Asianet Suvarna News Asianet Suvarna News

ಬೆಂಗಳೂರು ನಗರ: ಮತ ಹಾಕಿದವರಿಗೆ ಸ್ಥಳೀಯರಿಂದ ಬಿರಿಯಾನಿ

ಮತದಾನ ದಿನವಾದ ಬುಧವಾರ ಇವಿಎಂ ದೋಷ, ನೂಕುನುಗ್ಗಲು ಸೇರಿದಂತೆ ಇತರೆ ಸಣ್ಣಪುಟ್ಟಘಟನೆಗಳ ಹೊರತಾಗಿ ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ದಾಸರಹಳ್ಳಿ ಸೇರಿದಂತೆ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಆರಂಭದಲ್ಲಿ ನೀರಸವಾಗಿ ನಡೆದ ಮತದಾನ ಸಂಜೆ ಹೊತ್ತಿಗೆ ಚುರುಕು ಪಡೆದುಕೊಂಡಿತು.

Karnataka assembly election Biryani meal from locals for those who voted at bengaluru rav
Author
First Published May 11, 2023, 4:33 AM IST

ಬೆಂಗಳೂರು (ಮೇ.11) : ಮತದಾನ ದಿನವಾದ ಬುಧವಾರ ಇವಿಎಂ ದೋಷ, ನೂಕುನುಗ್ಗಲು ಸೇರಿದಂತೆ ಇತರೆ ಸಣ್ಣಪುಟ್ಟಘಟನೆಗಳ ಹೊರತಾಗಿ ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ದಾಸರಹಳ್ಳಿ ಸೇರಿದಂತೆ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಆರಂಭದಲ್ಲಿ ನೀರಸವಾಗಿ ನಡೆದ ಮತದಾನ ಸಂಜೆ ಹೊತ್ತಿಗೆ ಚುರುಕು ಪಡೆದುಕೊಂಡಿತು.

ನವ ವಧು ಕಲ್ಯಾಣಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರೆ, 89 ವರ್ಷದ ಲಲಿತಮ್ಮ ಎಂಬುವರು ತಮ್ಮ ಮಗನೊಂದಿಗೆ ನಡೆದುಕೊಂಡೇ ಬಂದು ವಿಜಯನಗರದ ಆರ್‌ಪಿಸಿ ಲೇಔಟ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು ಯುವಜನರನ್ನೂ ನಾಚಿಸುವಂತಿತ್ತು.

Karnataka election 2023: ರಾಜ್ಯದಲ್ಲಿ ಶೇ.72.67 ಮತದಾನ, ದಾಖಲೆ ಬರೆದ ಮತದಾರ!

