Karnataka election 2023: ರಾಜ್ಯದಲ್ಲಿ ಶೇ.73 ಮೀರಿದ ಮತದಾನ, ಮತದಾರರಿಂದ ಭರ್ಜರಿ ರೆಸ್ಪಾನ್ಸ್

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇಕಡಾ 73.19 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Karnataka assembly election 2023 voters turnout percentage details sat

ಬೆಂಗಳೂರು (ಮೇ 10): ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.73.19 ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 

ರಾಜ್ಯಾದ್ಯಂತ ಬಿಗಿ ಭದ್ರತೆಯ ನಡುವೆ ಬುಧವಾರದಂದು ಏಕ ಹಂತದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಬುಧವಾರ ರಾತ್ರಿ ವೇಳೆಗೆ ಶೇ.72.67 ರಷ್ಟು ಮತದಾನವಾಗಿತ್ತು. ಇನ್ನು ಗುರುವಾರ ಮಧ್ಯಾಹ್ನದ ವೇಳೆಗೆ ಪೂರ್ಣ ಮತದಾನದ ವಿವರ ಲಭ್ಯವಾಗಿದ್ದು ಶೇ.73.19 ಮತದಾನವಾಗಿದೆ ಎಂದು ತಿಳಿಸಿದೆ. ಆದರೆ, ಇನ್ನೂ ಅಂತಿಮ ಅಂಕಿ ಅಂಶಗಳು ಲಭ್ಯವಾಗಿಲ್ಲ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಅತಿಹೆಚ್ಚು ಶೇ.85.56 ಪ್ರತಿಶತದೊಂದಿಗೆ ಮೊದಲ ಸ್ಥಾನ ಹಾಗೂ ಬೆಂಗಳೂರು ದಕ್ಷಿಣ ಶೇ.52.33 ಪ್ರತಿಶತದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು ನೆರೆಹೊರೆ ಜಿಲ್ಲೆಗಳಲ್ಲಿ ಭರ್ಜರಿ ಮತದಾನ: ರಾಜ್ಯದಲ್ಲಿ ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಶೇ.72.6 ಮತದಾನವಾಗಿತ್ತು. ಆದರೆ, ಈ ವರ್ಷ ಕಳೆದ ಚುನಾವಣಾ ಮತದಾನಕ್ಕಿಂತ ಹೆಚ್ಚಿನ ಮತದಾನವಾಗಿದೆ. ಇನ್ನು ಬೆಂಗಳೂರಿನಲ್ಲಿ ಕಳಪೆ ಪ್ರಮಾಣದ ಮತದಾನ ಆಗಿದ್ದರೂ, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಾತ್ರ ಭರ್ಜರಿ ಮತದಾನವಾಗಿದೆ. ಚಿಕ್ಕಬಳ್ಳಾಪುರ ಶೇ.85.56, ಬೆಂಗಳೂರು ಗ್ರಾಮಾಂತರ ಶೇ.85.08, ರಾಮನಗರ ಶೇ.85.04 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇನ್ನು ಬೆಂಗಳೂರು ನಗರದ ಬಿಬಿಎಂಪಿ ದಕ್ಷಿಣ ಶೇ.52.33 ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ.

ರಾಜ್ಯದ 11 ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಕಿಂಗ್: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು ರಾಷ್ಟ್ರ ಹಾಗೂ ರಾಜ್ಯದ ಸಮೀಕ್ಷಾ ಸಂಸ್ಥೆಗಳು ಸೇರಿ ಒಟ್ಟು 11 ಸಂಸ್ಥೆಗಳಿಂದ ಸಮೀಕ್ಷಾ ವರದಿ ಬಿಡುಗಡೆ ಮಾಡಿವೆ. ಅದರಲ್ಲಿ ಕಾಂಗ್ರೆಸ್‌ಗೆ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು 8 ಸಮೀಕ್ಷೆಗಳಿಂದ ಮಾಹಿತಿ ಲಭ್ಯವಾಗಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ. ಇನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಜೀ ನ್ಯೂಸ್‌ ಹಾಗೂ ಸಿಜಿಎಸ್‌ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಸಮೀಕ್ಷೆಯನ್ನು ತಿಳಿಸಿವೆ.

