ಜೆಡಿಎಸ್ ಬಾಗಿಲು ಮುಚ್ಚುವ ಮಾತಾಡಿ ಎಚ್‌ಡಿಕೆ ಶಪಥ
- ರಾಜ್ಯದಲ್ಲಿ ರೈತರ ಸಾಲಮನ್ನಾ ಇನ್ನೂ ಮುಂದೆ ಯಾರು ಮಾಡುವುದಿಲ್ಲ
- ಒಂದು ವೇಳೆ ನನಗೆ 5 ವರ್ಷ ಅಧಿಕಾರ ಕೊಟ್ರೆ ಯಾವ ರೈತನೂ ಒಂದು ರು. ಸಾಲ ಮಾಡಲು ಬಿಡುವುದಿಲ್ಲ
ದೇವನಹಳ್ಳಿ (ನ.08): ರಾಜ್ಯದಲ್ಲಿ (Karnataka) ರೈತರ ಸಾಲಮನ್ನಾ (Farme loan) ಇನ್ನೂ ಮುಂದೆ ಯಾರು ಮಾಡುವುದಿಲ್ಲ. ಒಂದು ವೇಳೆ ನನಗೆ 5 ವರ್ಷ ಅಧಿಕಾರ ಕೊಟ್ರೆ ಯಾವ ರೈತನೂ (Farmer) ಒಂದು ರು. ಸಾಲ ಮಾಡಲು ಬಿಡುವುದಿಲ್ಲ. ಒಂದು ವೇಳೆ ಅದನ್ನು ನನಗೆ ಮಾಡಲಾಗದಿದ್ದರೆ ಜೆಡಿಎಸ್ (JDS) ಬಾಗಿಲು ಮುಚ್ಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದಾರೆ.
ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ (Devanahalli) ನಡೆದ ಜೆಡಿಎಸ್ (JDS) ಕಾರ್ಯಕರ್ತರ ಸಮಾವೇಶದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇನ್ನು ಮುಂದೆ ಯಾರೂ ಸಾಲಮನ್ನಾ ಮಾಡುವುದಿಲ್ಲ. ಮಾಡಿದರೂ ಉಪಯೋಗಕ್ಕೆ ಬರುವುದಿಲ್ಲ. ನಾನು 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆನಲ್ಲಾ? ಅದನ್ನು ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗಳಿಗೆ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ನಾನು ಸಹ 25 ಹಸುಗಳನ್ನ (cow) ಸಾಕಾಣಿಕೆ ಮಾಡಿ ಹೈನುಗಾರಿಕೆಯ ಕಷ್ಟ ಏನು ಎಂದು ತಿಳಿದುಕೊಂಡಿದ್ದೇನೆ. ನನಗೆ ಐದು ವರ್ಷ ಸರ್ಕಾರ ಕೊಟ್ಟರೆ. ಯಾವುದೇ ರೈತ ಒಂದು ರುಪಾಯಿ ಸಾಲ (loan) ಮಾಡಲು ಬಿಡುವುದಿಲ್ಲ. ಒಂದು ವೇಳೆ ನಾನು ಅದನ್ನ ಮಾಡದಿದ್ರೆ ಜೆಡಿಎಸ್ ಬಾಗಿಲು ಮುಚ್ಚಿಸುತ್ತೇನೆ. ಇನ್ನೂ ಮುಂದಿನ ಒಂದು ವರ್ಷ ಒಮ್ಮೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗ್ತೀನಿ. ಇದು ನನ್ನ ಕೊನೆಯ ಹೋರಾಟ ಎಂದರು ಕುಮಾರಸ್ವಾಮಿ.
ಅಭಿವೃದ್ಧಿ ಬಗ್ಗೆಯಷ್ಟೇ ಮಾತಾಡುವೆ: ಸಿಂದಗಿ ಉಪಚುನಾವಣೆಯಲ್ಲಿ (By Election) ಸೂಟ್‌ಕೇಸ್ ಕೊಟ್ಟಿರುವುದಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. ಆದರೆ ನಾನು ಆ ನೋವನ್ನೆಲ್ಲ ನುಂಗಿಕೊಂಡು ಪ್ರಚಾರ ಮಾಡಿದ್ದೆ. ಯಾರು ಸಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸಿಂದಗಿ ಚುನಾವಣೆ ನಂತರ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಯಾವುದೇ ಪಕ್ಷ, ನಾಯಕನ ಬಗ್ಗೆಯು ಚರ್ಚೆ ಮಾಡುವುದಿಲ್ಲ. ನಾನು ರಾಜ್ಯದ ಬಗ್ಗೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ತಿಳಿಸಿದರು.
