ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಸೋಲು: ಸುಮಲತಾ
ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಕಮಲ ಅರಳದಿರುವುದಕ್ಕೆ ರಾಜ್ಯದೊಳಗೆ ಬಿಜೆಪಿಗಿದ್ದ ವಿರೋಧಿ ಅಲೆಯೇ ಕಾರಣ ಎಂದು ಸಂಸದೆ ಸುಮಲತಾ ನೇರವಾಗಿ ಹೇಳಿದರು.
ಭಾರತೀನಗರ (ಮೇ.30) : ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಕಮಲ ಅರಳದಿರುವುದಕ್ಕೆ ರಾಜ್ಯದೊಳಗೆ ಬಿಜೆಪಿಗಿದ್ದ ವಿರೋಧಿ ಅಲೆಯೇ ಕಾರಣ ಎಂದು ಸಂಸದೆ ಸುಮಲತಾ ನೇರವಾಗಿ ಹೇಳಿದರು.
ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇತ್ತು. ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಕಡೆ ಜನ ಒಲವು ತೋರಿದ್ದರು. 35 ವರ್ಷದಲ್ಲಿ 135 ಸ್ಥಾನಗಳಲ್ಲಿ ಯಾವ ಪಕ್ಷವೂ ಗೆದ್ದಿರಲಿಲ್ಲ. ಮತ ಚಲಾವಣೆ ಸುನಾಮಿ ರೀತಿಯೇ ಇತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೊಡ್ಡ ಡೀಲಿಂಗ್‌ಮಾಸ್ಟರ್ ಎಂದ ಟ್ರೋಲರ್ಸ್‌ಗೆ ಚಳಿ ಬಿಡಿಸಿದ ಸಂಸದೆ ಸುಮಲತಾ ಅಂಬರೀಶ್
ಗೆಲುವಿಗೆ ನಿರೀಕ್ಷೆಗೂ ಮೀರಿ ಶ್ರಮ:
ಮೊದಲಿನಿಂದಲೂ ಮಂಡ್ಯದಲ್ಲಿ ಬಿಜೆಪಿಗೆ ನೆಲ ಇರಲಿಲ್ಲ. ವಿರೋಧಿ ಅಲೆಯೊಳಗೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಿತ್ತು. ನಾವು ಗೆಲುವಿಗೆ ನಿರೀಕ್ಷೆಗೂ ಮೀರಿದ ಶ್ರಮ ಹಾಕಿದ್ದೇವೆ. ಆದರೂ 2018ಕ್ಕೆ ಹೋಲಿಸದರೆ ಈ ಬಾರಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಇದು ನಮಗೆ ಮುಂದೆ ಚುನಾವಣೆ ಎದುರಿಸಲು ಧೈರ್ಯ ಮತ್ತು ಸ್ಫೂರ್ತಿ ತಂದಿದೆ. ಒಂದೇ ದಿನಕ್ಕೆ ಎಲ್ಲವನ್ನೂ ಗೆಲ್ಲುವುದಕ್ಕೆ ಆಗುವುದಿಲ್ಲ. ಮುಂದೆ ಪಕ್ಷವನ್ನು ಕಟ್ಟಿತಳಮಟ್ಟದಿಂದ ಬೆಳೆಸಬೇಕು ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗೊಂದಲ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸದ್ಯಕ್ಕೆ ನಾನು ಆ ವಿಷಯವಾಗಿ ಕಮೆಂಟ್ ಮಾಡೋಕೆ ಇಷ್ಟಪಡೋಲ್ಲ. ಕಾಂಗ್ರೆಸ್‌ನವರು ಸಮಯಾವಕಾಶ ನೀಡುವಂತೆ ಕೇಳಿದ್ದಾರೆ. ಅಲ್ಲಿಯವರೆಗೆ ಕಾಯೋಣ. ಪ್ರಚಾರದ ವೇಳೆ ಅವರು ನೀಡಿರುವ ಆಶ್ವಾಸನೆಯಂತೆ ನಡೆದುಕೊಳ್ಳಬೇಕು. ಅದನ್ನು ಜನರೂ ಎದುರು ನೋಡುತ್ತಿದ್ದಾರೆ. ನಾನು ಹೇಳುವುದಕ್ಕಿಂತ ಜನನೇ ಪ್ರತಿಕ್ರಿಯೆ ನೀಡುತ್ತಾರೆ. ಕೊಟ್ಟಆಶ್ವಾಸನೆ ಈಡೇರಿಸುತ್ತಾರೆಂತಲೇ ಇಷ್ಟೊಂದು ಬಹುಮತ ನೀಡಿರೋದು. ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ನೀಡಬೇಕು ಎಂದರು.
ಮ್ಯಾಚ್‌ಫಿಕ್ಸಿಂಗ್ ಅಗತ್ಯವಿಲ್ಲ:
ಸುಮಲತಾ(Sumalata ambarish) ಮ್ಯಾಚ್ ಫಿಕ್ಸಿಂಗ್‌ನಿಂದ ನಾನು ಸೋತೆ ಎಂಬ ಮೇಲುಕೋಟೆ ಪರಾಜಿತ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಆರೋಪ ವಿಚಾರವಾಗಿ ಕೇಳಿದಾಗ, ಅವರ ಹೇಳಿಕೆ ಬಗ್ಗೆ ನಾನು ಮಾತಾಡಲು ಇಷ್ಟಪಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಸೂಚ್ಯವಾಗಿ ನುಡಿದರು.
