Asianet Suvarna News Asianet Suvarna News

Karnataka Election Result 2023: ಬಿಜೆಪಿಗೆ ಭಜರಂಗ ಬಲಿ, ಕಾಂಗ್ರೆಸ್‌ ಕದನ ಕಲಿ; ದಿಗ್ವಿಜಯಕ್ಕೆ ಇದೇ ಐದು ಕಾರಣಗಳು!

Karnataka Election Result 2023: ಭಜರಂಗ ಬಲಿ, ಗ್ಯಾರಂಟಿ ಘೋಷಣೆ, ಸಿದ್ಧರಾಮಯ್ಯ-ಡಿಕೆಶಿ ಸಮರ್ಥ ನಾಯಕತ್ವ ಹಾಗೂ ಸಮುದಾಯದ ವೋಟ್‌ಗಳಿಗೆ ಆದ್ಯತೆ ನೀಡಿದ ಕಾಂಗ್ರೆಸ್‌ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದೆ.
 

Karnataka assembly election results 2023 Congress Victory Five Reason san
Author
First Published May 13, 2023, 4:24 PM IST

ಬೆಂಗಳೂರು (ಮೇ.13): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೊರತಾಗಿ ಯಾರೊಬ್ಬರೂ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆಯಲ್ಲಿ ಇಷ್ಟು ದೊಡ್ಡ ಮಟ್ಟದ ಬಹುಮತ ಸಿಗಲಿದೆ ಎಂದು ಹೇಳಿರಲಿಲ್ಲ. ಆದರೆ ಅಂಥದ್ದೊಂದು ದೊಡ್ಡ ಗೆಲುವನ್ನು ಕಾಂಗ್ರೆಸ್‌ ಪಕ್ಷ ಕಂಡಿದೆ. ಕಾಂಗ್ರೆಸ್‌ ಪಕ್ಷ ಬಹುಮತ ಸಾಧಿಸಿದ ಬೆನ್ನಲ್ಲಿಯೇ, ಡಿಕೆ ಶಿವಕುಮಾರ್‌ ಮಾಧ್ಯಮದ ಎದುರೇ ಕಣ್ಣೀರಿಟ್ಟಿದ್ದಾರೆ. ಕಾಂಗ್ರೆಸ್‌ ಗೆಲುವಿಗಾಗಿ ಎಷ್ಟು ಪ್ರಯತ್ನ ಪಟ್ಟಿತ್ತು ಅನ್ನೋದರ ಅರ್ಥವೇ ಈ ಗೆಲುವು. ಹಾಗಾದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದ್ದು ಏನು, ಪಕ್ಷ ಘೋಷಣೆ ಮಾಡಿದ ಗ್ಯಾರಂಟಿಗಳು ಕೈ ಹಿಡಿಯಿತೇ? ಅಥವಾ ಬಿಜೆಪಿ ವಿರುದ್ಧದ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಗೆಲುವಿಗೆ ಕಾರಣವಾಯಿತೇ ಎನ್ನುವ ವಿಶ್ಲೇಷಣೆಗಳು ಆರಂಭವಾಗಿದೆ. ಒಟ್ಟಾರೆ, ಕಾಂಗ್ರೆಸ್‌ನ ಮಹಾನ್‌ ವಿಜಯಕ್ಕೆ ಕಾರಣಗಳೇನು ಎನ್ನುವುದರ ಸಣ್ಣ ವಿವರಣೆ ಎಲ್ಲಿದೆ.

1. 40% ಕಮೀಷನ್‌ ಆರೋಪ, ಪೇಸಿಎಂ ಅಭಿಯಾನ!
ಚುನಾವಣೆಗೆ ಕಾಂಗ್ರೆಸ್‌ನ ದೊಡ್ಡ ಮಟ್ಟದ ತಯಾರಿ ಆರಂಭವಾಗಿದ್ದು, ಪೇಸಿಎಂ ಅಭಿಯಾನದ ಮೂಲಕ. ಬಿಜೆಪಿಯ ವಿರುದ್ಧ 40% ಕಮೀಷನ್‌ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಆಕ್ರೋಶವನ್ನು ಕಾಂಗ್ರೆಸ್‌ ಉತ್ತಮ ರೀತಿಯಲ್ಲಿ ಬಳಸಿಕೊಂಡಿತು. ಇದಕ್ಕೆ ಇಂಬು ನೀಡುವಂತೆ ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ದೊಡ್ಡ ಮಟ್ಟದ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದ. ಇದರ ಬೆನ್ನಲ್ಲಿಯೇ ಈಶ್ವರಪ್ಪ ತಮ್ಮ ಸಚವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಸರ್ಕಾರದ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಕೂಡ ಬರೆದಿತ್ತು. ಇನ್ನೇನು ಚುನಾವಣೆ ಹತ್ತಿರದಲ್ಲಿದ್ದಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ದಾಳಿ ನಡೆದಿದ್ದು ಹಾಗೂ ಆ ನಂತರದ ವಿದ್ಯಮಾನಗಳು ಬಿಜೆಪಿಗೆ ಭಾರಿ ಮುಜುಗರ ತಂದಿಟ್ಟಿತ್ತು.  ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ವಿರುದ್ಧ 85% ಕಮೀಷನ್‌ ಆರೋಪ ಹೊರಿಸಿದರೂ ಅದು ಜನರಿಗೆ ರೀಚ್‌ ಆಗುವಲ್ಲಿ ಯಶಸ್ವಿಯಾಗಲಿಲ್ಲ.