  • ಜಿಲ್ಲಾವಾರು ಮತದಾನದ ವಿವರ ಇಲ್ಲಿದೆ ನೋಡಿ..
  • ಬೆಳಗಾವಿ    76.95
  • ಬಳ್ಳಾರಿ     76.24
  • ಬೀದರ್‌     71.59
  • ಬಾಗಲಕೋಟೆ 75.92
  • ವಿಜಯಪುರ    71.34
  • ಚಾಮರಾಜನಗರ 81.48
  • ಚಿಕ್ಕಬಳ್ಳಾಪುರ 85.56
  • ಚಿಕ್ಕಮಳೂರು     78.30
  • ಚಿತ್ರದುರ್ಗ  81.18
  • ದಕ್ಷಿಣ ಕನ್ನಡ 76.25
  • ದಾವಣಗೆರೆ 78.12
  • ಧಾರವಾಡ 73.45
  • ಗದಗ 75.61
  • ಕಲಬುರಗಿ 66.43
  • ಹಾಸನ 81.73
  • ಹಾವೇರಿ 81.50
  • ಕೊಡಗು 74.73
  • ಕೋಲಾರ 81.75
  • ಕೊಪ್ಪಳ 77.81
  • ಮಂಡ್ಯ 84.45
  • ಮೈಸೂರು 75.12
  • ರಾಯಚೂರು 70.03
  • ರಾಮನಗರ 85.04
  • ಶಿವಮೊಗ್ಗ 79.15
  • ತುಮಕೂರು 83.58
  • ಉಡುಪಿ 78.57
  • ಉತ್ತರ ಕನ್ನಡ 77.92
  • ವಿಜಯನಗರ 78.07
  • ಯಾದಗಿರಿ 68.77
  • ಬೆಂಗಳೂರು ಗ್ರಾಮಾಂತರ 85.08
  • ಬೆಂಗಳೂರು ನಗರ 57.71
  • ಬಿಬಿಎಂಪಿ ದಕ್ಷಿಣ 52.33
  • ಬಿಬಿಎಂಪಿ ಉತ್ತರ 52.59
  • ಬಿಬಿಎಂಪಿ ಕೇಂದ್ರ 55.50

ಮತ್ತೊಮ್ಮೆ ಅಧಿಕಾರ ಹಿಡಿಯುವ ಕಸರತ್ತು:
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೋದಿ ಅಲೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ರಾಜ್ಯದಲ್ಲಿ ಕಳೆದ 1985 ರಿಂದ ಅಧಿಕಾರಕ್ಕೆ ಬಂದ ಪಕ್ಷವನ್ನು ಕರ್ನಾಟಕದ ಜನತೆ ಯಾವತ್ತೂ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಬಹುಮತವನ್ನು ನೀಡಿಲ್ಲ. ಬಿಜೆಪಿಯಿಂದ ರಾಜ್ಯದ ದಕ್ಷಿಣ ಭಾಗದಲ್ಲಿ ತನ್ನ ಕ್ಷೇತ್ರಗಳನ್ನು ವಿಸ್ತರಣೆ ಮಾಡಿಕೊಳ್ಳುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ. 

ಕಾಂಗ್ರೆಸ್‌ನಿಂದ ಸರ್ಕಾರ ರಚನೆಗೆ ಸಿದ್ಧತೆ: 
ಮತ್ತೊಂದೆಡೆ ಕಾಂಗ್ರೆಸ್‌ನಿಂದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಭ್ರಷ್ಟಾಚಾರ-ವಿರೋಧಿ ಆಡಳಿತವನ್ನು ಜನರ ಮುಂದಿಟ್ಟು ಲಾಭ ಮಾಡಿಕೊಳ್ಳಲು ನೋಡುತ್ತದೆ. ಈ ಬಾರಿ ರಾಜ್ಯದಲ್ಲಿ ತನ್ನ ಅಧಿಕಾರವನ್ನು ಮರುಸ್ಥಾಪಿಸುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಕಸರತ್ತು ಮಾಡುತ್ತಿದೆ. ಇನ್ನು ಹಲವು ಸಮೀಕ್ಷೆಗಳಲ್ಲಿ ಕಾಂಗ್ರಸ್‌ ಬಹುಮತ ಪಡೆಯಲಿದೆ ಎಂದು ಹೇಳಲಾಗುತ್ತಿದ್ದು, ಸರ್ಕಾರ ರಚನೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಸುಳಿವು ಸಿಕ್ಕಿದೆ. ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್‌ ಕೂಡ ರಾಜ್ಯದಲ್ಲಿ ಅತಂತ್ರ ಸ್ಥಿತಿ ಬಂದರೆ ಸಾಕು, ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷದೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಬೇಕು ಎಂದು ಹವಣಿಸುತ್ತದೆ. ಯಾರ ಸಿಎಂ ಕನಸು ಈಡೇರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios