ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ಯಾರಿಗೆ ಅಧಿಕಾರ ಅನ್ನೋ ಕುತೂಹಲ ಮನೆ ಮಾಡಿದೆ. ಇದರ ನಡುವೆ ಕಳೆದ 38 ವರ್ಷಗಳಿಂದ ಕರ್ನಾಟಕದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಬಿಜೆಪಿ ಮುರಿಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಹಾಗಾದರೆ 38 ವರ್ಷಗಳ ಸಂಪ್ರದಾಯವೇನು?
ಬೆಂಗಳೂರು(ಮಾ.30): ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಪ್ರಚಾರದ ಭರಾಟೆ, ಜಾತಿ ಲೆಕ್ಕಾಚಾರ ಸೇರಿದಂತೆ ಹಲವು ಸಮೀಕರಣಗಳು ನಡೆಯುತ್ತಿದೆ. ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್, ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದಾರೆ. ಮೇ.10ಕ್ಕೆ ಮತದಾನ ನಡೆದರೆ, ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.ಕರ್ನಾಟಕದ ಚುನಾವಣಾ ಸಮೀಕ್ಷೆಗಳು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಯಾರಿಗೆ ಗೆಲುವು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಕಳೆದ 38 ವರ್ಷಗಳಿಂದ ಕರ್ನಾಟಕದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಬ್ರೇಕ್ ಬೀಳುತ್ತಾ? ಅನ್ನೋ ಚರ್ಚೆ ಶುರುವಾಗಿದೆ. ಹೌದು, 1989 ರಿಂದ ಇಲ್ಲೀವರೆಗೆ ಕರ್ನಾಟಕದಲ್ಲಿ ಸತತ 2 ಬಾರಿ ಒಂದು ಪಕ್ಷ ಆರಿಸಿ ಬಂದು ಅಧಿಕಾರಿ ನಡೆಸಿಲ್ಲ. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಾರ್ಟಿ ಸತತ 2 ಬಾರಿ ಅಧಿಕಾರ ನಡೆಸಿತ್ತು. ಇದಾದ ಬಳಿಕ ಎಲ್ಲಾ ಸರ್ಕಾರ ಮರು ಆಯ್ಕೆಯಾಗಿಲ್ಲ.
ಕಳೆದ 38 ವರ್ಷಗಳಿಂದ ಕರ್ನಾಟಕದ ಜನತೆ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಿಸಿದ್ದಾರೆ. ಕೆಲವು ಬಾರಿ ತಿಂಗಳುಗಳ ಅಂತರದಲ್ಲಿ ಸರ್ಕಾರ ಬಿದ್ದು ಹೊಸ ಸರ್ಕಾರ ರಚನೆಯಾಗಿದೆ. 1983ರಲ್ಲಿ ಜನತಾ ಪಾರ್ಟಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಇಷ್ಟೇ ಅಲ್ಲ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಸರ್ಕಾರ ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ 1984ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿ ತೀವ್ರ ಹಿನ್ನಡೆ ಅನುಭವಿಸಿತು. ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸಿದರು.
ವರುಣಾದಲ್ಲಿ ಸಿದ್ದರಾಮಯ್ಯ ಕೈಹಿಡೀತಾರಾ ಜನ, ಜಾತಿ ಲೆಕ್ಕಾಚಾರದಲ್ಲಿ ಅಡಗಿದೆ ರಹಸ್ಯ!
ಲೋಕಸಭಾ ಸೋಲಿನ ಬಳಿಕ ವಿಧಾನಸಭೆ ವಿಸರ್ಜಿಸಿ ರಾಮಕೃಷ್ಣ ಹೆಗಡೆ ಕೆಲ ತಿಂಗಳಲ್ಲಿ ಕರ್ನಾಟಕದಲ್ಲಿ ಮತ್ತೆ ಚುನಾವಣೆ ಎದುರಿಸಿದರು. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಾರ್ಟಿ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೇರಿತ್ತು. 139 ಸ್ಥಾನ ಗೆದ್ದು ಹೊಸ ದಾಖಲೆ ಬರೆಯಿತು. 1983ರಲ್ಲಿ ಜನತಾ ಪಾರ್ಟಿ 95 ಸ್ಥಾನ ಗೆದ್ದಿತ್ತು. ಬಿಜೆಪಿ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಬೆಂಬಲದೊಂದಿಗೆ ಜನತಾ ಪಾರ್ಟಿ ಸರ್ಕಾರ ರಚಿಸಿತ್ತು. ಆದರೆ ಎರಡನೇ ಬಾರಿ 139 ಸ್ಥಾನದ ಮೂಲಕ ಅಧಿಕಾರಕ್ಕೇರಿತು.
ಆದರೆ ಎರಡೇ ಬಾರಿ ಅಧಿಕಾರ ನಡೆಸಿದ ಜನತಾ ಪಾರ್ಟಿ ಮೂರು ಹೋಳಾಯಿತು. ಇದರ ಪರಿಣಾಮ ನೇರವಾಗಿ ಕಾಂಗ್ರೆಸ್ ಪಡೆದುಕೊಂಡಿತು. 1989 ರಲ್ಲಿ ವಿರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿತು. ಬಳಿಕ ಪಾಟೀಲ್ ಆರೋಗ್ಯ ಸಮಸ್ಯೆಯಿಂದ ವೀರಪ್ಪಮೊಯಿಲಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟರು. ಆದರೆ 1989ರಿಂದ ಇಲ್ಲೀವರಗೆ ಕರ್ನಾಟಕದಲ್ಲಿ ಪ್ರತಿ 5 ವರ್ಷದ ಬಳಿಕ ಹೊಸ ಸರ್ಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ಇದೀಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 38 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.
ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ, ಏ.8ಕ್ಕೆ ಪ್ರಕಟಿಸಲು ಮುಂದಾದ ಹೈಕಮಾಂಡ್!