2. ಗ್ಯಾರಂಟಿ ರಾಜಕೀಯಕ್ಕೆ ಒಲಿದ ಮತದಾರ
ಇನ್ನು ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ ತನ್ನ ಗ್ಯಾರಂಟಿಗಳನ್ನು ಸ್ಪಷ್ಟವಾಗಿ ಪ್ರಚಾರ ಮಾಡಿತು. ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ತಲುಪಿಸುವ ಮೂಲಕ ಚುನಾವಣಾ ಅಖಾಡದಲ್ಲಿ ಸುದ್ದಿ ಮಾಡಿತು. ಸೋಶಿಯಲ್‌ ಮೀಡಿಯಾ, ಟಿವಿ ಹಾಗೂ ರೇಡಿಯೋಗಳಲ್ಲಿ ಕಾಂಗ್ರೆಸ್‌ ನೀಡಿದ ಕ್ರಿಯೆಟಿವ್‌ ಜಾಹೀರಾತುಗಳು ಕೂಡ ಬಿಜಿಪಿಯ ಪ್ರಭಾವವನ್ನು ಕಡಿಮೆ ಮಾಡುವಂತೆ ಮಾಡಿತು. ಪ್ರತಿ ತಿಂಗಳು ಬಿಪಿಎಲ್‌ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ, 200 ಯುನಿಟ್‌ ಫ್ರಿ ವಿದ್ಯುತ್‌, ನಿರುದ್ಯೋಗಿ ಯುವಕರಿಗೆ 3 ಸಾವಿರ ರೂಪಾಯಿ ಭತ್ಯೆ, ಪ್ರತಿ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಭತ್ಯೆ ಸೇರಿದಂತೆ ಹಲವು ಜನಮನಸೆಳೆಯುವ ಘೋಷಣೆಗಳನ್ನು ಮಾಡಿತು. ಅದರೊಂದಿಗೆ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಯೋಜನೆಗಳನ್ನೂ ಕಾಂಗ್ರೆಸ್‌ ಪ್ರಕಟಿಸಿತು. ಬಿಪಿಎಲ್‌ ಕಾರ್ಡ್ ಹೊಂದಿರುವವರನ್ನೇ ಗುರಿಯಾಗಿಸಿ ಕಾಂಗ್ರೆಸ್‌ ಈ ಘೋಷಣೆಗಳನ್ನು ಮಾಡಿತ್ತು. ಅದರೊಂದಿಗೆ ಬೆಲೆ ಏರಿಕೆ, ಸಿಲಿಂಡರ್, ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಗಳನ್ನು ಕಾಂಗ್ರೆಸ್‌ ಬಹಳ ಉತ್ತಮವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿತು.

