ತು ಇತರೆ ಸೇರಿದಂತೆ ಒಟ್ಟಾರೆ 211341 ಮತದಾರರಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

Follow Us:
Download App:
  • android
  • ios