ಇನ್ನು ಜೆಡಿಎಸ್ ಎಲ್ಲಿದೆ? ಮುಗಿದೋಗಿದೆ ಎಂದು ಕೆಲವರು ಹೇಳುತ್ತಾರೆ. 2018ರ ಚುನಾವಣೆ ನಂತರ ಕಾಂಗ್ರೆಸ್‌ನವರ (Congress) ಸಹವಾಸ ಮಾಡಿದೆನಲ್ಲ. ಆಗ ಜೆಡಿಎಸ್ (JDS) ಮುಗಿಸುವ ಕಥೆ ಶುರುವಾಗಿತ್ತು. ಆದರೆ ದೇವರ ಮತ್ತು ಜನರ ಆಶೀರ್ವಾದದಿಂದ ಇಂದಿಗೂ ಇದೆ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಇದೇ ವೇಳೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಾಗಿ ಮಾತನಾಡಿದ ಅವರು, ಧರ್ಮಸಿಂಗ್ 20 ತಿಂಗಳು, ಮಲ್ಲಿಕಾರ್ಜುನ್ ಖರ್ಗೆ ಹಲವು ಬಾರಿ ಅಧಿಕಾರದಲ್ಲಿದ್ದರು. ಆದರೆ ಕಲಬುರಗಿ ಮಾತ್ರ ಅಭಿವೃದ್ಧಿಯಾಗಿಲ್ಲ. ಆ ಭಾಗದ ಜನ ಹೇಗೆ ಬದುಕುತ್ತಿದ್ದಾರೋ ಏನೋ ದೇವರೆ ಬಲ್ಲ. ಬೆಂಗಳೂರಿನ ತೆರಿಗೆ ಹಣವನ್ನ ಉತ್ತರ ಕರ್ನಾಟಕದ ಬಡ ಜನರ ಅಭಿವೃದ್ಧಿಗೆ ಅಂತ ಕೊಡ್ತಿದ್ದೀವಿ. ಆದರೆ 100 ರು. ಕೊಟ್ಟರೆ 70 ರು. ಕೆಲಸಾನೂ ಆಗುತ್ತಿಲ್ಲ. ಆದರೂ ಇಲ್ಲಿಗೆ ಬಂದು ಉತ್ತರ ಕರ್ನಾಟಕದ ನಾಯಕರು ನಮಗೆ ಅನ್ಯಾಯ ಆಗ್ತಿದೆ ಅಂತ ಬಾಯಿ ಬಡಿದುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಇದೇ ವೇಳೆ ಪಕ್ಷದ ಮುಖಂಡರಾದ ಸಿ.ಆರ್.ಮನೋಹರ್ ಮತ್ತು ಸಂದೇಶ್ ನಾಗರಾಜ್ ಪಕ್ಷ ಬಿಡುವ ಕುರಿತು ಮಾತನಾಡಲು ಕುಮಾರಸ್ವಾಮಿ ನಿರಾಕರಿಸಿದರು.
ಪಕ್ಷ ಸಂಘಟನೆಗೆ ಬೆಂಗಳೂರಲ್ಲಿ ಸಭೆ
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗಳ ಸಲುವಾಗಿ ಸೋಮವಾರದಿಂದ 8 ದಿನಗಳ ಕಾಲ ಬೆಂಗಳೂರಿನಲ್ಲಿ ಪಕ್ಷ ಸಂಘಟನೆ ಸಭೆ ಮಾಡುತ್ತಿರುವುದಾಗಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಹಾಗೂ ರಾಜ್ಯಮಟ್ಟದ ನಾಯಕರ ಜೊತೆ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಜೆಡಿಎಸ್‌ನಿಂದ ಪರಿಹಾರ ಏನು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆಗಳ ಕುರಿತಾಗಿಯೂ ಚರ್ಚಿಸುತ್ತೇವೆ. ಒಂದು ವಾರದೊಳಗೆ ಅಭ್ಯರ್ಥಿಗಳು ಯಾರು ಎಂಬುದನ್ನ ಅಂತಿಮಗೊಳಿಸುತ್ತೇವೆ ಎಂದರು.