ನಾನು ಯಾವಾಗಲೂ ಪ್ರತ್ಯಕ್ಷ ಮತ್ತು ನೇರವಾಗಿ ಮಾತುಗಳನ್ನು ಹೇಳಿದ್ದೇನೆ. ಪಕ್ಷದ ವರಿಷ್ಠರ ಜೊತೆ ಮೊದಲಿಂದಲೂ ಹೇಳಿದ್ದೆ. ನಾನು ಹೇಳಿದ್ದನ್ನು ಅವರೂ ಒಪ್ಪಿಕೊಂಡಿದ್ದರು. ನನಗೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಪಾಂಡವಪುರ ಕ್ಷೇತ್ರದ ಬಗ್ಗೆ ನನ್ನ ನಿಲುವನ್ನು ತಿಳಿಸಿದ್ದೆ. ಅದು ಇಂದ್ರೇಶ್ ಹಾಗೂ ಪಕ್ಷದ ನಡುವೆ ಇರುವ ಪ್ರಶ್ನೆ. ನನ್ನನ್ನು ಕೇಳುವ ಅಗತ್ಯವಿಲ್ಲ, ಅವರ ನಾಯಕರನ್ನು ಕೇಳಿಕೊಳ್ಳಬೇಕು. ಈ ರೀತಿ ಬಾಲಿಶ ಹೇಳಿಕೆ ಕೊಡಬಾರದು ಎಂದರು.
ದೇವೇಗೌಡರ ಬಗ್ಗೆ ಅಭಿಮಾನ:
ಲೋಕಸಭಾ ಚುನಾವಣೆ ವಿಚಾರವಾಗಿ ಕೇಳಿದಾಗ, ಈಗಷ್ಟೇ ಒಂದು ಚುನಾವಣೆ ಮುಗಿದಿದೆ. ಪ್ರಸ್ತುತ ನನ್ನ ಮಗನ ಮದುವೆ ಮಾಡುತ್ತೇನೆ. ಆ ಮೇಲೆ ಚುನಾವಣೆ ಬಗ್ಗೆ ಮಾತನಾಡೋಣ ಎಂದ ಅವರು, ಸಂಸತ್‌ನಲ್ಲಿ ದೇವೇಗೌಡರನ್ನು ಭೇಟಿ ಮಾಡಿರುವ ವಿಚಾರ ಕೇಳಿದಾಗ, ಅವರು ನಮ್ಮ ಹಿರಿಯರು. ಅವರ ಮೇಲೆ ತುಂಬಾ ಅಭಿಮಾನವಿದೆ. ಅಭಿಮಾನವನ್ನು ಯಾವತ್ತೂ ಇಲ್ಲ ಎನ್ನುವುದಿಲ್ಲ. ಅವರಿಗೆ ರಾಷ್ಟ್ರದಲ್ಲಿ ಒಂದು ಸ್ಥಾನ-ಮಾನ, ಗೌರವವಿದೆ. ಅವರನ್ನು ಮಾತನಾಡಿಸಿದ್ದರಿಂದ ಖುಷಿಯಾಗಿದೆ. ಅವರೂ ಸಹ ತುಂಬಾ ಅಭಿಮಾನದಿಂದ ನನ್ನನ್ನು ಮಾತನಾಡಿಸಿದರು. ಅವರಿಗೂ ಮದುವೆ ಆಹ್ವಾನ ನೀಡಿದ್ದೇನೆ ಎಂದು ನುಡಿದರು.
ನನ್ನ ಮಗನ ಮದುವೆಗೆ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಎಲ್ಲ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಿದ್ದೇವೆ. ಅಭಿಷೇಕ್ ಮದುವೆ ತಯಾರಿಗೆ ನನಗೆ ಈಗ ತಾನೇ ಸಮಯ ಸಿಕ್ಕಿದೆ. ಮದುವೆ ತಯಾರಿಯಲ್ಲಿ ನಾನು ಹೆಚ್ಚು ಭಾಗಿಯಾಗಲು ಆಗಿರಲಿಲ್ಲ. ನಮ್ಮ ಕುಟುಂಬ ಸದಸ್ಯರು ಎಲ್ಲಾ ಸೇರಿ ತಯಾರಿ ಮಾಡುತ್ತಿದ್ದಾರೆ.
ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲ; ಯಾವುದೇ ಪಕ್ಷ ನನ್ನ ಟಾರ್ಗೆಟ್ ಅಲ್ಲ: ಸುಮಲತಾ
ಬೀಗರ ಊಟ ಮಂಡ್ಯದಲ್ಲೇ:
ನನ್ನ ಮಗನ ಮದುವೆ, ಆರತಕ್ಷತೆ ನಡೆಯುವುದು ಬೆಂಗಳೂರಿನಲ್ಲಿ. ಮಂಡ್ಯದಲ್ಲೇ ಬೀಗರ ಔತಣವಿದೆ. ಬೀಗರ ಊಟದ ಸಿದ್ಧತೆಯೂ ನಡೆಯುತ್ತಿದೆ. ಮಂಡ್ಯದಲ್ಲಿ ಯಾವ ಜಾಗದಲ್ಲಿ ನಡೆಯಲಿದೆ ಎನ್ನುವುದನ್ನು ಸದ್ಯದಲ್ಲೆ ಹೇಳುತ್ತೇನೆ ಎಂದರು.