3. ಹಲಾಲ್‌, ಹಿಜಾಬ್‌ಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್‌
ಧರ್ಮದಂಗಲ್‌ಗೆ ಕಾರಣವಾಗಿದ್ದ ಹಿಜಾಬ್‌, ಹಲಾಲ್‌ ಹಾಗೂ ಅಜಾನ್‌ ವಿಚಾರವಾಗಿ ಕಾಂಗ್ರೆಸ್‌ ಎಲ್ಲೂ ನೇರಾನೇರ ಹೇಳಿಕೆ ನೀಡಿರಲಿಲ್ಲ. ಬಿಜೆಪಿ ಇದಕ್ಕೆಲ್ಲ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಹೇಳಿದರೂ, ಕಾಂಗ್ರೆಸ್‌ ಮಾತ್ರ ಇದರಿಂದ ದೂರು ಉಳಿಯಿತು. ಹಿಜಾಬ್‌ ವಿಚಾರವಾಗಿ ಸಣ್ಣ ಪುಟ್ಟ ಹೇಳಿಕೆ ನೀಡಲು ಪ್ರಯತ್ನಿಸಿದರೂ, ಇದು ಪಕ್ಷಕ್ಕೆ ಹೊಡೆತ ಬೀಳುವ ಆತಂಕವನ್ನು ಅರಿತ ಕಾಂಗ್ರೆಸ್‌, ಸೈಲೆಂಟಾಗಿ ಈ ವಿಚಾರದಿಂದ ಹಿಂದೆ ಸರಿದು ಹೋಯಿತು. ಪ್ರವೀಣ್‌ ನೆಟ್ಟಾರು ಹತ್ಯೆಯನ್ನು ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಲು ಬಳಸಿಕೊಂಡರೂ, ಇದು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಹಿನ್ನಡೆಗೆ ಕಾರಣವಾಯಿತು. 
 

4. ಭಾರತ್‌ ಜೋಡೋ, ಮೇಕೆದಾಟು ಯಾತ್ರೆಯ ಯಶಸ್ಸು
ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ, ಮೇಕೆದಾಟು ಪಾದಯಾತ್ರೆ ಹಾಗೂ ಫ್ರೀಡಮ್‌ ಮಾರ್ಚ್ ಇದು ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆಯ ಹೊಸ್ತಿಲಲ್ಲಿ ದೊಡ್ಡ ಲಾಭವನ್ನು ಮಾಡಿಕೊಟ್ಟಿತು. ಭಾರತ್‌ ಜೋಡೋ ಸಾಗಿದ ಪ್ರತಿ ರಾಜ್ಯದಲ್ಲೂ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಬಲವಾಗಿದ್ದರೆ, ಕರ್ನಾಟಕದಲ್ಲಿ ಅದು ಚುನಾವಣೆಯ ನಿಟ್ಟಿನಲ್ಲಿ ಬಹಳ ಮಹತ್ವದ್ದಾಗಿತ್ತು. ಇದನ್ನು ಸ್ಥಳೀಯ ನಾಯಕರು ಕೂಡ ಉತ್ತಮವಾಗಿ ಬಳಸಿಕೊಂಡರು. ಮೇಕೆದಾಟು ಹಾಗೂ ಫ್ರೀಡಮ್‌ ಮಾರ್ಚ್‌ನ ಯಶಸ್ಸು ಕೂಡ ಕಾಂಗ್ರೆಸ್‌ನ ಬಲ ನೀಡಿದ್ದವು.

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

5. ಡಿಕೆಶಿ-ಸಿದ್ದರಾಮಯ್ಯ ನಾಯಕತ್ವ
ಸಿಎಂ ವಿಚಾರವಾಗಿ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟರೂ, ಚುನಾವಣೆಯಲ್ಲಿ ಇದು ದೊಡ್ಡ ವಿಚಾರವಾಗದಂತೆ ಎಚ್ಚರಿಕೆ ವಹಿಸಿತು. ಅದರೊಂದಿಗೆ ಸ್ಥಳೀಯ ನಾಯಕರಾದ ಎಂಬಿ ಪಾಟೀಲ್‌, ಖಾದರ್‌, ಜಿ ಪರಮೇಶ್ವರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ಗೆ ಬಲ ನೀಡಿದರೆ, ಆಡಳಿತಾರೂಢವಾಗಿದ್ದ ಬಿಜೆಪಿ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬದಲು ಪ್ರಧಾನಿ ಮೋದಿ ಅವರನ್ನೇ ಬಹುವಾಗಿ ನೆಚ್ಚಿಕೊಂಡಿತು. ಯಡಿಯೂರಪ್ಪ ಎಲ್ಲೂ ಮುಖ್ಯವಾಗಿ ಕಾಣಿಸಿಕೊಳ್ಳಲೇ ಇಲ್ಲ. ಇನ್ನು ಬಸವರಾಜ್‌ ಬೊಮ್ಮಾಯಿ ಪ್ರಚಾರದಲ್ಲಿ ಆಡಿದ ಮಾತುಗಳು ಅವರಿಗೇ ಮಾತ್ರವೇ ಪ್ರೀತಿಯಾಗುವಂತಿತ್ತು.

Karnataka Assembly Election 2023 Result: ಪಕ್ಷಾಂತರಿಗಳನ್ನು ಮನೆಯಲ್ಲೇ ಕೂರಿಸಿದ ಮತದಾರ ಪ್ರಭು

Follow Us:
Download App:
  • android
  • ios