Karnataka Election Result 2023: ಪ್ರಗತಿ ಕಲ್ಪನೆಗೆ ಆದ್ಯತೆ ನೀಡಿದ ಕನ್ನಡಿಗರು: ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಜನಾದೇಶ ನೀಡಿದ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಮೇ 13, 2023): ಕರ್ನಾಟಕದಲ್ಲಿ "ಐತಿಹಾಸಿಕ ಜನಾದೇಶವನ್ನು ನೀಡಿದ್ದಕ್ಕಾಗಿ" ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ರಾಜ್ಯ ಚುನಾವಣಾ ಫಲಿತಾಂಶಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು, 135 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಹುತೇಕ ಗೆಲುವು ಸಾಧಿಸಿದೆ. ಆದರೆ, ಬಿಜೆಪಿ ಕೇವಲ 65 ಸ್ಥಾನಗಳಿಗೆ ಕುಸಿದಿದೆ.
‘’ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಜನಾದೇಶ ನೀಡಿದ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಇದು ನಿಮ್ಮ ಉದ್ದೇಶಕ್ಕೆ ಸಂದ ಜಯ. ಪ್ರಗತಿಯ ಕಲ್ಪನೆಗೆ ಆದ್ಯತೆ ನೀಡಿದ ಕರ್ನಾಟಕಕ್ಕೆ ಸಂದ ಜಯ. ಇದು ದೇಶವನ್ನು ಒಗ್ಗೂಡಿಸುವ ರಾಜಕೀಯದ ಗೆಲುವು’’ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಕಾ ಗಾಂಧಿ ಈ ಬಾರಿ ಸಹೋದರ ರಾಹುಲ್ ಗಾಂಧಿಯೊಂದಿಗೆ ರಾಜ್ಯದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ಭಾರತ್ ಜೋಡೋ ಯಾತ್ರೆಯ ಭಾಗವಾಗಿಯೂ ಕರ್ನಾಟಕದಾದ್ಯಂತ ರಾಹುಲ್ ಗಾಂಧಿ ಸಾಕಷ್ಟು ದೂರ ನಡೆದಾಡಿದ್ದರು.
ಇದನ್ನು ಓದಿ: ಸರಳತೆ ಮೆರೆದ ರಾಹುಲ್, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ
"ಕರ್ನಾಟಕ ಕಾಂಗ್ರೆಸ್‌ನ ಎಲ್ಲಾ ಕಷ್ಟಪಟ್ಟು ದುಡಿದ ಕಾರ್ಯಕರ್ತರು ಮತ್ತು ನಾಯಕರಿಗೆ ನನ್ನ ಶುಭಾಶಯಗಳು. ನಿಮ್ಮ ಎಲ್ಲಾ ಶ್ರಮವು ಫಲ ನೀಡಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರಿಗೆ ನೀಡಿದ ಭರವಸೆಗಳನ್ನು ಕಾರ್ಯಗತಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತದೆ" ಎಂದೂ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ರಾಜ್ಯದಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಕಾಂಗ್ರೆಸ್ ಸಭೆ ಕರೆದಿದ್ದು ಎಲ್ಲ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಹೇಳಿದೆ. ಅಲ್ಲದೆ, ಗೆಲುವಿನ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಗೆದ್ದ ಶಾಸಕರನ್ನು ಪಕ್ಕದ ತಮಿಳುನಾಡಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷವು ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ರಾಜ್ಯವಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಷಡ್ಯಂತ್ರ, ದ್ವೇಷ ರಾಜಕೀಯಕ್ಕೆ ಬಿಜೆಪಿಗೆ ಜನತೆ ತಕ್ಕ ಉತ್ತರ: ಬಿಕೆ ಹರಿಪ್ರಸಾದ್
ಇನ್ನೊಂದೆಡೆ, ರಾಹುಲ್ ಗಾಂಧಿ ಸಹ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದು, ದ್ವೇಷದ ಮಾರುಕಟ್ಟೆಯನ್ನು ಮುಚ್ಚಲಾಗಿದೆ ಮತ್ತು ಪ್ರೀತಿಯ ಅಂಗಡಿಗಳು ತೆರೆದಿವೆ. ಕರ್ನಾಟಕ ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ ಎಂದೂ ಹೇಳಿದ್ದಾರೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.