ಬೆಳಗ್ಗೆ 7ರಿಂದಲೇ ಮತದಾನ ಆರಂಭಗೊಂಡಿದ್ದರೂ ಮಧ್ಯಾಹ್ನ 12 ಗಂಟೆಯಾದರೂ ಬಹುತೇಕ ಮತಗಟ್ಟೆಗಳಲ್ಲಿ ಶೇ.25ರಷ್ಟುಮತದಾನ ನಡೆದಿರಲಿಲ್ಲ. ಯಶವಂತಪುರ, ದಾಸರಹಳ್ಳಿ, ಗೋವಿಂದರಾಜನಗರ, ವಿಜಯನಗರ, ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ ಬೆಳಗ್ಗಿನಿಂದ ನೀರಸ ಮತದಾನ ನಡೆದಿತ್ತು. ಮತಗಟ್ಟೆಅಧಿಕಾರಿಗಳೇ ಬಾಗಿಲಲ್ಲಿ ನಿಂತ ಮತದಾರರ ಸ್ವಾಗತಿಸಿ ಮತದಾನ ಮಾಡಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಮುತ್ತುರಾಯ ನಗರದಲ್ಲಿ ಮತದಾನ ಮಾಡಿದ ನಂತರ ಮತದಾರರಿಗೆ ಸ್ಥಳೀಯ ಮುಖಂಡರು ಬಿರಿಯಾನಿ ವಿತರಿಸಿದರೆ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಯಶವಂತಪುರದಲ್ಲಿ ಮತಗಟ್ಟೆಯಿಂದ 100 ಮೀಟರ್‌ ದೂರದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಮತದಾರರಿಗೆ ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಮಧ್ಯಾಹ್ನವಾದರೂ ಮತದಾರರು ಮತಗಟ್ಟೆಗಳತ್ತ ಬಾರದಿರುವುದನ್ನು ಕಂಡ ವಿವಿಧ ಪಕ್ಷಗಳ ಮುಖಂಡರು, ತಮ್ಮ ಕಾರ್ಯಕರ್ತರನ್ನು ಮನೆ ಮನೆಗೆ ಕಳುಹಿಸಿ ಮತದಾರರನ್ನು ಕರೆ ತರಲು ಮುಂದಾಗಿದ್ದರು. ಹೀಗಾಗಿ ಮಧ್ಯಾಹ್ನದ ಬಳಿಕ ಮತಗಟ್ಟೆಗಳಲ್ಲಿ ಮತದಾನ ಚುರುಕುಗೊಂಡಿತು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಂ.ಎಲ್‌.ಎ ಕಾಲೇಜಿನಲ್ಲಿ ಮಹಿಳಾ ಮತದಾರರನ್ನು ಹುರಿದುಂಬಿಸುವ ಸಲುವಾಗಿ ಅವರಿಗಾಗಿ ಕೆಲವು ಕಡೆ ಪಿಂಕ್‌ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಅಲ್ಲಿ ಕೊಠಡಿ ಮಾತ್ರ ಪಿಂಕ್‌ ಬಣ್ಣದಿಂದ ಕೂಡಿತ್ತೇ ವಿನಃ ಮತ್ತೆಲ್ಲೂ ಪಿಂಕ್‌ ಬಣ್ಣದ ವಸ್ತುಗಳಿಂದ ಸಿಂಗರಿಸಿರಲಿಲ್ಲ. ಇಲ್ಲಿ ಮಹಿಳೆಯರು ಹೊರತಾಗಿ ಪುರುಷರು ಸಹ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.

ಬಿಗಿ ಬಂದೋಬಸ್ತ್

ಎಲ್ಲ ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರೊಂದಿಗೆ ಬಿಎಸ್‌ಎಫ್‌ ಯೋಧರನ್ನು ಬಂದೋಬಸ್‌್ತಗೆ ಬಳಸಲಾಗಿತ್ತು. ಈ ಪರಿಣಾಮ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ. ಪೊಲೀಸರು ಮತ್ತು ಯೋಧರು ಬಂದೋಬಸ್‌್ತನೊಂದಿಗೆ ಮತದಾರರು ಯಾವ ಮತಗಟ್ಟೆಗಳಲ್ಲಿ ಮತ ಚಲಾಯಿಸಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ನೀಡುತ್ತಿದ್ದರು. ಇದು ಮತದಾರರ ಮೆಚ್ಚುಗೆಗೂ ಪಾತ್ರವಾಯಿತು.

ಮತದಾನದ ದಿನ ರಾಜ್ಯದಲ್ಲಿ ಐವರು ಸಾವು!

ವೃದ್ಧರಿಗೆ, ಅಂಗವಿಕಲರಿಗೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲು ತ್ರಾಸ ಆಗುತ್ತದೆ ಎಂದು, ಕೆಲ ಮತಗಟ್ಟೆಗಳಲ್ಲಿ ಕುರ್ಚಿಗಳು, ಶಾಮೀಯಾನದ ವ್ಯವಸ್ಥೆ ಮಾಡಲಾಗಿತ್ತು. ತುಂಬಾ ಹೊತ್ತು ನಿಂತುಕೊಳ್ಳಲು ಸಾಧ್ಯವಾಗದ ಮತದಾರರಿಗೆ ಕುಳಿತುಕೊಳ್ಳಲು ಭದ್ರತಾ ಸಿಬ್ಬಂದಿಯೇ ನೆರವು ನೀಡಿ ಗಮನ ಸೆಳೆದರು.

Follow Us:
Download App:
  • android
  • ios